ವಿಪಕ್ಷಗಳ ಹುನ್ನಾರಕ್ಕೆ ಬಗ್ಗಲ್ಲ, ಜಗ್ಗಲ್ಲ: ಡಿ.ಕೆ. ಶಿವಕುಮಾರ್
ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಯಾವ ಹುನ್ನಾರಗಳಿಗೂ ಹೆದರುವುದಿಲ್ಲ. ನಮ್ಮ ಶಾಸಕರನ್ನು ಖರೀದಿಸಲು ಬಿಜೆಪಿಗೆ ಸಾಧ್ಯವಿಲ್ಲ. ರಾಜ್ಯಪಾಲರೇ ನಿಮಗೆ ಇನ್ನೂ ಸಾಕಷ್ಟು ಸಮಯವಿದೆ. ಸರ್ಕಾರದ ವಿರುದ್ಧ ಒಳಸಂಚು ಬಿಟ್ಟು ಕೂಡಲೇ ಅನುಮತಿ ಹಿಂಪಡೆಯಿರಿ ಎಂದು ಆಗ್ರಹಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು(ಆ.20): ಪ್ರತಿಪಕ್ಷಗಳ ಯಾವ ಹುನ್ನಾರಗಳಿಗೂ ನಮ್ಮ ಸರ್ಕಾರ ಬಗ್ಗುವುದಿಲ್ಲ, ಜಗ್ಗುವುದಿಲ್ಲ, ಹೆದರುವುದೂ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದೆ ನಾನು ಮಾತ್ರವಲ್ಲ ಇಡೀ ಇಂಡಿಯಾ ಒಕ್ಕೂಟ ಹಾಗೂ ಕಾಂಗ್ರೆಸ್ ಪಕ್ಷವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಖಂಡಿಸಿ ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಬ್ರಿಟಿಷರ ಜತೆ ಕೈಜೋಡಿಸಿದ್ದ ದೇಶದ್ರೋಹಿಗಳಿಂದ ನಮಗೆ ದೇಶಭಕ್ತಿಯ ಪಾಠ: ಡಿ.ಕೆ.ಶಿವಕುಮಾರ್
‘ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುತ್ತದೆ. ಯಾವ ಹುನ್ನಾರಗಳಿಗೂ ಹೆದರುವುದಿಲ್ಲ. ನಮ್ಮ ಶಾಸಕರನ್ನು ಖರೀದಿಸಲು ಬಿಜೆಪಿಗೆ ಸಾಧ್ಯವಿಲ್ಲ. ರಾಜ್ಯಪಾಲರೇ ನಿಮಗೆ ಇನ್ನೂ ಸಾಕಷ್ಟು ಸಮಯವಿದೆ. ಸರ್ಕಾರದ ವಿರುದ್ಧ ಒಳಸಂಚು ಬಿಟ್ಟು ಕೂಡಲೇ ಅನುಮತಿ ಹಿಂಪಡೆಯಿರಿ’ ಎಂದು ಆಗ್ರಹಿಸಿದರು.
ರಾಜ್ಯಪಾಲರೇ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ, ಜನಾರ್ದನ ರೆಡ್ಡಿ ಅವರ ಮೇಲೂ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿ ಕಳಂಕಿತರ ವಿರುದ್ಧ ವಿಚಾರಣೆಗೆ ಅನುಮತಿ ನೀಡಬೇಕು ಎಂದು ಮನವಿ ಮಾಡಿದರೂ ಏಕೆ ಪುರಸ್ಕರಿಸಿಲ್ಲ. ಈಗ ನಿಮ್ಮ ಕಚೇರಿಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಯಾಕೆ ಅವಕಾಶ ನೀಡುತ್ತಿದ್ದೀರಿ ಏಂದು ಪ್ರಶ್ನಿಸಿದರು.
ಸಂವಿಧಾನದ ಮೂಲಕ ರಾಜ್ಯಪಾಲರ ಕುರ್ಚಿಯನ್ನು ಸೃಷ್ಟಿ ಮಾಡಿದ್ದೇ ಕಾಂಗ್ರೆಸ್ ಸರ್ಕಾರ. ನಮ್ಮ ಪಕ್ಷ ಕೊಟ್ಟಿರುವ ಸಂವಿಧಾನದ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಮುಖ್ಯಮಂತ್ರಿಗಳ ವಿರುದ್ಧ ವಿಚಾರಣೆಗೆ ಅವಕಾಶ ನೀಡಿರುವುದು ಹಾಸ್ಯಾಸ್ಪದ. ಐದು ಗ್ಯಾರಂಟಿಗಳ ಯಶಸ್ಸನ್ನು ಸಹಿಸದೆ ಹೊಟ್ಟೆಯುರಿ, ಅಸೂಯೆಯಿಂದ ಷಡ್ಯಂತ್ರ ನಡೆಸಿದ್ದಾರೆ ಎಂದು ದೂರಿದರು.