ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ನಿರೀಕ್ಷೆಯಂತೆ ಬಾಗಲಕೋಟೆಗೆ ವೀರಣ್ಣ ಚರಂತಿಮಠಗೆ ಟಿಕೆಟ್ ನೀಡಲಾಗಿದ್ದು, ದಾವಣಗೆರೆ ದಕ್ಷಿಣಕ್ಕೆ ಶ್ರೀನಿವಾಸ ದಾಸಕರಿಯಪ್ಪ ಅವರನ್ನ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಬೆಂಗಳೂರು (ಮಾ.21): ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಘೋಷಣೆ ಮಾಡಿರುವ ಬಿಜೆಪಿ, ಬಾಗಲಕೋಟೆ ಕ್ಷೇತ್ರದಿಂದ ನಿರೀಕ್ಷೆಯಂತೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಕಣಕ್ಕೆ ಇಳಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಶ್ರೀನಿವಾಸ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.

ಕಳೆದ ವಾರ ನಡೆದ ಬಿಜೆಪಿಯ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಬಾಗಲಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ನಡೆದಿರಲಿಲ್ಲ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಅವರ ಹೆಸರು ಪ್ರಸ್ತಾಪವಾಗಿದ್ದರೂ ಅಂತಿಮವಾಗಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಮಣೆ ಹಾಕಲಾಯಿತು. ಆದರೆ, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೋರ್ ಕಮಿಟಿ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಬಣಗಳ ನಡುವೆ ಪೈಪೋಟಿ ಆರಂಭವಾಗಿತ್ತು. ಕಳೆದ ಬಾರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲುಂಡಿದ್ದ ಬಿ.ಜಿ.ಅಜಯ್ ಕುಮಾರ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ರೇಣುಕಾಚಾರ್ಯ ಸೇರಿದಂತೆ ಅವರ ಬಣದ ಮುಖಂಡರು ದೆಹಲಿಗೆ ತೆರಳಿ ಲಾಬಿ ನಡೆಸಿದ್ದರೂ ಪ್ರಯೋಜನ ಆಗಲಿಲ್ಲ. ಅಂತಿಮವಾಗಿ ಸಿದ್ದೇಶ್ವರ ಬೆಂಬಲಿಗರೂ ಆಗಿರುವ ಶ್ರೀನಿವಾಸ ಅವರಿಗೆ ಟಿಕೆಟ್ ನೀಡಿದೆ.

ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವೀಧರ ಆಗಿರುವ ಶ್ರೀನಿವಾಸ್ ಅವರು ರಾಜಕೀಯ ಹಿನ್ನೆಲೆಯ ಕುಟುಂಬಕ್ಕೆ ಸೇರಿದವರು. ಅವರ ತಂದೆ ದಾಸಕರಿಯಪ್ಪ ಅವರು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಉಭಯ ಬಣಗಳ ನಡುವೆ ಭಿನ್ನಾಭಿಪ್ರಾಯವೂ ಬಹಿರಂಗವಾಗಿ ನಿವಾರಣೆ ಆದಂತಾಗಿದ್ದು, ಶ್ರೀನಿವಾಸ ಅವರ ಆಯ್ಕೆಯನ್ನು ಸ್ವಾಗತಿಸಿದ್ದಾರೆ.