Asianet Suvarna News Asianet Suvarna News

ನಾಳೆಯಿಂದ 4ನೇ ಸುತ್ತಿನ ಪಂಚರತ್ನ ಪಾದಯಾತ್ರೆ: ರೂಟ್‌ನಲ್ಲಿ ಹಾಸನ ಕ್ಷೇತ್ರ ಇಲ್ಲ!

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಸಿದ್ಧತೆ ಕೈಗೊಂಡಿರುವ ಜೆಡಿಎಸ್‌ ಪಕ್ಷದ ನಾಲ್ಕನೇ ಹಂತದ ಪಂಚರತ್ನ ರಥಯಾತ್ರೆಯು ಹಾಸನ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಾಗಲಿದೆ. ಹಾಸನ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಾಗಿದರೂ, ಹಾಸನ ವಿಧಾನಸಭಾ ಕ್ಷೇತ್ರ ಪ್ರವೇಶಿಸದಂತೆ ರಥಯಾತ್ರೆ ಯೋಜಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Karnataka election 2023  4th round of Pancharatna Padayatra from tomorrow bengaluru rav
Author
First Published Mar 7, 2023, 7:09 AM IST

ಬೆಂಗಳೂರು (ಮಾ.7) : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಸಿದ್ಧತೆ ಕೈಗೊಂಡಿರುವ ಜೆಡಿಎಸ್‌ ಪಕ್ಷದ ನಾಲ್ಕನೇ ಹಂತದ ಪಂಚರತ್ನ ರಥಯಾತ್ರೆಯು ಹಾಸನ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಾಗಲಿದೆ. ಹಾಸನ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ಸಾಗಿದರೂ, ಹಾಸನ ವಿಧಾನಸಭಾ ಕ್ಷೇತ್ರ ಪ್ರವೇಶಿಸದಂತೆ ರಥಯಾತ್ರೆ ಯೋಜಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಹಾಸನ ವಿಧಾನಸಭಾ ಕ್ಷೇತ್ರ(Hassan assembly constituency)ದಲ್ಲಿ ಭವಾನಿ ರೇವಣ್ಣ(Bhavani revanna) ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಆಕಾಂಕ್ಷಿಯಾಗಿದ್ದಾರೆ. ಆದರೆ, ಇದಕ್ಕೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಆಕ್ಷೇಪ ವ್ಯಕ್ತಪಡಿಸಿದ್ದು, ಸ್ಥಳೀಯ ನಾಯಕರಿಗೆ ಟಿಕೆಟ್‌ ನೀಡುವ ಚಿಂತನೆಯಲ್ಲಿದ್ದಾರೆ. ಹೀಗಾಗಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಭವಾನಿ ರೇವಣ್ಣ ಅವರು ತಾವೇ ಅಭ್ಯರ್ಥಿ ಎಂದು ಈಗಾಗಲೇ ಬಿಂಬಿಸಿಕೊಂಡಿರುವುದು ತೀವ್ರ ಚರ್ಚೆಗೂ ಗ್ರಾಸವಾಗಿದೆ. ಹಾಸನ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಗಿದರೂ ಹಾಸನ ಕ್ಷೇತ್ರದಲ್ಲಿ ಮಾತ್ರ ಸಂಚರಿಸದಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಡೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಜೆಡಿಎಸ್‌ಗೆ ಹಾಸನ ಟಿಕೆಟ್ ಗೊಂದಲ ಸ್ಪೀಡ್ ಬ್ರೇಕರ್ ಆಗಿದ್ದು ಹೇಗೆ?

