ಬೆಂಗಳೂರು(ಮಾ.30): ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಂಪುಟದ ಬಹುತೇಕ ಎಲ್ಲ ಸಚಿವರ ಉಸ್ತುವಾರಿ ಬದಲಾಗಲಿದ್ದು, ಸಚಿವರಿಗೆ ತಾವು ಪ್ರತಿನಿಧಿಸುವ ತವರು ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡುವಂತೆ ಆಡಳಿತಾರೂಢ ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಸಚಿವರು ತಮ್ಮ ಜಿಲ್ಲೆ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳುವ ಮೂಲಕ ರಾಜ್ಯ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುವಂತಾಗಬೇಕು ಎಂಬುದು ಈ ನಿರ್ಧಾರದ ಹಿಂದಿರುವ ವರಿಷ್ಠರ ಆಶಯ. ಅಲ್ಲದೆ, ಬೇರೆ ಜಿಲ್ಲೆಗಳ ಉಸ್ತುವಾರಿ ನೀಡುವುದರಿಂದ ಸಚಿವರು ಅಲ್ಲಿನ ಶಾಸಕರ ವಿಶ್ವಾಸ ಗಳಿಸಿ ಸುಗಮವಾಗಿ ಕೆಲಸ ಮಾಡುವ ಅನಿವಾರ್ಯತೆಯೂ ಸೃಷ್ಟಿಯಾಗಲಿದೆ ಎಂಬ ಉದ್ದೇಶವೂ ಇದೆ ಎನ್ನಲಾಗಿದೆ.

ಇದೆಲ್ಲದರ ಜೊತೆಗೆ ಕೆಲವು ಜಿಲ್ಲೆಗಳಿಂದ ಇಬ್ಬರು ಅಥವಾ ಅದಕ್ಕೂ ಹೆಚ್ಚು ಸಚಿವರಾಗಿದ್ದಾರೆ. ತವರು ಜಿಲ್ಲೆಯ ಉಸ್ತುವಾರಿಗಾಗಿ ಸ್ಪರ್ಧೆಯೂ ಏರ್ಪಡುತ್ತದೆ. ಸಿಗದಿದ್ದಾಗ ಅಸಮಾಧಾನವೂ ಹೊರಹೊಮ್ಮುತ್ತದೆ. ಇದಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ರೇಕ್‌ ಹಾಕುವ ನಿಟ್ಟಿನಲ್ಲಿ ಆಯಾ ಜಿಲ್ಲೆಗಳನ್ನು ಪ್ರತಿನಿಧಿಸುವವರಿಗೆ ಅಲ್ಲಿನ ಉಸ್ತುವಾರಿ ನೀಡದಿರುವುದೇ ಸೂಕ್ತ. ಇದರಿಂದ ಸಾಕಷ್ಟುಗೊಂದಲ ನಿವಾರಣೆಯಾಗುತ್ತದೆ ಎಂಬ ನಿಲುವಿಗೆ ವರಿಷ್ಠರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಹಲವು ಸಚಿವರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಇದು ವರಿಷ್ಠರ ಕಿವಿಗೂ ತಲುಪಿತ್ತು. ಅಂತಿಮವಾಗಿ ಜಿಲ್ಲೆಗಳ ಉಸ್ತುವಾರಿಗಳನ್ನು ಬದಲಾಯಿಸಿ ಅವರು ಪ್ರತಿನಿಧಿಸುವ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಜಿಲ್ಲೆಯ ಜವಾಬ್ದಾರಿ ವಹಿಸುವುದು ಅಗತ್ಯ ಎಂಬುದನ್ನು ವರಿಷ್ಠರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಈ ಸಲಹೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇದೀಗ ಪಾಲಿಸಲು ಮುಂದಾಗಿದ್ದು, ಈ ಸಂಬಂಧ ಒಂದೆರಡು ದಿನಗಳಲ್ಲೇ ಆದೇಶ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಜಗದೀಶ್‌ ಶೆಟ್ಟರ್‌ ಅವರಿಗೆ ಬೆಳಗಾವಿ, ಕೆ.ಎಸ್‌.ಈಶ್ವರಪ್ಪ ಅವರಿಗೆ ಧಾರವಾಡ, ವಿ.ಸೋಮಣ್ಣ ಅವರಿಗೆ ಚಿಕ್ಕಮಗಳೂರು, ಉಮೇಶ್‌ ಕತ್ತಿ ಅವರಿಗೆ ಚಿತ್ರದುರ್ಗ, ಎಸ್‌.ಸುರೇಶ್‌ಕುಮಾರ್‌ ಅವರಿಗೆ ತುಮಕೂರು, ಜೆ.ಸಿ.ಮಾಧುಸ್ವಾಮಿ ಅವರಿಗೆ ಹಾಸನ, ಕೆ.ಗೋಪಾಲಯ್ಯ ಅವರಿಗೆ ಮಂಡ್ಯ, ನಾರಾಯಣಗೌಡ ಅವರಿಗೆ ಚಾಮರಾಜನಗರ, ಆರ್‌.ಶಂಕರ್‌ಗೆ ಕೊಡಗು ಜಿಲ್ಲೆಗಳ ಉಸ್ತುವಾರಿ ಲಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸಂಭಾವ್ಯ ಉಸ್ತುವಾರಿ

ಜಗದೀಶ್‌ ಶೆಟ್ಟರ್‌- ಬೆಳಗಾವಿ

ಉಮೇಶ್‌ ಕತ್ತಿ- ಚಿತ್ರದುರ್ಗ

ಸುರೇಶ್‌ ಕುಮಾರ್‌- ತುಮಕೂರು

ಮಾಧುಸ್ವಾಮಿ- ಹಾಸನ

ಈಶ್ವರಪ್ಪ- ಧಾರವಾಡ

ಶಂಕರ್‌- ಕೊಡಗು

ನಾರಾಯಣಗೌಡ- ಚಾಮರಾಜನಗರ

ಸೋಮಣ್ಣ- ಚಿಕ್ಕಮಗಳೂರು

ಗೋಪಾಲಯ್ಯ- ಮಂಡ್ಯ