ಬೆಂಗಳೂರು, (ಡಿ.10): ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದು, ಇತ್ತ ಸಭಾಪತಿ ಸ್ಥಾನಕ್ಕಾಗಿ ದೋಸ್ತಿಗಳ ನಡುವೆ ಹಗ್ಗಾಜಗ್ಗಾಟ ಶುರುವಾಗಿದೆ.

ಹಾಲಿ ಹಂಗಾಮಿ ಸಭಾಪತಿಯಾಗಿ ಕೆಲಸ ನಿರ್ವಹಿಸುತ್ತಿರುವ ಬಸವರಾಜ ಹೊರಟ್ಟಿ ಅವರನ್ನು ಮುಂದುವರೆಸಬೇಕೆಂದು ಜೆಡಿಎಸ್ ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿದೆ.ಹಿರಿಯ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

"

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.ದೊಡ್ಡ ಗೌಡರ ನರ್ದೇಶನದಂತೆ ಬಸವರಾಜ ಹೊರಟ್ಟಿ ನಾಳೆ (ಮಂಗಳವಾರ) ನಾಮಪತ್ರ ಸಲ್ಲಿಸುವುದು ಗ್ಯಾರಂಟಿ ಎಂದು ಮೂಲಗಳು ತಿಳಿಸಿವೆ.

ಇತ್ತ ಸಭಾಪತಿ ಸ್ಥಾನ ತಮ್ಮ ಆಪ್ತರಾದ ಎಸ್.ಆರ್. ಪಾಟೀಲ್ ಅವರಿಗೆ ದಕ್ಕಬೇಕು ಎಂದು ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಪಟ್ಟು ಹಿಡಿದಿದ್ದಾರೆ.ಆದರೆ ಈ ಬೇಡಿಕೆಯನ್ನು ಒಪ್ಪದ ಮುಖ್ಯಮಂತ್ರಿ ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಅವರನ್ನು ಮುಂದುವರೆಸುವುದು ಸೂಕ್ತ ಎಂದು ಸಮನ್ವಯ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 12 ರಂದು ಚುನಾವಣೆ ನಡೆಯಲಿದ್ದು, ಬುಧವಾರ ಮಧ್ಯಾಹ್ನ 12 ಗಂಟೆಯೊಳಗಾಗಿ ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸುವವರ ಸೂಚನಾ ಪತ್ರವನ್ನು ಸಲ್ಲಿಸಬೇಕಾಗಿದೆ.ಅಂತಿಮ ಕ್ಷಣದಲ್ಲಿ ದೋಸ್ತಿಗಳಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ ಎನ್ನವುದನ್ನು ಕಾದುನೋಡಬೇಕಿದೆ.