ವಿಜಯ್‌ ಮಲಗಿಹಾಳ

ಬೆಂಗಳೂರು [ಡಿ.16]:  ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಸಮತೋಲನದ ಬಗ್ಗೆ ಪಕ್ಷದ ಹೈಕಮಾಂಡ್‌ ಜೊತೆ ವಿಸ್ತೃತವಾಗಿ ಸಮಾಲೋಚನೆ ನಡೆಸಿದ ನಂತರವೇ ಸಂಪುಟ ವಿಸ್ತರಣೆ ಬಗ್ಗೆ ಮುಂದಿನ ಹೆಜ್ಜೆ ಇಡಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಯಸಿದ್ದಾರೆ.

ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರ ಸಂಪುಟ ಎಂಬ ಹಣೆಪಟ್ಟಿಕಟ್ಟಿಕೊಂಡು ಮುಂದಿನ ಮೂರೂವರೆ ವರ್ಷಗಳ ಬಳಿಕ ಸಾರ್ವತ್ರಿಕ ಚುನಾವಣೆ ಎದುರಿಸಿದರೆ ಯಾವ ಸಂದೇಶ ರವಾನೆಯಾದಂತಾಗುತ್ತದೆ? ಹೀಗಾಗಿ, ಎಲ್ಲ ಜಾತಿ ಜನಾಂಗಗಳನ್ನು ಸಮೀಕರಣಗೊಳಿಸಿ ಪ್ರಾದೇಶಿಕ ಸಮತೋಲನವನ್ನೂ ಸರಿದೂಗಿಸಿಕೊಂಡು ಜನರ ಬಳಿ ಹೋಗುವುದು ಉತ್ತಮ. ಈ ದಿಕ್ಕಿನಲ್ಲಿ ವಿಸ್ತರಣೆಗೂ ಮೊದಲೇ ವರಿಷ್ಠರಿಂದ ಸ್ಪಷ್ಟತೆ ಪಡೆದುಕೊಳ್ಳಬೇಕು ಎಂಬ ನಿಲುವಿಗೆ ಯಡಿಯೂರಪ್ಪ ಅವರು ಬಂದಿದ್ದಾರೆ ಎನ್ನಲಾಗಿದೆ.

ಹೀಗಾಗಿಯೇ ಆತುರಾತುರವಾಗಿ ಸಂಪುಟ ವಿಸ್ತರಣೆ ಕೈಗೊಂಡು ನಂತರ ಅಸಮಾಧಾನ ಭುಗಿಲೇಳುವ ಸನ್ನಿವೇಶ ಎದುರಾಗುವುದನ್ನು ತಡೆಯಲು ಪಕ್ಷದ ವರಿಷ್ಠರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಎಲ್ಲ ಸಾಧ್ಯತೆಗಳನ್ನು ಮುಂದಿಡುವುದು. ಅದರ ಆಧಾರದ ಮೇಲೆ ವರಿಷ್ಠರು ನೀಡುವ ಸಲಹೆ ಸೂಚನೆಗಳ ಪ್ರಕಾರವೇ ಮುಂದಿನ ನಿರ್ಧಾರ ಕೈಗೊಳ್ಳುವುದು ಸೂಕ್ತ ಎಂಬ ಚಿಂತನೆ ಮುಖ್ಯಮಂತ್ರಿಗಳ ಪಾಳೆಯದಲ್ಲಿ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಸಮತೋಲನವನ್ನು ತಕ್ಷಣಕ್ಕೆ ಸರಿದೂಗಿಸುವುದು ಸಾಧ್ಯವಾಗದಿದ್ದರೂ ಮುಂದಿನ ಒಂದು ವರ್ಷ ಅಥವಾ ಒಂದೂವರೆ ವರ್ಷದ ನಂತರವಾದರೂ ಸಂಪುಟ ಪುನಾರಚನೆ ಮಾಡುವ ಆಲೋಚನೆಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಹೀಗಾಗಿ, ಅದರ ಬಗ್ಗೆ ಈಗಲೇ ನಿರ್ಧಾರ ಕೈಗೊಂಡಲ್ಲಿ ಸಂಭವನೀಯ ಅಸಮಾಧಾನ ತಡೆಗಟ್ಟಬಹುದು ಎಂಬ ಲೆಕ್ಕಾಚಾರ ಅಡಗಿದೆ.

