* ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಶುರುವಾಯ್ತಾ ಪುತ್ರನ ಹಸ್ತಕ್ಷೇಪ?* ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ಸಿಎಂ ಬೊಮ್ಮಾಯಿ ಪುತ್ರ * ಈ ಬಗ್ಗೆ ಸಿಎಂಗೆ ಪ್ರಶ್ನೆ ಮಾಡಿದ ಕರ್ನಾಟಕ ಕಾಂಗ್ರೆಸ್
ಬೆಂಗಳೂರು, (ಆ.14): ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಪುತ್ರ ಬಿವೈ ವಿಜಯೇಂದ್ರ ಹಸ್ತಕ್ಷೇಪದ ಆರೋಪಗಳು ಕೇಳಿಬಂದಿದ್ದವು. ಇದೀಗ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲೂ ಅವರ ಪುತ್ರನ ಹಸ್ತಕ್ಷೇಪ ಶುರುವಾಯ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಹೌದು... ಹೊಸ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ಪಾಲ್ಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸಹ ಸಿಎಂಗೆ ಪ್ರಶ್ನೆ ಮಾಡಿದೆ.
ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ನೀಡುವೆ: ಏಷ್ಯಾನೆಟ್ ಸುವರ್ಣನ್ಯೂಸ್ ಜತೆ ಸಿಎಂ ಮಾತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಜತೆಗೆ ಅವರ ಪುತ್ರ ಸಹ ಪಾಲ್ಗೊಂಡಿರುವ ಫೋಟೋ ಜೊತೆಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಉದ್ಯಮಿಗಳೊಂದಿಗಿನ ಸರ್ಕಾರಿ ಸಭೆಯಲ್ಲಿ ನಿಮ್ಮ ಪುತ್ರನದ್ದೇನು ಪಾತ್ರ ಬಸವರಾಜ ಬೊಮ್ಮಾಯಿ ಅವರೇ..? ಕುಟುಂಬ ರಾಜಕಾರಣದ ಪರಂಪರೆ ಮುಂದುವರೆಸುವ ಇರಾದೆಯೇ..? ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರದಲ್ಲಿ ಬಿ.ವೈ. ವಿಜಯೇಂದ್ರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿದ್ದರು, ಈಗ ತಾವೂ ಅದೇ ದಾರಿಯಲ್ಲಿ ಹೊರಟಿರುವಿರಾ..? ದೃತರಾಷ್ಟ್ರ ಪ್ರೇಮ ಒಳ್ಳೆಯದಲ್ಲ ಎಂದಿದೆ.
ಕಾಂಗ್ರೆಸ್ ಟ್ವೀಟ್ ಮಾಡಿರೋ ಫೋಟೋದಲ್ಲಿ ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ ಮುಜುಮದಾರ್ ಷಾ, ಪ್ರೋ ಅಧ್ಯಕ್ಷ ಅಜಿಮ್ ಪ್ರೇಮ್ಜಿ, ಮೋಹನ್ ದಾಸ್ ಪೈ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರರು ಇದ್ದಾರೆ. ಅವರ ಜೊತೆ ಸಿಎಂ ಬೊಮ್ಮಾಯಿ ಹಾಗೂ ಅವರ ಪುತ್ರ ಸಹ ಇದ್ದಾರೆ.
ಇನ್ನು ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್‌ನ ಈ ಪ್ರಶ್ನೆಗೆ ಏನು ಉತ್ತರ ಕೊಡುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.
