ಮೊಸರು, ಮಜ್ಜಿಗೆ, ಪ್ಯಾಕ್ ಮಾಡಿದ ಆಹಾರದ ಪದಾರ್ಥಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ಹೇರುವ ಮೂಲಕ ನರೇಂದ್ರ ಮೋದಿ ಸರ್ಕಾರ ಬಡವರ ರಕ್ತ ಹೀರುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು (ಜು.19): ಮೊಸರು, ಮಜ್ಜಿಗೆ, ಪ್ಯಾಕ್ ಮಾಡಿದ ಆಹಾರದ ಪದಾರ್ಥಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. ಬಡ ಹಾಗೂ ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳ ಮೇಲೆ ಜಿಎಸ್‌ಟಿ ಹೇರುವ ಮೂಲಕ ನರೇಂದ್ರ ಮೋದಿ ಸರ್ಕಾರ ಬಡವರ ರಕ್ತ ಹೀರುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಜಿಎಸ್‌ಟಿ ಏರಿಕೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸುವುದರಿಂದ ಜನರಿಗೆ ಹೊರೆಯಾಗುವುದಿಲ್ಲ.
ಇದು ವರ್ತಕರಿಗೆ ವಿಧಿಸುವ ಜಿಎಸ್‌ಟಿಯಾಗಿದ್ದು, ಅದನ್ನು ಅವರು ಮರು ನಗದೀಕರಣ ಮಾಡಿಕೊಳ್ಳಬಹುದು. ವರ್ತಕರು ಜಿಎಸ್‌ಟಿ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಗ್ರಾಹಕರ ಮೇಲೆ ಹೊರೆಯಾಗದಂತೆ ಮರು ನಗದೀಕರಣ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ, ಇದು ಏಕಪಕ್ಷೀಯ ನಿರ್ಧಾರವಲ್ಲ. ಜಿಎಸ್‌ಟಿ ಮಂಡಳಿಯ ನಿರ್ಧಾರ ಎಂದು ಸಿ.ಟಿ.ರವಿ ಸಮರ್ಥಿಸಿದ್ದರೆ, ವಿಧಿ ಇಲ್ಲದೆ ಇರುವ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಲೇಬೇಕಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿಯೂ ಆಗಿರುವ ಶಾಸಕ ಕೆ.ಎಸ್.ಈಶ್ವರಪ್ಪ ಪ್ರತಿಪಾದಿಸಿದ್ದಾರೆ.
ಜಿಎಸ್‌ಟಿ ವಿರೋಧಿಸಿ ಎಪಿಎಂಸಿ ಕಾಳುಕಡಿ ಮಾರುಕಟ್ಟೆ ಬಂದ್
ಕಾಂಗ್ರೆಸ್ ನಾಯಕರ ಜಂಟಿ ದಾಳಿ: ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್ ಅವರು ಜಿಎಸ್‌ಟಿ ಹೇರಿಕೆ ಮೂಲಕ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದರ ವಿರುದ್ಧ ಕಿಡಿ ಕಾರಿದರು.
ಸಿದ್ದರಾಮಯ್ಯ ಮಾತನಾಡಿ, ಬೆಲೆ ಏರಿಕೆ, ನಿರುದ್ಯೋಗದಿಂದ ಕಂಗೆಟ್ಟಿರುವ ಜನರ ಸುಲಿಗೆ ಮಾಡುವ ಕ್ರೌರ್ಯ ಫ್ಯಾಸಿಸ್ಟ್ ಮನಸ್ಸುಗಳಿಂದ ಮಾತ್ರ ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಡವರನ್ನು ಉಪವಾಸ ಬೀಳಿಸಿ ಸಾಯಿಸಲು ಹೊರಟಿವೆ. ಕೇಂದ್ರ ಸರ್ಕಾರಕ್ಕೆ ಕಳೆದ 8 ವರ್ಷಗಳಲ್ಲಿ ಕರ್ನಾಟಕ ಒಂದರಿಂದಲೇ 19 ಲಕ್ಷ ಕೋಟಿ, ಕಳೆದ ಒಂದೇ ವರ್ಷ 3 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಈಗಾಗಲೇ ಅಗತ್ಯವಸ್ತುಗಳ ಬೆಲೆ ಯದ್ವಾತದ್ವಾ ಹೆಚ್ಚಳ ಮಾಡಲಾಗಿದೆ. ಇದರಿಂದ ನರಳುತ್ತಿರುವ ಜನರ ಜೀವವನ್ನೇ ಕಳೆಯುವಂತೆ ಜಿಎಸ್‌ಟಿ ಹೆಚ್ಚಳ ಮಾಡಲಾಗಿದೆ. ಇದೇನಾ ಅಚ್ಛೇದಿನ್ ಎಂದು ಪ್ರಶ್ನಿಸಿದರು.
ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಮೇಲೆ ಶೇ.5ರಷ್ಟು ಜಿಎಸ್‌ಟಿ ವಿಧಿಸಿದ್ದಾರೆ. ಅಕ್ಕಿ, ಗೋದಿ, ಬಾರ್ಲಿ, ಓಟ್ಸ್‌ಗೆ 0% ತೆರಿಗೆ ಇತ್ತು, ಅದೀಗ ಶೇ.5ಕ್ಕೆ ಹೆಚ್ಚಾಗಿದೆ. 5,000 ರು.ಗಳ ಆಸ್ಪತ್ರೆ ಕೊಠಡಿಗಳಿಗೂ ಶೇ.5 ಜಿಎಸ್‌ಟಿ ಹಾಕಿದ್ದಾರೆ, 1,000 ರು. ಹೋಟೆಲ್ ಕೊಠಡಿಗಳಿಗೆ ಶೇ.12 ಜಿಎಸ್‌ಟಿ ಹಾಕಿದ್ದಾರೆ. ಬ್ಯಾಂಕ್ ಚೆಕ್ ಪುಸ್ತಕಗಳಿಗೆ 0% ಇಂದ 18%ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್‌ಮರ್ಸಿಬಲ್ ಪಂಪ್ ಹಾಗೂ ಮೋಟಾರ್‌ಗಳಿಗೆ 12% ಇಂದ 18%ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಬರೆಯುವ ಹಾಗೂ ಮುದ್ರಿಸುವ ಇಂಕ್‌ಗಳ ಮೇಲೆ 12% ಇಂದ 18% ತೆರಿಗೆ ಹೆಚ್ಚಳ ಮಾಡಿದ್ದಾರೆ.
ಈ ಎಲ್ಲಾ ಪದಾರ್ಥಗಳು ಬಡ ಮತ್ತು ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳು. ಕಾರ್ಪೋರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಕೆ ಮಾಡಿ ಬಡವರ ಮೇಲೆ ತೆರಿಗೆ ಹೆಚ್ಚು ಮಾಡಿದ್ದಾರೆ. ತನ್ಮೂಲಕ ಬಡವರ ರಕ್ತ ಹೀರಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಆಹಾರಧಾನ್ಯಗಳ ಮೇಲೆ ಜಿಎಸ್‌ಟಿಗೆ ವಿರೋಧ: ಎರಡು ದಿನ ರೈಸ್ ಮಿಲ್ ಬಂದ್
ಜನರೇ ಎಚ್ಚೆತ್ತುಕೊಳ್ಳಿ-ಡಿಕೆಶಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಜಿಎಸ್‌ಟಿ ಏರಿಕೆ ಎಂಬುದು ಪ್ರಧಾನಮಂತ್ರಿ ಅವರ ಕೊಡುಗೆ ಜಿಎಸ್‌ಟಿ. ಜನ ಸಾಮಾನ್ಯರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಬಡವರ ಸುಲಿಗೆಗೆ ಮುಂದಾಗಿದ್ದಾರೆ. ನಾನು ಜಿಎಸ್‌ಟಿ ವಿಚಾರವಾಗಿ ಬೇಕಂತಲೇ ಮಾತನಾಡುತ್ತಿಲ್ಲ. ಜನರಿಗೆ ತಮ್ಮ ಜೇಬಿಗೆ ಕತ್ತರಿ ಬೀಳುತ್ತಿರುವುದು ಗೊತ್ತಾಗಲಿ. ಮೊಸರು, ಮಜ್ಜಿಗೆಗೆ ಎಷ್ಟುಕೊಡುತ್ತಿದ್ದೆ, ಈಗ ಎಷ್ಟುಕೊಡುತ್ತಿದ್ದೇನೆ. ಸರ್ಕಾರ ಹೇಗೆ ನನ್ನನ್ನು ಸುಲಿಗೆ ಮಾಡುತ್ತಿದೆ ಎಂದು ತಿಳಿದು ಅವರೇ ಎಚ್ಚೆತ್ತುಕೊಳ್ಳಲಿ ಎಂದು ಕರೆ ನೀಡಿದರು. ಮಾಜಿ ಸಚಿವ ಯು.ಟಿ. ಖಾದರ್ ಸೇರಿದಂತೆ ಹಲವರು ಹಾಜರಿದ್ದರು.
