ಬೆಂಗಳೂರು, (ಡಿ.22): ಅಂತೂ ಇಂತೂ ರಾಜ್ಯ ಮೈತ್ರಿ ಸರ್ಕಾರದ ಮಿತ್ರ ಪಕ್ಷವಾದ ಕಾಂಗ್ರೆಸ್ ಅಳೆದು ತೂಗಿ ಸಂಪುಟ ವಿಸ್ತರಣೆ ಮಾಡಿದೆ. 

ಇಬ್ಬರು ಹಾಲಿ ಸಚಿವರಿಗೆ ಕೊಕೆ ಕೊಟ್ಟ ಒಟ್ಟು 8 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದು, ನೂತನ ಸಚಿವರು ಇಂದು [ಶನಿವಾರ] ಪ್ರಮಾಣ ವಚನ ಸ್ವೀಕರಿಸಿದರು.

ಆದ್ರೆ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹಲವು ಶಾಸಕರಿಗೆ ನಿರಾಸೆಯಾಗಿದ್ದು, ಮಂತ್ರಿಗಿರಿ ಕೈತಪ್ಪಿರೋ ಶಾಸಕರು ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಅಂದು ಬೇಕಾದವರು ಇಂದು ಬೇಡಾದರು..ಯೂಸ್ ಆ್ಯಂಡ್‌ ಥ್ರೋ ಪಾಲಿಟಿಕ್ಸ್!

ಇನ್ನು ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಅರಣ್ಯ ಖಾತೆ ಸಚಿವ ಆರ್.ಶಂಕರ್ ಅವರನ್ನು ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕಾರಣ ನೀಡಿದ್ದಾರೆ. 

ಈ ಚೆಂದಕ್ಕೆ ನಿಮ್ಗೆ ಮಿನಿಸ್ಟರ್ ಗಿರಿ ಬೇಕಾ ಜಾರಕಿಹೊಳಿ ಸಾಹೇಬ್ರೇ..?

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಂಪುಟದಿಂದ ಇಬ್ಬರು ಸಚಿವರನ್ನು ಕೈಬಿಟ್ಟಿದ್ದಕ್ಕೆ ಕಾರಣ ನೀಡಿದರು. ಅಲ್ಲದೆ ಕೈಬಿಟ್ಟ ಕ್ರಮವನ್ನ ಸಮರ್ಥಿಸಿಕೊಂಡರು.

ಕಳೆದ ಮೂರು ತಿಂಗಳಿಂದ ರಮೇಶ್ ಜಾರಕಿಹೊಳಿ ಅವರು ಸಂಪುಟ ಸಭೆಗಳಿಗೆ ಹಾಗೂ ಶಾಸಕಾಂಗ ಪಕ್ಷದ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ . ಅಲ್ಲದೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸಹ ನೆನಗುದಿಗೆ ಬಿದ್ದಿದ್ದವು. ಈ ಅಶಿಸ್ತಿನ ನಡೆಯಿಂದಾಗಿಯೇ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ರಮೇಶ್ ಜಾರಕಿಹೊಳಿ ಔಟ್ ..? ಮುಂದಿನ ನಡೆ ಏನು..?

ಅದರಂತೆ ಅರಣ್ಯ ಖಾತೆಯಿಂದ ಆರ್.ಶಂಕರ್‌ ಅವರನ್ನು ತೆಗೆದಿದ್ದಕ್ಕೂ ಉತ್ತರ ನೀಡಿದ ದಿನೇಶ್, ಇಲಾಖೆಯ ಕೆಲಸಗಳು ತೃಪ್ತಿ ನೀಡಿಲ್ಲ ಹಾಗಾಗಿ ಅವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.