ಎಲ್ಲವೂ ಸರಳ ಎಂದುಕೊಂಡಾಗ ಬಿಎಸ್‌ವೈ ಸಂಪುಟ ವಿಸ್ತರಣೆಗೆ 'ಗ್ರಹಣ'..

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ದೆಹಲಿಗೆ ತೆರಳಿ ವರಿಷ್ಠರೊಂದಿಗೆ ತರಾತುರಿಯಲ್ಲಿ ಚರ್ಚೆ ಮಾಡಿ ಸಂಪುಟ ವಿಸ್ತರಣೆ ಮಾಡುವ ಬದಲು ಸುದೀರ್ಘ ಸಮಯ ಇಟ್ಟುಕೊಂಡೇ ವಿಷಯ ಪ್ರಸ್ತಾಪಿಸಬೇಕು. ಆ ಮೂಲಕ ವರಿಷ್ಠರ ಮಾರ್ಗದರ್ಶನದಲ್ಲೇ ಎಲ್ಲ ನಿರ್ಧಾರಗಳನ್ನು ಕೈಗೊಂಡು ಅದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂಬುದರ ಸ್ಪಷ್ಟಸಂದೇಶ ರವಾನಿಸುವ ಉದ್ದೇಶವನ್ನೂ ಹೊಂದಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಅರ್ಧ ಸಂಪುಟ ಆವರಿಸಲಿದೆ ಲಿಂಗಾಯತ-ಒಕ್ಕಲಿಗ:

ಸದ್ಯ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಸಂಪುಟದಲ್ಲಿ ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಜೆ.ಸಿ.ಮಾಧುಸ್ವಾಮಿ, ವಿ.ಸೋಮಣ್ಣ, ಶಶಿಕಲಾ ಜೊಲ್ಲೆ ಹಾಗೂ ಸಿ.ಸಿ.ಪಾಟೀಲ್‌ ಸೇರಿ ಏಳು ಮಂದಿ ಲಿಂಗಾಯತ ಸಮುದಾಯದ ಸಚಿವರಿದ್ದಾರೆ. ಈ ಪೈಕಿ ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಇದೀಗ ಉಪಚುನಾವಣೆಯಲ್ಲಿ ಗೆದ್ದು ಬಂದಿರುವ ಬಿ.ಸಿ.ಪಾಟೀಲ್‌ ಮತ್ತು ಮಹೇಶ್‌ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ಕೊಡಲಾಗಿದೆ. ಅಲ್ಲಿಗೆ ಒಂಬತ್ತು ಮಂದಿ ಲಿಂಗಾಯತ ಸಚಿವರಾಗಲಿದ್ದಾರೆ. ಸ್ವತಃ ಮುಖ್ಯಮಂತ್ರಿಯೇ ಲಿಂಗಾಯತ ಸಮುದಾಯಕ್ಕೆ ಸೇರಿದ ಮೇಲೆ ಅಷ್ಟುಸಂಖ್ಯೆಯಲ್ಲಿ ಆ ಸಮುದಾಯದವರಿಗೆ ಸಚಿವ ಸ್ಥಾನ ನೀಡಬೇಕೆ ಎಂಬ ಪ್ರಶ್ನೆ ಯಡಿಯೂರಪ್ಪ ಅವರ ಪಾಳೆಯದಲ್ಲಿ ಉದ್ಭವಿಸಿದೆ.

