ಬೆಂಗಳೂರು, (ಸೆ.25): ಅವಧಿ ಮುಗಿದ ರಾಜ್ಯದ 5800 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗಾಗಿ ಅನುದಾನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಚುನಾವಣಾ ಆಯೋಗ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ. 

ಈ ಕುರಿತಂತೆ ಪೊಲೀಸ್ ಮಹಾನಿರ್ದೇಶಕರು, ಆರಕ್ಷಕ ಮಹಾನಿರೀಕ್ಷಕರಿಗೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.ಅದು ಈ ಕೆಳಗಿನಂತಿದೆ.

ಆಯೋಗದ ಪತ್ರದಲ್ಲೇನಿದೆ?
ರಾಜ್ಯಾಧ್ಯಂತ 5800 ಗ್ರಾಮಪಂಚಾಯ್ತಿಗಳಿಗೆ 2020ರ ಅಕ್ಟೋಬರ್ - ನವೆಂಬರ್ ತಿಂಗಳಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಉದ್ದೇಶಿಸಿದೆ. ಸದರಿ ಚುನಾವಣೆಗೆ ತಮ್ಮ ಇಲಾಖೆಯ ಸಹಕಾರ ಅಗತ್ಯವಾಗಿರುತ್ತದೆ.

ಗ್ರಾಮ ಪಂಚಾಯತಿ ಚುನಾವಣೆ: ಕಂದಾಯ ಇಲಾಖೆಗೆ ಚುನಾವಣಾ ಆಯೋಗ ಮಹತ್ವದ ಸೂಚನೆ

ರಾಜ್ಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆಗಾಗಿ ಚುನಾವಣೆಗಳನ್ನು ನಡೆಸುವ ಉದ್ದೇಶದಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಹಾಗೂ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರ್ತಿಸಿಕೊಂಡು ಪೊಲೀಸ್ ಸಿಬ್ಬಂದಿಗಳ ನಿರ್ವಹಣೆ ಇತ್ಯಾದಿಗಳ ಬಗ್ಗೆ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆ.

ಪೊಲೀಸ್ ಇಲಾಖೆಯ ವಾಹನ, ಸಿಬ್ಬಂದಿಗಳಿಗೆ ದಿನಭತ್ಯೆ ಮತ್ತು ಪ್ರಯಾಣ ಭತ್ಯೆ ಇತ್ಯಾದಿಗಾಗಿ ಹೆಚ್ಚುವರಿ ಅನುದಾನದ ಬಿಡುಗಡೆ ಕುರಿತು ಪ್ರಸ್ತಾವನೆಯನ್ನು ನೇರವಾಗಿ ಸರ್ಕಾರಕ್ಕೆ ಸಲ್ಲಿಸುವ ಬಗ್ಗೆ ಸೂಕ್ತ ಕ್ರಮ ವಹಿಸಲು ಪತ್ರದಲ್ಲಿ ನಿರ್ದೇಶಿಸಿದ್ದಾರೆ.