Asianet Suvarna News Asianet Suvarna News

ಬಿಜೆಪಿ ವಿರುದ್ಧ ಕ್ವಿಟ್‌ ಇಂಡಿಯಾ ರೀತಿ ಚಳವಳಿ!

ಬಿಜೆಪಿ ವಿರುದ್ಧ ಕ್ವಿಟ್‌ ಇಂಡಿಯಾ ರೀತಿ ಚಳವಳಿ| ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ‘ಕ್ವಿಟ್‌ ಬಿಜೆಪಿ ಹೋರಾಟ’| ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ|  ರಾಜ್ಯ ಸರ್ಕಾರದಿಂದ ಪೊಲೀಸ್‌ ಇಲಾಖೆ ದುರ್ಬಳಕೆ: ಜೈಲ್‌ ಭರೋ ನಡೆಸುತ್ತೇವೆ ಹುಷಾರ್‌ ಎಂದ ಮಾಜಿ ಸಿಎಂ

Karnataka Congress Conducts Quit India Like Movement Against BJP
Author
Bangalore, First Published Feb 16, 2020, 7:28 AM IST

ಬೆಂಗಳೂರು[ಫೆ.16]: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಹೀಗಾಗಿ ಬಿಜೆಪಿ ಕಿತ್ತೊಗೆದು ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಕ್ವಿಟ್‌ ಇಂಡಿಯಾ ಚಳವಳಿ ಮಾದರಿಯಲ್ಲಿ ‘ಕ್ವಿಟ್‌ ಬಿಜೆಪಿ ಚಳವಳಿ’ ನಡೆಸಲಾಗುವುದು. ಜತೆಗೆ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ವಿರುದ್ಧ ಜೈಲ್‌ ಭರೋ ಚಳವಳಿ ಸೇರಿದಂತೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಮೌರ್ಯ ವೃತ್ತದಲ್ಲಿ ಬೃಹತ್‌ ಪ್ರತಿಭಟನೆ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಬಿಜೆಪಿ ಸರ್ಕಾರ ಸಿಎಎ ವಿರೋಧಿ ಹೋರಾಟಗಾರರು ಹಾಗೂ ಕಾಂಗ್ರೆಸ್ಸಿಗರ ವಿರುದ್ಧ ವಿನಾಕಾರಣ ದೇಶದ್ರೋಹದ ಪ್ರಕರಣ ದಾಖಲಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಲೇ ಪ್ರಕರಣಗಳನ್ನು ವಾಪಸು ಪಡೆದು ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಈ ಪ್ರತಿಭಟನೆ ಸಾಂಕೇತಿಕ ಹಾಗೂ ಆರಂಭ ಮಾತ್ರ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜೈಲ್‌ ಭರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ದಮನಕ್ಕೆ ಮುಂದಾದರೆ ಕಾಂಗ್ರೆಸ್‌ ಪಕ್ಷ ಕೈ ಕಟ್ಟಿಕೊಂಡು ಕೂರುವುದಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸುವವರೆಗೂ ಹೋರಾಟ ನಡೆಸುತ್ತೇವೆ. ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿ ಮಾದರಿಯಲ್ಲಿ ದೊಡ್ಡ ಮಟ್ಟದ ಚಳವಳಿ ರೂಪಿಸಿ ಬಿಜೆಪಿಯನ್ನು ತೊಲಗಿಸಬೇಕು. ಈ ಹೋರಾಟಕ್ಕೆ ಕಾರ್ಯಕರ್ತರು ಎಲ್ಲಾ ತ್ಯಾಗ, ಹೋರಾಟಕ್ಕೂ ಸಜ್ಜಾಗಬೇಕು ಎಂದು ಕರೆ ನೀಡಿದರು.

ಪೊಲೀಸರಿಗೂ ಎಚ್ಚರಿಕೆ:

ಬಿ.ಎಸ್‌. ಯಡಿಯೂರಪ್ಪ ಶಾಶ್ವತವಾಗಿ ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ಇರುವುದಿಲ್ಲ. ಪೊಲೀಸರು ಇರುವುದು ಕಾನೂನು ರಕ್ಷಣೆ ಹಾಗೂ ಪಾಲನೆಗಾಗಿಯೇ ಹೊರತು ಸರ್ಕಾರಗಳು ಹೇಳಿದಂತೆ ನಡೆದುಕೊಳ್ಳಲು ಅಲ್ಲ. ವಿನಾಕಾರಣ ಸಿಎಎ ಹೋರಾಟಗಾರರು, ಕಾಂಗ್ರೆಸ್‌ನವರನ್ನೇ ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಿದರೆ ಮುಂದಿನ ದಿನಗಳಲ್ಲಿ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ದೇಶವನ್ನು ನಾಶ ಮಾಡುತ್ತಿದ್ದಾರೆ. ಸಂವಿಧಾನ ವಿರುದ್ಧವಾಗಿ ಪೌರತ್ವ ತಿದ್ದುಪಡಿ ಕಾಯಿದೆ ತರುತ್ತಿದ್ದಾರೆ. ಈ ಮೂಲಕ ದಲಿತರು, ಹಿಂದುಳಿದವರ ಹಕ್ಕುಗಳನ್ನು ಕಸಿಯಲು ಮುಂದಾಗುತ್ತಿದ್ದಾರೆ. ಪೌರತ್ವ ಸಾಬೀತಿಗೆ ದಾಖಲೆ ನೀಡದಿದ್ದರೆ ನಾವು ಅನುಮಾನಾಸ್ಪದ ಪ್ರಜೆಯಾಗುತ್ತೇವೆ. ಪೌರತ್ವದ ಹಕ್ಕನ್ನು ಕಸಿದುಕೊಂಡು ಬಂಧನದಲ್ಲಿ ಇರಬೇಕಾಗುತ್ತದೆ. ಇಂತಹ ಅಸಂವಿಧಾನಿಕ ಕಾಯಿದೆ ವಿರುದ್ಧ ಪ್ರತಿಭಟಿಸುವವರ ವಿರುದ್ಧ ವಿನಾಕಾರಣ ದೇಶದ್ರೋಹ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