ಮಹಿಳಾ ದಿನಾಚರಣೆ(womens day)ಯಾದ ಬುಧವಾರದಿಂದ (ಮಾ.8) ನಾಲ್ಕನೇ ಹಂತದ ಯಾತ್ರೆ ಆರಂಭವಾಗಲಿದೆ. ತುಮಕೂರು, ಹಾಸನ, ಚಿಕ್ಕಮಗಳೂರು, ಮೈಸೂರು, ಬೆಂಗಳೂರು, ಚಾಮರಾಜನಗರ, ಯಾದಗಿರಿ ಜಿಲ್ಲೆಗಳಲ್ಲಿ ಯಾತ್ರೆ ಸಾಗಲಿದೆ. ಬುಧವಾರ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಯಾತ್ರೆ ಸಂಚರಿಸಲಿದೆ. ಮಾ.9 ಮತ್ತು 10ರಂದು ಬೇಲೂರಿನಲ್ಲಿ ಸಭೆಗಳು ಜರುಗಲಿವೆ. ನಂತರ 13ರಂದು ಚನ್ನರಾಯಪಟ್ಟಣ, 14ರಂದು ಅರಸೀಕೆರೆ, 15ರಂದು ಹೊಳೆನರಸೀಪುರ, 16ರಂದು ಅರಕಲಗೂಡು, 17ರಂದು ಸಕಲೇಪುರ ಕ್ಷೇತ್ರದಲ್ಲಿ ಯಾತ್ರೆ ಪ್ರಯಾಣಿಸಲಿದೆ. ಒಂದು ವಾರ ಹಾಸನ ಜಿಲ್ಲೆಯಲ್ಲಿ ಯಾತ್ರೆ ಪ್ರಯಾಣಿಸಿದರೂ ಹಾಸನ ಕ್ಷೇತ್ರಕ್ಕೆ ಮಾತ್ರ ತೆರಳದಿರುವುದರಿಂದ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯ ಮುಖಂಡರಲ್ಲಿ ಟಿಕೆಟ್‌ ಗೊಂದಲ ಮುಂದುವರಿದಿದೆ. ಮೂಲಗಳ ಪ್ರಕಾರ, ಹಾಸನ ಜಿಲ್ಲೆಗೆ ಯಾತ್ರೆ ತೆರಳುವ ಮುನ್ನವೇ ಟಿಕೆಟ್‌ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆಯಾದರೂ ಖಚಿತವಾಗಿಲ್ಲ. ಮಾ.26ರಂದು ಯಾತ್ರೆಯ ಸಮಾರೋಪ ಸಮಾರಂಭವು ಮೈಸೂರಿನಲ್ಲಿ ನಡೆಯಲಿದೆ.

ಸ್ವರೂಪ್‌ ಕೈತಪ್ಪಿದ ಹಾಸನ ಜೆಡಿಎಸ್‌ ಟಿಕೆಟ್: ದೇವೇಗೌಡರ ಅಂಗಳಕ್ಕೆ ಟಿಕೆಟ್‌ ಫೈಟ್‌ ಎಸೆದ ಕುಮಾರಸ್ವಾಮಿ

ಮಾ.9ರಂದು ತಿಪಟೂರಿನಲ್ಲಿ ಒಕ್ಕಲಿಗರ ಸಮಾವೇಶ(Vakkaliga convenction) ಮುಗಿಸಿದ ಬಳಿಕ ಬೇಲೂರಿನ ಹಗರೆಯಿಂದ ರಥಯಾತ್ರೆ ಸಂಚರಿಸಲಿದೆ. ಅಂದು ರಾತ್ರಿ ಅಲ್ಲಿಯೇ ಗ್ರಾಮ ವಾಸ್ತವ್ಯ ಹೂಡುವ ಎಚ್‌.ಡಿ.ಕುಮಾರಸ್ವಾಮಿ, ಬೆಳಗ್ಗೆ ರಥಯಾತ್ರೆ ಮತ್ತು ರಸ್ತೆಬದಿ ಸಭೆಗಳನ್ನು ನಡೆಸಲಿದ್ದಾರೆ. ತದನಂತರ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಾ.12 ರಂದು ಆನೇಕಲ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಯಾತ್ರೆ ಮುಕ್ತಾಯವಾದ ಬಳಿಕ ಮಾ.18ರಂದು ಚಿಕ್ಕಮಗಳೂರು ಜಿಲ್ಲೆ ಕಡೂರು, ಮಾ.19ರಂದು ಮೈಸೂರು ಜಿಲ್ಲೆಯ ಟಿ.ನರಸೀಪುರ, ಮಾ.21ರಂದು ಬೆಂಗಳೂರಿನ ಹೆಬ್ಬಾಳ, ಮಾ.23ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್‌ನಲ್ಲಿ ಯಾತ್ರೆಯು ಸಂಚರಿಸಲಿದೆ

Follow Us:
Download App:
  • android
  • ios