ಬೆಂಗಳೂರು (ಡಿ.04):  ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗುವುದರೊಳಗಾಗಿ ಸಂಪುಟ ವಿಸ್ತರಣೆ ಮಾಡಬೇಕು ಎಂಬ ಧಾವಂತದಲ್ಲಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈ ಸಂಬಂಧ ಬಿಜೆಪಿ ಹೈಕಮಾಂಡ್‌ಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

"

ವರಿಷ್ಠರು ಅನುಮತಿ ನೀಡಿದಲ್ಲಿ ಭಾನುವಾರವೇ ಸಂಪುಟ ವಿಸ್ತರಣೆ ಕೈಗೊಳ್ಳಲು ಮುಖ್ಯಮಂತ್ರಿಗಳು ಸಜ್ಜಾಗಿದ್ದಾರೆ. ಖಾಲಿ ಇರುವ ಏಳು ಸ್ಥಾನಗಳ ಪೈಕಿ ಕನಿಷ್ಠ ಮೂರರಿಂದ ಐದು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ, ಅಧಿವೇಶನ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆ ಹಿನ್ನೆಲೆಯಲ್ಲಿ ಈ ಹಂತದಲ್ಲಿ ವರಿಷ್ಠರು ಸಂಪುಟ ವಿಸ್ತರಣೆಗೆ ಅನುಮತಿ ನೀಡುವ ಮೂಲಕ ಗೊಂದಲಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆ ಕಡಮೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಭಾನುವಾರವೇ ಸಂಪುಟ ವಿಸ್ತರಣೆ; ಕೊನೆ ತೀರ್ಮಾನಕ್ಕೆ ಬಂದ ಬಿಎಸ್‌ವೈ! ..

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹುಟ್ಟುಹಬ್ಬದ ಅಂಗವಾಗಿ ಬುಧವಾರ ಸಂಜೆ ದೂರವಾಣಿ ಮೂಲಕ ಮಾತನಾಡಿ ಶುಭಾಶಯ ತಿಳಿಸಿದ ಯಡಿಯೂರಪ್ಪ ಅವರು ಸಂಪುಟ ಕಗ್ಗಂಟಿನ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ಅಲ್ಲಿ ಮತ್ತೆ ಸಂಪುಟ ವಿಸ್ತರಣೆ ವಿಳಂಬಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂಶವನ್ನು ಗಮನಕ್ಕೆ ತಂದಿದ್ದಾರೆ.

ಅಲ್ಲದೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದವರಿಗೆ ಹಿಂದೆ ನೀಡಿದ ವಾಗ್ದಾನದಂತೆ ಸಚಿವ ಸ್ಥಾನ ನೀಡಬೇಕಾಗಿದೆ. ಇಲ್ಲದಿದ್ದರೆ ಪಕ್ಷದ ಬಗ್ಗೆ ಕೆಟ್ಟಅಭಿಪ್ರಾಯ ಬರುತ್ತದೆ. ಮಾತಿಗೆ ತಪ್ಪಿದವರು ಎಂಬ ಆಪಾದನೆಯನ್ನು ನಾನೂ ಹೊರಬೇಕಾಗುತ್ತದೆ. ಹೀಗಾಗಿ, ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡುವ ಉದ್ದೇಶ ಹೊಂದಿದ್ದೇನೆ. ಇದಕ್ಕೆ ಅವಕಾಶ ಕೊಡಿ. ನೀವು ಒಪ್ಪಿದಲ್ಲಿ ಭಾನುವಾರವೇ ವಿಸ್ತರಣೆ ಮಾಡುತ್ತೇನೆ ಎಂದು ಯಡಿಯೂರಪ್ಪ ಅವರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನಡ್ಡಾ ಅವರು ಪರಿಶೀಲಿಸಿ ತಿಳಿಸುವುದಾಗಿ ಹೇಳಿದರು ಎನ್ನಲಾಗಿದೆ.

ಈ ಸಂಬಂಧ ಗುರುವಾರ ರಾತ್ರಿವರೆಗೂ ಹೈಕಮಾಂಡ್‌ನಿಂದ ಯಾವುದೇ ಮಾಹಿತಿ ಬಂದಿರಲಿಲ್ಲ. ಶುಕ್ರವಾರ ಬೆಳಗಾವಿಯಲ್ಲಿ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆ ನಡೆಯಲಿದೆ. ಅಲ್ಲಿ ಈ ವಿಷಯವನ್ನು ಯಡಿಯೂರಪ್ಪ ಅವರು ರಾಜ್ಯದ ಇತರ ನಾಯಕರ ಗಮನಕ್ಕೆ ತರಲಿದ್ದಾರೆ. ಇತರ ನಾಯಕರೂ ವಿಸ್ತರಣೆಗೆ ಸಮ್ಮತಿಸಿ ವರಿಷ್ಠರಿಗೆ ಮನವೊಲಿಸಿದಲ್ಲಿ ಹಸಿರು ನಿಶಾನೆ ಸಿಗಬಹುದು. ಇಲ್ಲದಿದ್ದರೆ ಗ್ರಾಮ ಪಂಚಾಯತ್‌ ಚುನಾವಣೆ ಮುಗಿಯುವವರೆಗೆ ಕಾಯಬೇಕಾಗುತ್ತದೆ. ನಂತರ ಹೊಸ ವರ್ಷದಲ್ಲೇ ಸಂಪುಟ ವಿಸ್ತರಣೆ ಮಾಡಬೇಕಾಗುತ್ತದೆ ಎಂದು ತಿಳಿದು ಬಂದಿದೆ.