ಕೊಡಗಿನ ಎರಡು ಕ್ಷೇತ್ರಕ್ಕೆ ಅಳೆದು ತೂಗಿ ಟಿಕೆಟ್ ನೀಡಿದ ಕಾಂಗ್ರೆಸ್ ಗೆ ಬಂಡಾಯದ ಬಿಸಿ!
ಕೊಡಗಿನ ಎರಡು ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಅಳೆದು ತೂಗಿ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ವಿರಾಜಪೇಟೆ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಇದರ ವಿರುದ್ಧ ಈಗ ಟಿಕೆಟ್ ಕೈ ತಪ್ಪಿದವರು ಬಂಡಾಯವೆದ್ದಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಏ.7): ಕೊಡಗಿನ ಎರಡು ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಅಳೆದು ತೂಗಿ ಎಲ್ಲಾ ಲೆಕ್ಕಾಚಾರಗಳನ್ನು ಹಾಕಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಎ.ಎಸ್ ಪೊನ್ನಣ್ಣ ಅವರಿಗೆ ಟಿಕೆಟ್ ನೀಡಿದ್ದರೆ, ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಡಾ. ಮಂತರ್ ಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಆದರೆ ಮಂತರ್ ಗೌಡ ಅವರಿಗೆ ಟಿಕೆಟ್ ನೀಡುತ್ತಿದ್ದಂತೆ ಟಿಕೆಟ್ ತಪ್ಪಿರುವ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಲು ಸಿದ್ಧವಾಗಿದ್ದರೆ, ಕಾಂಗ್ರೆಸ್ ಮುಖಂಡರು ನಮ್ಮನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮಡಿಕೇರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಒಕ್ಕಲಿಗ ಸಮುದಾಯದ ಹರಪಳ್ಳಿ ರವೀಂದ್ರ ಅವರು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ತಾಲ್ಲೂಕಿನ ಎರಡು ಕಡೆಗಳಲ್ಲಿ ನೂರಾರು ಕಾರ್ಯಕರ್ತರ ಸಭೆ ನಡೆಸಲಿದ್ದೇನೆ. ಗೆಲ್ಲುವುದಕ್ಕೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಪ್ಲಾನ್ ಮಾಡಲಿದ್ದೇವೆ. ಹಾಗೆಯೇ ಇದೇ 17 ರಂದು ನಾಮಪತ್ರ ಸಲ್ಲಿಸುವುದಕ್ಕೂ ಸಿದ್ಧತೆ ನಡೆಸಿದ್ದೇವೆ ಎಂದು ಹರಪಳ್ಳಿ ರವೀಂದ್ರ ಸ್ಪಷ್ಟಪಡಿಸಿದ್ದಾರೆ.
ಆ ಮೂಲಕ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದಾರೆ. ಇತ್ತ ಶುಕ್ರವಾರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಅಭ್ಯರ್ಥಿಗಳು, ಕೈತಪ್ಪಿದ ಟಿಕೆಟ್ ಆಕಾಂಕ್ಷಿಗಳು, ಜಿಲ್ಲಾ ಮುಖಂಡರು ಸೇರಿದಂತೆ ಪ್ರಮುಖರ ಸಭೆಯನ್ನು ಕಾಂಗ್ರೆಸ್ ನಡೆಸಿದೆ. ಆ ಸಭೆಗೂ ಜಿವಿಜಯ ಆಗಲಿ, ಹರಪಳ್ಳಿ ರವೀಂದ್ರ ಆಗಲಿ ಹಾಜರಾಗದೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮತ್ತೊಂದೆಡೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಹರಪಳ್ಳಿ ರವೀಂದ್ರ ಅವರು ನಾನು ಒಕ್ಕಲಿಗರ ಸಂಘದ ಚುನಾವಣೆಗೆ ಸ್ಪರ್ಧಿಸಿ ನಿರ್ದೇಶಕನಾಗಿ ಗೆಲ್ಲುತ್ತಿದ್ದಂತೆ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಇಬ್ಬರು ಮಡಿಕೇರಿ ಕ್ಷೇತ್ರಕ್ಕೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಯಾಕೆ ಹೀಗೆ ಹೊರಗಿನವರಿಗೆ ಟಿಕೆಟ್ ನೀಡದ್ದಾರೋ ಗೊತ್ತಿಲ್ಲ ಎಂದಿದ್ದಾರೆ.