(ಬಾಕ್ಸ್‌)

ವಿನಾಕಾರಣ ದೇಶದ್ರೋಹ ಪ್ರಕರಣ:

ಮಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದಕ್ಕಾಗಿ ಇಬ್ಬರನ್ನು ಗೋಲಿಬಾರ್‌ ನಡೆಸಿ ಕೊಂದಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್‌ ಶಾಸಕ ಯು.ಟಿ. ಖಾದರ್‌ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನಲ್ಲಿ ಫ್ರೀ ಕಾಶ್ಮೀರ ಫಲಕ ಹಿಡಿದ ಯುವತಿ, ಬೀದರ್‌ನ ಶಾಹೀನ್‌ ವಿದ್ಯಾಸಂಸ್ಥೆಯಲ್ಲಿ ಸಿಎಎ ವಿರುದ್ಧ ವಿಡಂಬನಾತ್ಮಕ ನಾಟಕ ಮಾಡಿದ 11 ವರ್ಷದ ಪುಟ್ಟಬಾಲಕಿ, ತಾಯಿ ಹಾಗೂ ಮುಖ್ಯ ಶಿಕ್ಷಕಿ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದರು.

ಆದರೆ, ಉಗ್ರವಾದ ಹೇಳಿಕೆ ನೀಡಿದ ಬಿಜೆಪಿ ಶಾಸಕ ಸೋಮಶೇಖರ್‌ರೆಡ್ಡಿ ಮೇಲೆ ಏಕೆ ದೇಶದ್ರೋಹ ಕೇಸು ದಾಖಲಿಸಿಲ್ಲ. ಬಾಬರಿ ಮಸೀದಿ ಧ್ವಂಸವನ್ನು ಕೆಟ್ಟದಾಗಿ ತಮ್ಮ ಶಾಲೆಯಲ್ಲಿ ತೋರಿಸಿದ ಕಲ್ಲಡ್ಕ ಪ್ರಭಾಕರ್‌ ಭಟ್ಟರ ಮೇಲೆ ಏಕೆ ದೇಶದ್ರೋಹದ ಕೇಸು ದಾಖಲಿಸಿಲ್ಲ? ಅನಂತ ಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲ್‌, ಆರ್‌. ಅಶೋಕ್‌, ಸಿ.ಟಿ. ರವಿ, ಬಿ.ಎಲ್‌. ಸಂತೋಷ್‌ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ಶಾಹೀನ್‌ ಶಾಲೆಯ ಶಿಕ್ಷಕರ ಮತ್ತು ಮಕ್ಕಳ ವಿರುದ್ಧ ಕೇಸ್‌ ಹಾಕುತ್ತಾರೆ. ಆದರೆ, ಬಿಜೆಪಿ ನಾಯಕರು ಕೋಮು ಸೌಹಾರ್ದತೆ ಹಾಳು ಮಾಡುವ ಹೇಳಿಕೆ ನೀಡಿದರೂ ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿಯೇ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕುತ್ತಿದ್ದೇವೆ ಎಂದು ಹೇಳಿದರು.

ಈ ವೇಳೆ ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಡಿ.ಕೆ. ಸುರೇಶ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ಸೌಮ್ಯಾರೆಡ್ಡಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರನಾಥ್‌, ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಸೇರಿ ಹಲವರು ಹಾಜರಿದ್ದರು.

ತೇಜಸ್ವಿ ಸೂರ‍್ಯಗೆ ಅಮಾವಾಸ್ಯೆ ಎನ್ನುತ್ತೇನೆ!

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯನನ್ನು ಅಮಾವಾಸ್ಯೆ ಎಂದೇ ಕರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.

ಅದೆಂತದ್ದೋ ಸೂರ್ಯ ಕೋಮು ಸೌಹಾರ್ದತೆ ಕದಡುವ ಹೇಳಿಕೆ ನೀಡಿದರೂ ಕೇಸು ಹಾಕುವುದಿಲ್ಲ. ಕಾಂಗ್ರೆಸ್‌ನವರ ಮೇಲೆ ಮಾತ್ರ ಹಾಕುತ್ತಾರೆ ಎಂದು ಸಿದ್ದರಾಮಯ್ಯ ದೂರಿದರು.

ಈ ವೇಳೆ ಕಾರ್ಯಕರ್ತರು ‘ತೇಜಸ್ವಿ ಸೂರ್ಯ’ ಎಂದು ಹೆಸರು ನೆನಪಿಸಿದರು. ಆಗ ಸಿದ್ದರಾಮಯ್ಯ, ನಾನು ಅವನನ್ನು ಅಮಾವಾಸ್ಯೆ ಎಂದೇ ಕರೆಯುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios