ವಿಧಾನಸಭೆ ಚುನಾವಣೆ ಟಿಕೆಟ್‌ ಆಯ್ಕೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ, ಮಾ. 17ಕ್ಕೆ ಎಐಸಿಸಿ ಚುನಾವಣಾ ಸಮಿತಿ ಸಭೆ: ಆಕಾಂಕ್ಷಿಗಳ ತೀವ್ರ ಲಾಬಿ

ಬೆಂಗಳೂರು(ಮಾ.14): ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಚೆಂಡು ಹೈಕಮಾಂಡ್‌ ಅಂಗಳಕ್ಕೆ ಬಿದ್ದಿರುವ ಬೆನ್ನಲ್ಲೇ ರಾಜ್ಯ ನಾಯಕರು ಹಾಗೂ ಆಕಾಂಕ್ಷಿಗಳ ದೊಡ್ಡ ದಂಡು ದೆಹಲಿಯತ್ತ ಮುಖ ಮಾಡಿದೆ.

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಮಾಜಿ ಸಚಿವ ಕೃಷ್ಣ ಬೈರೇಗೌಡ, ಸಿಡಬ್ಲ್ಯುಸಿ ಸದಸ್ಯ ಕೆ.ಎಚ್‌.ಮುನಿಯಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಈಗಾಗಲೇ ದೆಹಲಿ ಸೇರಿಕೊಂಡಿದ್ದಾರೆ. ಅಲ್ಲದೆ, ಧರ್ಮಸಿಂಗ್‌ ಪುತ್ರರಾದ ವಿಜಯ್‌ಸಿಂಗ್‌, ಅಜಯ್‌ಸಿಂಗ್‌ (ಸಹೋದರನ ಪರ), ಶಿವಮೊಗ್ಗದ ಸುಂದರೇಶ್‌ ಸೇರಿದಂತೆ 50ಕ್ಕೂ ಹೆಚ್ಚು ಆಕಾಂಕ್ಷಿಗಳು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.

Karnataka election 2023: ಮಾ.17ಕ್ಕೆ ಕಾಂಗ್ರೆಸ್‌ ಮೊದಲ ಪಟ್ಟಿಬಿಡುಗಡೆ: ಸಿದ್ದರಾಮಯ್ಯ

ಟಿಕೆಟ್‌ ಅಂತಿಮಗೊಳಿಸಲು ಮಾ.17ರಂದು ಎಐಸಿಸಿ ಚುನಾವಣಾ ಸಮಿತಿ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಹೀಗೆ ದೆಹಲಿಯತ್ತ ಕಾಂಗ್ರೆಸ್‌ ನಾಯಕರ ದಂಡು ಮುಖಮಾಡಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾ.16ರ ಸಂಜೆ ದೆಹಲಿಗೆ ತೆರಳಿದರೆ, ಮಾ.17ರಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಇದೇ ವೇಳೆ, ಕಾರ್ಯಾಧ್ಯಕ್ಷರು ಸೇರಿದಂತೆ ಹಲವು ನಾಯಕರು ಹಾಗೂ 100ಕ್ಕೂ ಹೆಚ್ಚು ಆಕಾಂಕ್ಷಿಗಳು ದೆಹಲಿಗೆ ದೌಡಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಮೂರು ತಿಂಗಳಿಂದ ಕಾಂಗ್ರೆಸ್‌ನ ಸಂಭಾವ್ಯರ ಪಟ್ಟಿ ಅಂತಿಮಗೊಳಿಸಲು ರಾಜ್ಯ ಮಟ್ಟದಲ್ಲಿ ಹಲವು ಸುತ್ತಿನ ಸಭೆ ನಡೆದಿದ್ದವು. ಕೆಪಿಸಿಸಿ ಚುನಾವಣಾ ಸಮಿತಿ ಸಭೆ, ಸ್ಕ್ರೀನಿಂಗ್‌ ಸಮಿತಿ ಸಭೆ ಸೇರಿದಂತೆ ವಿವಿಧ ಹಂತದ ಸಭೆಗಳ ಬಳಿಕ ಸಂಭಾವ್ಯರ ಪಟ್ಟಿಯನ್ನು ಎಐಸಿಸಿಗೆ ಕಳುಹಿಸಲಾಗಿದ್ದು, ಮಾ.17ರಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಿಇಸಿ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಯಕರ ದೆಹಲಿ ದಂಡಯಾತ್ರೆ ನಡೆಯಲಿದೆ.