ಮತ್ತೊಂದೆಡೆ ಒಂದು ವರ್ಷದ ಹಿಂದೆ ಜೆಡಿಎಸ್ ಬಿಟ್ಟು ಬಿ.ಎ. ಜಿವಿಜಯ ಕಾಂಗ್ರೆಸ್ ಗೆ ಸೇರುವಾಗಲೇ ಟಿಕೆಟ್ ಖಾತರಿ ಮಾಡಿಕೊಂಡೇ ಬಂದಿದ್ದರು. ಆದರೂ ಅವರಿಗೆ ಟಿಕೆಟ್ ತಪ್ಪಿದೆ. ಟಿಕೆಟ್ ತಪ್ಪುವುದು ಗೊತ್ತಾಗುತ್ತಿದ್ದಂತೆ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಜಿವಿಜಯ ದೇಶದಲ್ಲಿ ಆರ್ಎಸ್ಎಸ್, ಬಿಜೆಪಿಯಿಂದಾಗಿ ಪ್ರಜಾಪ್ರಭುತ್ವ ಇಲ್ಲದಂತೆ ಆಗಿದೆ. ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಕಾಂಗ್ರೆಸ್ ಬರಬೇಕು. ಅದೇ ಉದ್ದೇಶದಿಂದಲೇ ನಾನು ಕಾಂಗ್ರೆಸ್ ಸೇರಿದೆ. ಆದರೆ ನನಗೆ ಟಿಕೆಟ್ ಸಿಗುತ್ತಿಲ್ಲ ಎನ್ನುವುದು ಗೊತ್ತಾಗಿದೆ. ನನಗೆ ಟಿಕೆಟ್ ಸಿಗದಿದ್ದರೆ ಪರವಾಗಿಲ್ಲ. ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ಬದಲಾಗಿ, ಗೆಲ್ಲುವ ಸಾಮರ್ಥ್ಯ ಇರುವ ಸ್ಥಳೀಯರಿಗೆ ಟಿಕೆಟ್ ಕೊಡಿ. 2023ರ ಚುನಾವಣೆ ಬಳಿಕ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸಿದ್ದರಾಮಯ್ಯಗೆ ಪತ್ರ ಬರೆದು ಮೌನವಾಗಿದ್ದಾರೆ. ಹಾಗಾದರೆ ಹೊರಗಿನವರಿಗೆ ಟಿಕೆಟ್ ಕೊಟ್ಟಿರುವಾಗ ಜಿವಿಜಯ ನಿಜಕ್ಕೂ ಮಂತರ್ ಗೌಡ ಅವರಿಗೆ ಬೆಂಬಲ ನೀಡುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.
ಕಾಂಗ್ರೆಸ್ ಕೈ ಕೊಟ್ಟಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ಟಿಕೆಟ್ ಆಕಾಂಕ್ಷಿಗಳು, ಭುಗಿಲೆದ್ದ ಆಕ್ರೋಶ!
ಕಳೆದ ವರ್ಷ ನಡೆದ ಒಕ್ಕಲಿಗರ ಸಮುದಾಯ ಚುನಾವಣೆಯಲ್ಲಿ ಚಲಾವಣೆಯಾದ 12 ಸಾವಿರ ಮತಗಳ ಪೈಕಿ 9500 ಮತಗಳನ್ನು ಪಡೆದಿದ್ದ ಹರಪಳ್ಳಿ ರವೀಂದ್ರ ಅವರು ಸ್ವತಂತ್ರವಾಗಿ ಸ್ಪರ್ಧಿಸಿದರೆ, ಮಂತರ್ ಗೌಡಗೆ ಸೋಲು ಕಟ್ಟಿಟ್ಟ ಬುತ್ತಿ. ಇನ್ನು ಹತ್ತಾರು ಚುನಾವಣೆಗಳನ್ನು ಎದುರಿಸಿರುವ ಜಿವಿಜಯ ಅವರು ಕೂಡ ಅವರದೇ ಆದ ಐದಾರು ಸಾವಿರ ಮತಗಳನ್ನು ಹೊಂದಿದ್ದು ಇವರಿಬ್ಬರ ಬೆಂಬಲ ಇಲ್ಲದೆ ಮಂತರ್ ಗೌಡ ಅವರ ಗೆಲುವು ಸಾಧ್ಯವೇ ಇಲ್ಲ. ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಮಂತರ್ ಗೌಡ ಅವರ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಂಡಾಯದ ಬಿಸಿ ಎದುರಾಗಿದೆ. ಅದೆಲ್ಲವು ಒಂದು ಪಕ್ಷದಲ್ಲಿ ಇರುವುದು ಸಹಜ. ಅದೆಲ್ಲವನ್ನು ಕಾಂಗ್ರೆಸ್ ಶಮನ ಮಾಡುತ್ತೆ ಎಂದು ಕೊಡಗು ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿದ್ದಾರೆ. ಈ ಬಂಡಾಯವೇ ಕಾಂಗ್ರೆಸ್ ಸೋಲಿಗೆ ಕಾರಣವಾಗುತ್ತಾ, ಇಲ್ಲ ಎಲ್ಲವನ್ನು ಶಮನ ಮಾಡಿ ಗೆಲುವಿಗೆ ಶ್ರಮಿಸುತ್ತಾರಾ ಕಾದು ನೋಡಬೇಕಾಗಿದೆ.
ಬಿಜೆಪಿಗೆ ಸೆಡ್ಡು ಹೊಡೆಯುತ್ತಾರಾ ಕೋಳಿವಾಡ ಪುತ್ರ?: ಹಾಲಿ ಶಾಸಕ ಅರುಣಕುಮಾರ್‌ಗೆ ಟಿಕೆಟ್
ಇನ್ನು ಏಪ್ರಿಲ್ 13 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ. ಅಲ್ಲದೆ, ನಾಮಪತ್ರ ಸಲ್ಲಿಕೆ ಆರಂಭವೂ ಏಪ್ರಿಲ್ 13 ರಂದೇ ಆರಂಭವಾಗಲಿದೆ. ಇನ್ನು, ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.