ತುಂಗಭದ್ರಾ ಸೇರಿ ರಾಜ್ಯದ ಎಲ್ಲಾ ಅಣೆಕಟ್ಟೆಗಳ ಗೇಟುಗಳನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ತುಂಗಭದ್ರಾ ನೀರಿನ ವಿಚಾರವಾಗಿ ಬೆಳಗ್ಗೆ ಸಭೆ ನಡೆಯಿತು.
ಬೆಂಗಳೂರು (ನ.15): ತುಂಗಭದ್ರಾ ಸೇರಿ ರಾಜ್ಯದ ಎಲ್ಲಾ ಅಣೆಕಟ್ಟೆಗಳ ಗೇಟುಗಳನ್ನು ಬದಲಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ತುಂಗಭದ್ರಾ ನೀರಿನ ವಿಚಾರವಾಗಿ ಬೆಳಗ್ಗೆ ಸಭೆ ನಡೆಯಿತು. ಸಭೆಯಲ್ಲಿ ತುಂಗಭದ್ರಾ ಸೇರಿ ಎಲ್ಲಾ ಅಣೆಕಟ್ಟೆಗಳ ಗೇಟುಗಳನ್ನು ಬದಲಾಯಿಸಲು ತೀಮಾನಿಸಲಾಗಿದೆ. ರೈತರು ನಮಗೆ ಒಂದು ಬೆಳೆ ನಷ್ಟವಾಗುತ್ತದೆ ಎಂದು ಹೇಳುತ್ತಿದ್ದರು. ಆಗ ಅವರಿಗೆ ಒಂದು ಬೆಳೆ ಮುಖ್ಯವೋ ಅಥವಾ ಅಣೆಕಟ್ಟು ಮುಖ್ಯವೋ ಎಂದು ಹೇಳಿದೆ. ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡಲು ಪ್ರಯತ್ನಿಸಿದರು.
ರಾಜಕಾರಣ ಮಾಡುವುದಾದರೆ ಇಲ್ಲಿಗೆ ಬರಬೇಡಿ ಎಂದು ಹೇಳಿದೆ. ನನ್ನ ಸ್ಥಾನದಲ್ಲಿ ಕೂತು ಆಲೋಚಿಸಿ ಎಂದಾಗ ಅವರು ಒಪ್ಪಿದರು ಎಂದರು. ಅಣೆಕಟ್ಟಿನಲ್ಲಿ ಹೂಳು ತಂಬಿ 28 ಟಿಎಂಸಿ ನೀರು ನಷ್ಟವಾಗುತ್ತಿದೆ. ಇದಕ್ಕೆ ಪರ್ಯಾಯ ಯೋಜನೆ ರೂಪಿಸುವ ಬಗ್ಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಐದು ಬಾರಿ ಕರೆ ಮಾಡಿ ಸಭೆಗೆ ಸಮಯ ನಿಗದಿ ಮಾಡುವಂತೆ ಕೋರಿದ್ದೇನೆ. ಆದರೆ ಅವರಿಗೆ ಹೆಚ್ಚಿನ ನೀರು ಸಿಗುತ್ತಿದೆ ಎಂದು ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜಲ ಆಯೋಗ ಸ್ಥಾಪನೆ
ರಾಜ್ಯದಲ್ಲಿ ಪ್ರತ್ಯೇಕ ಜಲ ಆಯೋಗ ಸ್ಥಾಪಿಸಲಾಗುವುದು. ನೀರಾವರಿಯಿಂದ ಕುಡಿಯುವ ಉದ್ದೇಶ ಹಾಗೂ ಕೈಗಾರಿಕೆಗಳಿಗೆ ನೀರು ಒದಗಿಸುವ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗದ ಅಗತ್ಯವಿದೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು. ಮೇಕೆದಾಟು ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಹಿಂದೆ ಇರುವ ಶ್ರಮ ನಮಗೆ ಮಾತ್ರ ಗೊತ್ತು. ತಮಿಳುನಾಡು ಪಾಲಿನ 177 ಟಿಎಂಸಿ ನೀರು ಬಿಡುವುದರಲ್ಲಿ ನಮ್ಮ ತಕರಾರಿಲ್ಲ. ಹಿಂದೊಮ್ಮೆ ಮುಖ್ಯನ್ಯಾಯಮೂರ್ತಿಗಳು ನಿಮ್ಮ ಪಾಲಿನ 177 ಟಿಎಂಸಿ ನೀರು ನಿಮಗೆ ಬರುತ್ತಿರುವಾಗ, ಅವರು ಅಣೆಕಟ್ಟು ಕಟ್ಟಲು ಯಾಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಅದು ನನ್ನ ತಲೆಯಲ್ಲಿತ್ತು. ನಾವು ಇದನ್ನೇ ಇಟ್ಟುಕೊಂಡು ನಮ್ಮ ವಾದವನ್ನು ಬಲಿಷ್ಠವಾಗಿ ಮಂಡನೆ ಮಾಡಿದೆವು. ಪರಿಣಾಮ ವಿಶೇಷ ಪೀಠ ರಚನೆಯಾಗಿ ಈ ವಿಚಾರದಲ್ಲಿ ನ್ಯಾಯಾಲಯ ತೀರ್ಮಾನ ಮಾಡಲು ಸಾಧ್ಯವಿಲ್ಲ ಎಂದು ತಮಿಳುನಾಡಿನ ಅರ್ಜಿಯನ್ನು ವಜಾಗೊಳಿಸಿದೆ ಎಂದರು. ಈಗ ನಮ್ಮ ಹೋರಾಟ ಏನಿದ್ದರೂ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇಂದ್ರ ಜಲ ಆಯೋಗ ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಅನುಮತಿ ಕೊಡಿಸಬೇಕು. ನಾನು ಈಗಾಗಲೇ ಮೇಕೆದಾಟು ವಿಭಾಗದ ಕಚೇರಿ ಆರಂಭಿಸಿ, ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯ ಜಮೀನು ನಿಗದಿ ಮಾಡಿದ್ದೇವೆ. ರಾಜಕೀಯದಲ್ಲಿ ಇಚ್ಛಾಶಕ್ತಿ ಇದ್ದರೆ ಇದೆಲ್ಲವೂ ಸಾಧ್ಯ ಎಂದು ಹೇಳಿದರು.
