'ಗೆಲ್ಲುತ್ತೀ..' ಪಂಜುರ್ಲಿ ದೈವ ಹೇಳಿದೆ, ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲ: ರಘುಪತಿ ಭಟ್
ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿಯೇ ಸಿದ್ಧ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಹೇಳಿದ್ದಾರೆ.
ಉಡುಪಿ (ಮೇ.16): ಮೂರು ಬಾರಿ ಶಾಸಕನಾಗಿದ್ದ ತಮಗೆ ಪಕ್ಷದಲ್ಲಿ ಸಿಗಬೇಕಾಗಿದ್ದ ಮನ್ನಣೆ ಗೌರವ ಸಿಕ್ತಿಲ್ಲ. ಆದ್ದರಿಂದ ತಾನು ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿಯೇ ಸಿದ್ಧ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಹೇಳಿದ್ದಾರೆ.
ಅವರು ಇಲ್ಲಿನ ಕರಂಬಳ್ಳಿಯಲ್ಲಿರುವ ತಮ್ಮ ಮನೆಯಲ್ಲಿ ಚುನಾವಣಾ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಟಿಕೆಟ್ ಸಿಗ್ಲಿಲ್ಲ ಅಂತ ಮೇ 20ರ ವರೆಗೆ ಗಲಾಟೆ ಮಾಡ್ತಾನೆ, ನಂತರ ನಾಮಪತ್ರ ಹಿಂದಕ್ಕೆ ಪಡಿತಾನೆ ಎಂದು ಪಕ್ಷದ ನಾಯಕರು ತಿಳಿದುಕೊಂಡಿದ್ದಾರೆ, ಆದರೆ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವುದಿಲ್ಲ. ಗೆದ್ದು ಬಿಜೆಪಿಯ ವಿಧಾನ ಪರಿಷತ್ ಸದಸ್ಯನಾಗುತ್ತೇನೆ ಎಂದರು.
ನಾನೇ ಅಭ್ಯರ್ಥಿ ಎಂಬಂತೆ ಪ್ರಚಾರ ಮಾಡ್ತೇನೆ: ಯಶ್ಪಾಲ್ ಬೆನ್ನಿಗೆ ನಿಂತ ಶಾಸಕ ರಘುಪತಿ ಭಟ್
ವಿಧಾನಸಭಾ ಚುನಾವಣೆಯಲ್ಲಿ ತನಗೆ ಟಿಕೆಟ್ ಸಿಗದಂತೆ ಷಡ್ಯಂತ್ರ ಮಾಡಿದರು, ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಘೋಷಣೆಯ ಸಂದರ್ಭದಲ್ಲಿ ನಾಯಕರು ತಮ್ಮನ್ನು ಕರೆದು ಮಾತನಾಡಿಸಲಿಲ್ಲ. ಟಿಕೆಟ್ ನೀಡದ ಬಗ್ಗೆ ಮನವರಿಕೆ ಮಾಡಲಿಲ್ಲ, ಈಗ ಬಂದು ಸ್ಪರ್ಧಿಸಬೇಡಿ ಎನ್ನುತ್ತಿದ್ದಾರೆ.
ಮೂರು ಬಾರಿ ಶಾಸಕನಾಗಬೇಕಾಗಿದ್ದ ತನ್ನನ್ನು ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯನನ್ನಾಗಿ ಮಾಡಬೇಕು ಎಂದು ಪಕ್ಷದ ನಾಯಕರಿಗೆ ಅನ್ನಿಸ್ಲಿಲ್ಲ, ಬಿಜೆಪಿ ಕಚೇರಿಯಲ್ಲಿದ್ದ ನನ್ನ ಫೋಟೋವನ್ನು ತೆಗೆದು ಹಾಕಿದ್ದಾರೆ, ಬ್ರಹ್ಮಾವರ ಶಾಸಕರ ಕಚೇರಿಯಲ್ಲಿದ್ದ ಫೋಟೋವನ್ನು ತೆಗೆದಿದ್ದಾರೆ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೂ ಬಿಜೆಪಿಯ ಕರಪತ್ರಗಳಲ್ಲಿಯೂ ನನ್ನ ಫೋಟೋ ಹಾಕಿಲ್ಲ.
ನಾನು ಶಾಸಕನಾಗಿದ್ದಾಗ ಮಂಜೂರು ಮಾಡಿದ ಕಾಮಗಾರಿಗಳ ಉದ್ಘಾಟನೆಗೂ ನನ್ನನ್ನು ಕರೆಯುತ್ತಿಲ್ಲ. ಕಾಪು ಕ್ಷೇತ್ರದಲ್ಲಿ ಶಾಸಕ ಗುರ್ಮೆ ಅವರು ಮಾಜಿ ಶಾಸಕ ಲಾಲಾಜಿ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅವರ ಕೈಯಲ್ಲಿ ಉದ್ಘಾಟಿಸುತ್ತಾರೆ. ನಮ್ಮ ಕಾರ್ಯಕರ್ತರು ನನ್ನ ಫೋಟೋ ಹಾಕಿ ಪ್ಲೆಕ್ಸ್ ಹಾಕಿದರೂ ಅದನ್ನು ತೆಗೆಸುತ್ತಾರೆ ಎಂದವರು ಪಕ್ಷದ ನಾಯಕರ ಆರೋಪಗಳ ಸುರಿಮಳೆಗೈದರು.
ಒಂದು ವೇಳೆ ಟಿಕೆಟ್ ನೀಡುವುದಕ್ಕೆ ರಘುಪತಿ ಭಟ್ ಅಯೋಗ್ಯ ಅಂತಾಗಿದ್ದರೇ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿರಿಯರಾದ ಮಂಗಳೂರಿನ ಮೋನಪ್ಪ ಭಂಡಾರಿ ಅಥವಾ ವಿಕಾಸ್ ಪುತ್ತೂರು(Vikas puttur) ಅವರಿಗೆ ನೀಡಬಹುದಿತ್ತಲ್ಲಾ, 40 ವರ್ಷಗಳಿಂದ ಕರಾವಳಿಗೆ ಸಿಗುತ್ತಿದ್ದ ಟಿಕೆಟನ್ನು ಮಲೆನಾಡಿಗೆ ಕೊಟ್ಟು ಅನ್ಯಾಯ ಮಾಡಲಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕರಾವಳಿಯ 3 ಜಿಲ್ಲೆಗಳಲ್ಲಿ ಒಂದಾದರೂ ಮೊಗವೀರರಿಗೆ ಟಿಕೆಟ್ ನೀಡಬೇಕು ಎಂದು ನನಗೆ ಟಿಕೆಟ್ ತಪ್ಪಿಸಲಾಯಿತು. ಆದರೆ ವಿಧಾನ ಪರಿಷತ್ ನಲ್ಲಿ ಬ್ರಾಹ್ಮಣ ಸಮುದಾಯಕ್ಕೆ ನೀಡಲಾಗುತ್ತಿದ್ದ ಟಿಕೆಟನ್ನು ಕೂಡ ತಪ್ಪಿಸಲಾಗಿದೆ ಎಂದರು.
ಈಗ ಪಕ್ಷದಲ್ಲಿ ಸಂಘದಲ್ಲಿ ಟಿಕೆಟ್ ಕೇಳಿದರೇ, ಹೋಗು ಕ್ಷೇತ್ರದಲ್ಲಿ ಕೆಲಸ ಮಾಡು, ಟಿಕೆಟ್ ಕೊಡುವ ಎನ್ನುವ, ನಂತರ ಟಿಕೆಟ್ ಬೇರೆಯವರಿಗೆ ಕೊಡುವ ಸಂಸ್ಕೃತಿ ಬೆಳೆದಿದೆ ಎಂದವರು ಬೇಸರಿಸಿದರು.
ಭಟ್ ಅವರ ತಾಯಿ ಸರಸ್ವತಿ ಬಾರಿತ್ತಾಯ ಅವರು ಬಿಜೆಪಿ ಕಾರ್ಯಕರ್ತರ ಬೆಂಬಲಿತ ಅಭ್ಯರ್ಥಿ ರಘುಪತಿ ಭಟ್ ಅವರ ಚುನಾವಣಾ ಕಾರ್ಯಾಲಯವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಮಾಜಿ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ, ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಕುಮಾರದಾಸ ಹಾಲಾಡಿ, ಸಂಘ ಪರಿವಾರದ ನಾಯಕರಾದ ಶಿವರಾಮ ಉಡುಪ, ಬಾಲಾಜಿ ರಾಘವೇಂದ್ರ ಆಚಾರ್ಯ, ಪಕ್ಷದ ನಾಯಕರಾದ ಕೆ.ಟಿ.ಪೂಜಾರಿ, ಕರಂಬಳ್ಳಿ ಶಂಕರ ಶೆಟ್ಟಿ, ಜಯಕರ ಆಚಾರ್ಯ, ನಿವೃತ್ತ ಉಪನ್ಯಾಸಕ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಮುಂತಾದವರಿದ್ದರು. ಗುಂಡಿಬೈಲು ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ: ಭಾರಿ ಕೊಡುಗೆ
ಗೆಲ್ಲುತ್ತಿ ಎಂದು ಪಂಜುರ್ಲಿ ಹೇಳಿದೆ: ಮಂಗಳವಾರ ರಾತ್ರಿ ರಘುಪತಿ ಭಟ್ಟರ ಮನೆಯಲ್ಲಿ ಪಂಜುರ್ಲಿ ದೈವದ ನೇಮ ನಡೆದಿದ್ದು, ಈ ಸಂದರ್ಭದಲ್ಲಿ ಭಟ್ಟರು ದೈವದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ತನ್ನ ಸ್ಪರ್ಧೆಯ ಬಗ್ಗೆ ಪ್ರಶ್ನೆ ಕೇಳಿದರು, ಅದಕ್ಕೆ ದೈವವು ಚುನಾವಣೆಗೆ ಸ್ಪರ್ಧಿಸು, ನೀನೇ ಗೆಲ್ಲುತ್ತಿ ಎಂದು ಅಭಯ ಕೊಟ್ಟಿದೆ
ಅಭಿಮಾನಿಗಳೊಂದಿಗೆ ನಾಮಪತ್ರ: ರಘುಪತಿ ಭಟ್ಟರು ಗುರುವಾರ ಮೈಸೂರಿನ ಪ್ರಾದೇಶಿಕ ಆಯುಕ್ತ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅದಕ್ಕಾಗಿ ಉಡುಪಿ, ಮಂಗಳೂರು, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನಿಂದ ಅಭಿಮಾನಿಗಳು ತೆರಳುತ್ತಿದ್ದಾರೆ, ಅದಕ್ಕೆ ಬಸ್ಸಿನ ವ್ಯವಸ್ಥೆಗಳನ್ನು ಮಾಡಲಾಗಿದೆ. ನಂತರ ಸಾವಿರಾರು ಅಭಿಮಾನಿಗಳೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.