ಸಿಎಂ ಮಾತಿಗೂ ಕಿಮ್ಮತ್ತಿಲ್ಲ ಎಂದು ಗುತ್ತಿಗೆದಾರರ ಆರೋಪ, ಕಾಂಗ್ರೆಸ್‌ನಿಂದ ಸರಣಿ ಟ್ವೀಟ್‌, ಸಿಎಂಗೆ ಪ್ರಶ್ನೆಗಳ ಮಳೆ

ಬೆಂಗಳೂರು(ಆ.26):ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಮಾತಿಗೆ ಅಧಿಕಾರಿಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ ಎಂದಾದರೆ ಆಡಳಿತ ಯಾರ ಕೈಯಲ್ಲಿದೆ? ನಿಮಗೂ ಮೀರಿ ಆಳುತ್ತಿರುವ ಅಜ್ಞಾತ ಸಿಎಂ ಯಾರು? ನೀವು ಕೇವಲ ಭ್ರಷ್ಟರ ಹಾಗೂ ಸಂಘ ಪರಿವಾರದ ಕೈಲಾಡುವ ಗೊಂಬೆ ಸಿಎಂ ಮಾತ್ರವೇ ಎಂದು ರಾಜ್ಯ ಕಾಂಗ್ರೆಸ್‌ ವ್ಯಂಗ್ಯವಾಗಿ ಪ್ರಶ್ನಿಸಿದೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿಗಳ ಮಾತಿಗೂ ಕಿಮ್ಮತ್ತಿಲ್ಲ ಎಂದು ಆರೋಪಿಸಿರುವ ಬೆನ್ನಲ್ಲೇ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸರಣಿ ಪ್ರಶ್ನೆಗಳ ಮೂಲಕ ಟೀಕಿಸಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿಗಳ ಮಾತಿಗೇ ಗೌರವವಿಲ್ಲ. ಮುಖ್ಯಮಂತ್ರಿಗಳ ಮಾತನ್ನು ಯಾರೂ ಕೇಳುತ್ತಿಲ್ಲ. ಬೊಮ್ಮಾಯಿ ಅವರೇ, ತಾವು ಕೇವಲ ಭ್ರಷ್ಟರ ಹಾಗೂ ಸಂಘ ಪರಿವಾರದ ಕೈಲಾಡುವ ಕೈಗೊಂಬೆ ಮಾತ್ರವೇ? ಅಧಿಕಾರಿಗಳು ನಿಮ್ಮ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ ಎಂದಾದರೆ ಸರ್ಕಾರ ಯಾರ ಹಿಡಿತದಲ್ಲಿದೆ ಎಂದು ಪ್ರಶ್ನಿಸಿದೆ.

ಕಿರುಕುಳ ಕೊಡೋದಕ್ಕೂ ಒಂದ್ ಮಿತಿ ಇರ್ಬೇಕು: ಸಿಬಿಐ ನೋಟಿಸ್‌ ವಿರುದ್ಧ ಡಿಕೆಶಿ ಕೆಂಡ

ಸಚಿವ ಮುನಿರತ್ನ ಅವರ ವಿರುದ್ಧ ಹಣ ವಸೂಲಿಯ ಆರೋಪ ಇದೇ ಮೊದಲಲ್ಲ. ತೋಟಗಾರಿಕಾ ಇಲಾಖೆಯಲ್ಲೂ ಹಣ ವಸೂಲಿ ಮಾಡಿದ ಆರೋಪದ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಹೋಗಿತ್ತು. ಹಿಂದೆ ಇದೇ ಮುನಿರತ್ನರ ವಿರುದ್ಧ ಅಬ್ಬರಿಸಿ ಬೊಬ್ಬಿರಿದಿದ್ದ ಪ್ರಧಾನಮಂತ್ರಿಗಳು ಈಗ ಮೌನವ್ರತ ಪಾಲಿಸುತ್ತಿರುವುದೇಕೆ? ಪತ್ರಕ್ಕೆ ಪ್ರತಿಕ್ರಿಯೆ ಇಲ್ಲವೇಕೆ? ಎಂದು ಪ್ರಶ್ನೆ ಮಾಡಿದೆ.

ಬಿಜೆಪಿ ಸರ್ಕಾರದಲ್ಲಿ ಕಮಿಷನ್‌ ಕಾಟ ಬಡ ಪೌರ ಕಾರ್ಮಿಕರನ್ನೂ ಬಿಡದಿರುವುದು ಬಿಜೆಪಿಯ ಭ್ರಷ್ಟೋತ್ಸವ ಉತ್ತುಂಗದಲ್ಲಿರುವುದಕ್ಕೆ ನಿದರ್ಶನ. ಪೌರಕಾರ್ಮಿಕರ ವೇತನದಲ್ಲಿ ಶೇ.60ರಷ್ಟುಲೂಟಿ ನಡೆಯುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿರುವುದೇಕೆ? ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಮಿಷನ್‌ ಪರ್ಸೆಂಟೇಜ್‌ ಕೂಡ ಏರಿಕೆಯಾಗುತ್ತಿದೆಯೇ ಎಂದು ತರಾಟೆಗೆ ತೆಗೆದುಕೊಂಡಿದೆ.

ಅಶೋಕ್‌ ವಿರುದ್ಧ ಆರೋಪ:

ಗೋ ರಕ್ಷಕರೆಂದು ಹೇಳಿಕೊಳ್ಳುವ ಸರ್ಕಾರದಿಂದ 35 ಎಕರೆ ಗೋಮಾಳ ಭೂಮಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಜನಸೇವಾ ಟ್ರಸ್ಟ್‌ಗೆ ಬಿಟ್ಟಿಯಾಗಿ ಮಂಜೂರಾಗಿದೆ. ಅಮೂಲ್ಯ ಭೂಮಿಯೆಂದು ತಿರಸ್ಕೃತಗೊಂಡಿದ್ದ ಮಂಜೂರಾತಿ ಯಾರ ಕೈವಾಡದಿಂದ ಮತ್ತೆ ಅನುಮೋದನೆಗೊಂಡಿತು. ಕಂದಾಯ ಸಚಿವ ಆರ್‌.ಅಶೋಕ್‌ ಅವರಿಗೇಕೆ ಇದರಲ್ಲಿ ವಿಶೇಷ ಆಸಕ್ತಿ ಎಂದು ಪರೋಕ್ಷವಾಗಿ ಅಶೋಕ್‌ ಅವರ ಹಸ್ತಕ್ಷೇಪವಿದೆ ಎಂದು ಆರೋಪಿಸಿದೆ.