* ನವದೆಹಲಿಗೆ ಬಂದಿಳಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ* ಮೋದಿ ಸೇರಿದಂತೆ ನಡ್ಡಾ, ಕೇಂದ್ರ ಸಚಿವರನ್ನ ಭೇಟಿ ಮಾಡುತ್ತೇನೆ ಎಂದ ಬಿಎಸ್‌ವೈ * ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ

ನವದೆಹಲಿ, (ಜು.16): ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು (ಶುಕ್ರವಾರ) ನವದೆಹಲಿಗೆ ಬಂದಿಳಿದರು.

ದೆಹಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, 6 ತಿಂಗಳ ಬಳಿಕ ದೆಹಲಿ ಬಂದಿದ್ದೇನೆ. ಇಂದು ಆರೂವರೆ ಗಂಟೆಯ ನಂತರ ಪ್ರಧಾನಿ ಭೇಟಿಯಾಗುತ್ತಿದ್ದು, ಆ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಹೊಸ ಕೇಂದ್ರ ಸಚಿವರ ಭೇಟಿ ಮಾಡಿ ರಾಜ್ಯಕ್ಕೆ ಸಿಗಬೇಕಾದ ಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಸಿಎಂ ದೆಹಲಿ ಭೇಟಿ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು

ಶನಿವಾರ ಅಮಿತ್ ಶಾ, ರಾಜನಾಥ ಸಿಂಗ್ ಸೇರಿದಂತೆ ಕೇಂದ್ರದ ಕೆಲವು ಪ್ರಮುಖ ಸಚಿವರನ್ನು ಭೇಟಿ ಮಾಡುವುದಾಗಿಯೂ ಅವರು ತಿಳಿಸಿದರು.

ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಯಾವುದೇ ರೀತಿಯ ತೊಂದರೆ ಎದುರಾಗದು.‌ ಈ ವಿಷಯವನ್ನು ತಮಿಳುನಾಡು ಮುಖ್ಯಮಂತ್ರಿಯವರಿಗೂ ಪತ್ರ ಬರೆದು ಮನವರಿಕೆ ಮಾಡಲಾಗಿದೆ. ಆದರೆ, ಅವರು ಹಠ ಬಿಡುತ್ತಿಲ್ಲ. ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇರುವುದರಿಂದ ನಾವು ಸಮಾನಾಂತರ ಜಲಾಶಯ ನಿರ್ಮಿಸುವುದು ಶತಸಿದ್ಧ ಎಂದರು.

ಸಂಪುಟ ಪುನರ್ ರಚನೆ‌ ಅಥವಾ ವಿಸ್ತರಣೆ‌ ಕುರಿತು ವರಿಷ್ಠರೊಂದಿಗೆ ಚರ್ಚೆ ನಡೆಸಿದಲ್ಲಿ ನಿಮಗೆ‌ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬಿಎಸ್ ವೈ ಪುತ್ರ ಬಿ.ವೈ. ವಿಜಯೇಂದ್ರ, ಲೆಹರ್ ಸಿಂಗ್ ಮತ್ತಿತರರು ಸಿಎಂ ಜೊತೆ ಇದ್ದರು.