‘ನಾವೆಲ್ಲಾ ರಾಜಕಾರಣಿಗಳು, ಖಂಡಿತ ರಾಜಕೀಯ ಮಾಡಿಯೇ ಮಾಡುತ್ತೇವೆ. ನಮ್ಮ ಅನುಕೂಲಕ್ಕೆ ಯಾವಾಗ, ಯಾರನ್ನು ಭೇಟಿ ಮಾಡಬೇಕೋ ಮಾಡುತ್ತೇವೆ. ನನ್ನ ಭೇಟಿಗಳ ಮಾಹಿತಿ ನಾನು ಬಹಿರಂಗಪಡಿಸುವುದಿಲ್ಲ. ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದು ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಬೆಂಗಳೂರು : ‘ನಾವೆಲ್ಲಾ ರಾಜಕಾರಣಿಗಳು, ಖಂಡಿತ ರಾಜಕೀಯ ಮಾಡಿಯೇ ಮಾಡುತ್ತೇವೆ. ನಮ್ಮ ಅನುಕೂಲಕ್ಕೆ ಯಾವಾಗ, ಯಾರನ್ನು ಭೇಟಿ ಮಾಡಬೇಕೋ ಮಾಡುತ್ತೇವೆ. ನನ್ನ ಭೇಟಿಗಳ ಮಾಹಿತಿ ನಾನು ಬಹಿರಂಗಪಡಿಸುವುದಿಲ್ಲ. ಪ್ರತಿಯೊಂದಕ್ಕೂ ಕಾಲವೇ ಉತ್ತರ ನೀಡಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾರ್ಮಿಕವಾಗಿ ನುಡಿದಿದ್ದಾರೆ.

ಕಾಲವೇ ಉತ್ತರ ನೀಡುತ್ತದೆ

ಭಾನುವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎಐಸಿಸಿ ವರಿಷ್ಠರನ್ನು ಭೇಟಿ ಮಾಡಿದ್ದೀರಾ ಎಂಬ ಪ್ರಶ್ನೆಗೆ, ‘ಅದನ್ನು ನಾನು ಬಹಿರಂಗಪಡಿಸಲ್ಲ. ನಾನೇಕೆ ಅದನ್ನೆಲ್ಲ ಬಹಿರಂಗಪಡಿಸಲಿ? ಕಾಲವೇ ಉತ್ತರ ನೀಡುತ್ತದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಕಾಲ ಎಲ್ಲದಕ್ಕೂ ತನ್ನ ಉತ್ತರ ನೀಡಲಿದೆ’ ಎಂದು ಹೇಳಿದರು.

ನಾವೆಲ್ಲಾ ರಾಜಕಾರಣಿಗಳು. ನಮ್ಮ ಅನುಕೂಲಕ್ಕೆ ತಕ್ಕಂತೆ ಯಾರನ್ನು ಯಾವಾಗ ಭೇಟಿ ಮಾಡಬೇಕು ಎಂಬುದನ್ನು ನಿರ್ಧರಿಸಿ ಭೇಟಿ ಮಾಡುತ್ತೇವೆ. ಎಲ್ಲರೂ ಅದನ್ನೇ ಮಾಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. ದೆಹಲಿಗೆ ಬರುವಾಗಲೂ ನಾವೆಲ್ಲ ಸರ್ಕಾರದ ಕೆಲಸ, ಪಕ್ಷದ ಕೆಲಸ ಹಾಗೂ ರಾಜಕೀಯಕ್ಕಾಗಿಯೇ ಬರುತ್ತೇವೆ. ನೀವು ಯಾಕೆ ಅದನ್ನು ದೊಡ್ಡದು ಮಾಡುತ್ತೀರಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು.

ಕುತೂಹಲ ಮೂಡಿಸಿದ್ದ ದೆಹಲಿ ಪ್ರವಾಸ:

ಡಿ.ಕೆ.ಶಿವಕುಮಾರ್ ಅವರು ಜ.18 ರಂದು ಭಾನುವಾರ ನಿಗದಿಯಾಗಿದ್ದ ಸ್ವಿಜರ್‌ಲೆಂಡ್ ದಾವೋಸ್‌ ಪ್ರವಾಸ ರದ್ದುಪಡಿಸಿ, ಭಾನುವಾರ ದೆಹಲಿಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ನಡೆದ ಎಂಜಿ-ನರೇಗಾ ಪರ ಪಿಸಿಸಿ ಅಧ್ಯಕ್ಷರ ಸಭೆಯಲ್ಲೂ ಶಿವಕುಮಾರ್‌ ಅವರು ವರ್ಚುಯಲ್‌ ಆಗಿ ಭಾಗವಹಿಸಿದ್ದರು. ಇದನ್ನು ಹೊರತುಪಡಿಸಿ ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿದ್ದರು ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಶುಕ್ರವಾರ ಬೆಳಗ್ಗೆ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್‌ ಅವರು ಸಂಜೆ ರಾಹುಲ್‌ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಅಸ್ಸಾಂ ವೀಕ್ಷಕರ ಸಭೆಯಲ್ಲಿ ಭಾಗವಹಿಸಿದ್ದರು. ಶನಿವಾರ ರಾಹುಲ್‌ಗಾಂಧಿ ಭೇಟಿ ಮಾಡಿ ಸಂಜೆ 5 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ವಾಪಸಾಗಲು ನಿರ್ಧರಿಸಿದ್ದರು. ಆದರೆ ಹಿರಿಯ ಮುಖಂಡ, ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ನಿಧನ ಹಿನ್ನೆಲೆಯಲ್ಲಿ ಶನಿವಾರ ಬೀದರ್‌ಗೆ ಆಗಮಿಸಿ, ಮತ್ತೆ ದೆಹಲಿಗೆ ಮರಳಿದ್ದರು. ಹೀಗಾಗಿ ಹಲವು ಚರ್ಚೆಗಳು ಹುಟ್ಟಿಕೊಂಡಿದ್ದವು.

- ರಾಜಕೀಯಕ್ಕಾಗಿ ದೆಹಲಿಗೆ ಬರುತ್ತೇವೆ, ಯಾರನ್ನು ಭೇಟಿಯಾದೆ ಅಂತ ಹೇಳಲ್ಲ

- ದಾವೋಸ್‌ ಪ್ರವಾಸ ರದ್ದುಗೊಳಿಸಿ ದೆಹಲಿಯಲ್ಲಿರುವ ಡಿಕೆಶಿ । ಭಾರಿ ಕುತೂಹಲ

- ಶುಕ್ರವಾರ ದೆಹಲಿಗೆ ತೆರಳಿದ್ದ ಡಿಕೆಶಿ. ವರಿಷ್ಠ ನಾಯಕರು ನಡೆಸಿದ ಅಸ್ಸಾಂ ವೀಕ್ಷಕರ ಸಭೆಯಲ್ಲಿ ಭಾಗಿ

- ಶನಿವಾರ ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನ ಪಡೆಯಲು ಬೀದರ್‌ಗೆ ಬಂದು ವಾಪಸ್‌ ದೆಹಲಿಗೆ

- ಭಾನುವಾರ ದಾವೋಸ್‌ ಪ್ರವಾಸಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ತೆರಳಬೇಕಿತ್ತು. ಆದರೆ ರದ್ದುಗೊಳಿಸಿದ್ದರು

- ದೆಹಲಿಯಲ್ಲೇ ಉಳಿದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೆ.ಸಿ. ವೇಣುಗೋಪಾಲ್‌ರ ಸಭೆಯಲ್ಲಿ ಭಾಗಿ

- ರಾಜಧಾನಿಯಲ್ಲಿ ಯಾವೆಲ್ಲಾ ನಾಯಕರನ್ನು ಭೇಟಿಯಾದರು ಎಂಬ ಬಗ್ಗೆ ಗುಟ್ಟು ಬಿಟ್ಟುಕೊಡದ ಡಿಸಿಎಂ