ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ.

ತುಮಕೂರು (ಅ.09): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಭಾರತ್‌ ಜೋಡೋ ಯಾತ್ರೆ ನಿಮಿತ್ತ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಚುನಾವಣೆ ವೇಳೆ ಕರ್ನಾಟಕದಲ್ಲಿ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳಬೇಕೋ, ಬೇಡವೋ ಎಂಬುದರ ಬಗ್ಗೆ ರಾಜ್ಯ ನಾಯಕರು ಚರ್ಚಿಸಿ, ನಿರ್ಧಾರ ಕೈಗೊಳ್ಳುತ್ತಾರೆ. ನನ್ನ ಪ್ರಕಾರ ಜೆಡಿಎಸ್‌ ಜತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಕರ್ನಾಟಕದಲ್ಲಿ ಯಾರ ಸಹಾಯವೂ ಇಲ್ಲದೆ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆ ಬಳಿಕವೇ ಕಾಂಗ್ರೆಸ್‌ ಸಿಎಂ ಆಯ್ಕೆ: ರಾಹುಲ್‌ ಗಾಂಧಿ

ಅಧ್ಯಕ್ಷ ಚುನಾವಣೆಗೆ ಬಳ್ಳಾರಿಯಲ್ಲಿ ರಾಹುಲ್‌ ಮತದಾನ: ಅಕ್ಟೋಬರ್‌ 17ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷರ ಚುನಾವಣೆಗೆ ರಾಹುಲ್‌ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್‌ನ ಇತರ 40 ನಾಯಕರು ಬಳ್ಳಾರಿಯಲ್ಲಿ ಸ್ಥಾಪಿಸಲಾಗುವ ಮತದಾನ ಕೇಂದ್ರದಲ್ಲಿ ಮತದಾನ ಮಾಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿ, ಅಂದು ಭಾರತ್‌ ಜೋಡೋ ಯಾತ್ರೆ ಇರುವುದಿಲ್ಲ. ಮತದಾನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಅಂದು ಯಾತ್ರೆಗೆ ವಿಶ್ರಾಂತಿ ನೀಡಲಾಗುವುದು. ಅಲ್ಲದೆ, ಅಂದು ಬಳ್ಳಾರಿಯಲ್ಲಿ ಮತದಾನ ಕೇಂದ್ರ ತೆರೆಯಲಾಗುವುದು. ರಾಹುಲ್‌ ಗಾಂಧಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ 40 ಪದಾಧಿಕಾರಿಗಳು ಈ ಮತದಾನ ಕೇಂದ್ರದಲ್ಲಿಯೇ ಮತದಾನ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ರಾಹುಲ್‌ ಜತೆ ಜೆಡಿಎಸ್‌ ಉಚ್ಚಾಟಿತ ಶಾಸಕ ನಡಿಗೆ: ಪಾದಯಾತ್ರೆ ತುರುವೇಕೆರೆ ತಾಲೂಕಿನ ನಂದಿಕಲ್‌ ಕೆರೆ ಗೇಟ್‌ ಸಮೀಪ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗುಬ್ಬಿ ಜೆಡಿಎಸ್‌ ಉಚ್ಚಾಟಿತ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಿದರು. ಪಾದಯಾತ್ರೆ ನಡುವೆಯೇ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಅವರು ರಾಹುಲ್‌ಗೆ ಪರಿಚಯ ಮಾಡಿಕೊಟ್ಟರು.

ಯಾತ್ರಿಗಳಿಗೆ 5 ಟನ್‌ ಹಣ್ಣು, ಲಾರಿಗಳಲ್ಲಿ ಪಾನೀಯ, ಸೌತೆ: ಯಾತ್ರೆಯಲ್ಲಿ ಪಾಲ್ಗೊಂಡವರಿಗೆ ವಿತರಿಸುವ ಸಲುವಾಗಿ 5 ಟನ್‌ ವಿವಿಧ ರೀತಿಯ ಹಣ್ಣು, 60 ಸಾವಿರ ಮಜ್ಜಿಗೆ ಪ್ಯಾಕೇಟುಗಳು, 1 ಲಾರಿ ತಂಪು ಪಾನೀಯ, 1 ಲಕ್ಷದ 30 ಸಾವಿರ ನೀರಿನ ಬಾಟಲ್‌ಗಳು, 40 ಸಾವಿರ ಬಿಸ್ಕೆಟ್‌ ಪ್ಯಾಕೆಟ್‌ಗಳು, 20 ಸಾವಿರ ಕೇಕ್‌, 1 ಲಾರಿ ಸೌತೆಕಾಯಿ, 3 ಕ್ವಿಂಟಾಲ್‌ ಕೊಬ್ಬರಿ, 50 ಸಾವಿರ ಕಡ್ಲೆಪುರಿ ಪ್ಯಾಕೇಟ್‌, ಚುರುಮುರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಿತರಿಸಲು 22 ಕಡೆಗಳಲ್ಲಿ ಮಳಿಗೆಗಳನ್ನು ತೆರೆಯಲಾಗಿತ್ತು.

ನನ್ನನ್ನು ಅಪ್ರಯೋಜಕ ಎಂದು ಬಿಂಬಿಸಲು ಬಿಜೆಪಿ ಕೋಟಿ, ಕೋಟಿ ಹಣ ಖರ್ಚು ಮಾಡ್ತಿದೆ: ರಾಹುಲ್‌ ಗಾಂಧಿ

ಗಾಂಧಿ ವೇಷಧಾರಿಯಾಗಿ ಕಾಲ್ನಡಿಗೆಗೆ ವ್ಯಕ್ತಿ ಸಾಥ್‌: ಶನಿವಾರ ಬೆಳಗ್ಗೆ ಮಾಯಸಂದ್ರದಿಂದ ಆರಂಭವಾದ ಪಾದಯಾತ್ರೆಯಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟಕಾರ್ಯಕರ್ತರು ಹೆಜ್ಜೆ ಹಾಕಿದರು. ಹಾಗೆಯೇ ಮುತ್ತುರಾಯಪ್ಪ ಎಂಬುವರು ಮಹಾತ್ಮ ಗಾಂಧೀಜಿ ವೇಷಧಾರಿಯಾಗಿ ಪಾಲ್ಗೊಂಡಿದ್ದು ನೋಡುಗರ ಗಮನ ಸೆಳೆಯಿತು. ಈ ಮಧ್ಯೆ, ತುರುವೆಕೆರೆ ಸಮೀಪ ಯಾತ್ರೆ ಬರುತ್ತಿದ್ದಂತೆ ದಲಿತ ಸಂಘಟನೆಯ ಮುಖಂಡರು ರಾಹುಲ್‌ ಅವರನ್ನು ಸ್ವಾಗತಿಸಿ, ಬುದ್ದನ ಮೂರ್ತಿಯನ್ನು ಕಾಣಿಕೆಯಾಗಿ ನೀಡಿದರು. ಅಲ್ಲದೆ, ಅವರ ಜೊತೆ ಹೆಜ್ಜೆ ಹಾಕುತ್ತಾ ಜಿಲ್ಲೆಯಲ್ಲಿ ನಡೆದ ದಲಿತರ ಹತ್ಯಾಕಾಂಡ ಪ್ರಕರಣದ ಬಗ್ಗೆ ವಿವರ ನೀಡಿದರು.