ಇನ್ನು ಒಕ್ಕಲಿಗ ಸಮುದಾಯಕ್ಕೆ ಸೇರಿದವರು ಸದ್ಯ ಮೂವರು ಸಚಿವರಿದ್ದಾರೆ. ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌ ಮತ್ತು ಸಿ.ಟಿ.ರವಿ. ಈ ಪೈಕಿ ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದಿರುವ ಒಕ್ಕಲಿಗ ಸಮುದಾಯದ ಡಾ.ಕೆ.ಸುಧಾಕರ್‌, ಎಸ್‌.ಟಿ.ಸೋಮಶೇಖರ್‌, ಕೆ.ಗೋಪಾಲಯ್ಯ ಹಾಗೂ ನಾರಾಯಣಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕಿದೆ. ಆಗ ಏಳು ಮಂದಿ ಒಕ್ಕಲಿಗ ಸಮುದಾಯದ ಸಚಿವರಾದಂತಾಗುತ್ತದೆ.

ಅಲ್ಲಿಗೆ, ಒಟ್ಟು ಸಂಪುಟದ ಬರೋಬ್ಬರಿ ಅರ್ಧ ಪಾಲನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯ ಆವರಿಸಿದಂತಾಗುತ್ತದೆ. ಹತ್ತು ಮಂದಿ ಲಿಂಗಾಯತ ಮತ್ತು ಏಳು ಮಂದಿ ಒಕ್ಕಲಿಗ ಸೇರಿ 17 ಮಂದಿ. ಒಟ್ಟು ಸಂಪುಟದ ಸಾಮರ್ಥ್ಯ 34.

ಇನ್ನು ಕುರುಬರಿಗೂ ಸಂಪುಟದಲ್ಲಿ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಯಿದೆ. ಸದ್ಯ ಕೆ.ಎಸ್‌.ಈಶ್ವರಪ್ಪ ಅವರೊಬ್ಬರು ಮಾತ್ರ ಇದ್ದಾರೆ. ಉಪಚುನಾವಣೆಯಲ್ಲಿ ಗೆದ್ದಿರುವ ಬೈರತಿ ಬಸವರಾಜು ಅವರಿಗೆ ಸ್ಥಾನ ನೀಡಬೇಕಿದೆ. ಜತೆಗೆ ಕಣದಿಂದ ಹಿಂದೆ ಸರಿದ ಆರ್‌.ಶಂಕರ್‌ ಅವರಿಗೂ ವಿಧಾನಪರಿಷತ್‌ ಸದಸ್ಯರನ್ನಾಗಿಸಿ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿದೆ. ಇಷ್ಟೇ ಆದಲ್ಲಿ ಮೂವರು ಸಚಿವರಾದಂತಾಗುತ್ತದೆ. ಒಂದು ವೇಳೆ ಉಪಚುನಾವಣೆಯಲ್ಲಿ ಸೋತ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರಿಗೂ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಎದುರಾದಲ್ಲಿ ಐವರು ಸಂಪುಟದಲ್ಲಿ ಸ್ಥಾನ ಪಡೆದಂತಾಗುತ್ತದೆ.

ಇದೆಲ್ಲದರ ಜತೆ ಪ್ರಾದೇಶಿಕ ಅಸಮತೋಲನವೂ ಉಂಟಾಗಲಿದೆ. ಸಚಿವ ಸಂಪುಟದಲ್ಲಿ ಕೆಲವು ಪ್ರದೇಶಗಳಿಗೆ ಮಾತ್ರ ಹೆಚ್ಚಿನ ಸಂಖ್ಯೆಯ ಪ್ರಾತಿನಿಧ್ಯ ಸಿಕ್ಕಂತಾಗುತ್ತದೆ. ಈ ಬಗ್ಗೆಯೂ ಎಚ್ಚರಿಕೆಯಿಂದ ಸರಿದೂಗಿಸಲು ಸಾಧ್ಯವೇ ಎಂಬುದರ ಚಿಂತನೆಯನ್ನೂ ಯಡಿಯೂರಪ್ಪ ಅವರು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.