‘ಮತಗಳ್ಳತನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂದಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ದಾಖಲೆಯ 1.12 ಕೋಟಿ ಸಹಿ ಸಂಗ್ರಹ ಮಾಡಲಾಗಿದೆ. ಇದರ ಮೂಲಕ ಚುನಾವಣಾ ಆಯೋಗದ ವಿರುದ್ಧ ರಾಜ್ಯದ ಜನರ ಆಕ್ರೋಶ ಬಯಲಾಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

ಬೆಂಗಳೂರು : ‘ಮತಗಳ್ಳತನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ದೇಶದಲ್ಲಿಯೇ ಮುಂದಿದ್ದು, ಜನರಲ್ಲಿ ಜಾಗೃತಿ ಮೂಡಿಸಲು ದಾಖಲೆಯ 1.12 ಕೋಟಿ ಸಹಿ ಸಂಗ್ರಹ ಮಾಡಲಾಗಿದೆ. ಇದರ ಮೂಲಕ ಚುನಾವಣಾ ಆಯೋಗದ ವಿರುದ್ಧ ರಾಜ್ಯದ ಜನರ ಆಕ್ರೋಶ ಬಯಲಾಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ .

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಕಾರ್ಯವೈಖರಿ ಶ್ಲಾಘಿಸಿರುವ ಸುರ್ಜೇವಾಲಾ

ಪತ್ರಿಕಾ ಹೇಳಿಕೆ ಮೂಲಕ ರಾಜ್ಯ ಕಾಂಗ್ರೆಸ್‌ ಕಾರ್ಯವೈಖರಿಯನ್ನು ಶ್ಲಾಘಿಸಿರುವ ಸುರ್ಜೇವಾಲಾ, ‘ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಮತಗಳ್ಳತನ ವಿರುದ್ಧ ಸಹಿ ಸಂಗ್ರಹ ಅಭಿಯಾನ ನಡೆಸಲಾಗಿದೆ. ಅದರಲ್ಲಿ ಕರ್ನಾಟಕ ದೇಶದಲ್ಲಿಯೇ ಅತಿ ಹೆಚ್ಚು ಸಹಿ ಸಂಗ್ರಹಿಸಿ ಮೊದಲ ಸ್ಥಾನ ಗಳಿಸಿದೆ. ಈ ಐತಿಹಾಸಿಕ ಯಶಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಅಭಿನಂದನೆಗಳು’ ಎಂದಿದ್ದಾರೆ.

ಸಹಿ ಸಂಗ್ರಹಿಸಿ ಅಭಿಯಾನ ಯಶಸ್ವಿ

‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ ಅವರು ಬೆಂಗಳೂರು ಸ್ವಾತಂತ್ರ್ಯ ಉದ್ಯಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಮತಗಳ್ಳತನ ವಿರುದ್ಧ ಜಾಗೃತಿ ಮೂಡಿಸಿದ್ದರು. ಅಲ್ಲದೆ, ರಾಹುಲ್‌ ಗಾಂಧಿ ಅವರ ಕರೆ ಮೇರೆಗೆ ಕೆಪಿಸಿಸಿ ವಿವಿಧ ವಿಭಾಗಗಳು ಜನರ ಬಳಿಗೆ ತೆರಳಿ ಅವರಲ್ಲಿ ಜಾಗೃತಿ ಮೂಡಿಸಿ, ಅತಿಹೆಚ್ಚು ಸಹಿ ಸಂಗ್ರಹಿಸಿ, ಅಭಿಯಾನ ಯಶಸ್ವಿಗೊಳಿಸಿವೆ. ಅನ್ಯಾಯದ ವಿಚಾರದಲ್ಲಿ ಕರ್ನಾಟಕ ಮೊದಲಿಗೆ ಧ್ವನಿ ಎತ್ತುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೀಗೆ ಸಂಗ್ರಹಿಸಲಾಗಿರುವ ಸಹಿಯನ್ನು ದೆಹಲಿಗೆ ರವಾನಿಸಲಾಗುವುದು. ಜತೆಗೆ ಮತಗಳ್ಳತನ ವಿರುದ್ಧ ನ. 25ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗುವುದು’ ಎಂದು ವಿವರಿಸಿದ್ದಾರೆ.

‘ಚುನಾವಣಾ ಆಯೋಗವು ಮತ ಅಕ್ರಮಗಳಲ್ಲಿ ಭಾಗಿಯಾಗಿದೆ. ಆಯೋಗದ ನಿಷ್ಕ್ರಿಯತೆ ನೋಡಿದರೆ, ಮುಂಬರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ 5 ನಗರ ಪಾಲಿಕೆಗಳು ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಬ್ಯಾಲೆಟ್‌ ಪೇಪರ್‌ ಮೂಲಕ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.