- ಮಾಸಾಂತ್ಯಕ್ಕೆ ಸಂಪುಟ ವಿಸ್ತರಣೆ/ಪುನಾರಚನೆ ಸಾಧ್ಯತೆ- ಬೆಳಗಾವಿ, ಹಳೆ ಮೈಸೂರು ನಾಯಕರಿಗೆ ಚಾನ್ಸ್‌ ಸಂಭವ- ಸಂಪುಟ ಕಸರತ್ತಿನ ಬಗ್ಗೆ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆ

ಬೆಂಗಳೂರು(ಏ..19): ಅತ್ಯಾಚಾರ ಆರೋಪದಿಂದ ಖುಲಾಸೆಯಾಗಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಮತ್ತೆ ಸಚಿವ ಸಂಪುಟ ಸೇರುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಸಂಘಟನೆ ಬಲಪಡಿಸುವ ಉದ್ದೇಶದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರಿಗೂ ಸಂಪುಟದಲ್ಲಿ ಅವಕಾಶ ಸಿಗುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಆಡಳಿತಾರೂಢ ಬಿಜೆಪಿಯಲ್ಲಿ ಸಂಪುಟ ಕಸರತ್ತಿನ ಬಗ್ಗೆ ತೆರೆಮರೆಯಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದು, ಈ ತಿಂಗಳಾಂತ್ಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ನಿರೀಕ್ಷೆಯಿದೆ. ಈಗ ಹೇಗಿದ್ದರೂ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಹೀಗಾಗಿ, ಸಂಪುಟ ವಿಸ್ತರಣೆಯಾಗಲಿ ಅಥವಾ ಪುನಾರಚನೆಯಾಗಲಿ ರಾಜಕೀಯವಾಗಿ ಪ್ರಮುಖವಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ರಮೇಶ್‌ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ತನ್ನ ಪ್ರಾಬಲ್ಯ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಬೊಮ್ಮಾಯಿ ಸಚಿವ ಸಂಪುಟದ ಕಸರತ್ತಿನ ಚೆಂಡು ಮತ್ತೆ ಹೈಕಮಾಂಡ್‌ ಅಂಗಳಕ್ಕೆ

ಇನ್ನು ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವುದರಿಂದ ಅಲ್ಲಿ ಬಲಪಡಿಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು ಎಂಬ ಸೂಚನೆಯನ್ನು ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ನೀಡಿದ್ದರು. ಜತೆಗೆ ಈಗಿರುವ ಒಕ್ಕಲಿಗ ಸಮುದಾಯದ ಸಚಿವರು ಅಥವಾ ಮುಖಂಡರು ಸಮರ್ಥವಾಗಿ ಪಕ್ಷದ ಸಂಘಟನೆಗೆ ನೆರವಾಗುತ್ತಿಲ್ಲ ಎಂಬ ಅಂಶವನ್ನೂ ಸಭೆಯಲ್ಲಿ ಹಲವು ನಾಯಕರು ವ್ಯಕ್ತಪಡಿಸಿದ್ದರು. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಅವರದೇ ಜಿಲ್ಲೆಯಾದ ರಾಮನಗರದ ಯೋಗೇಶ್ವರ್‌ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂಬ ಅಭಿಪ್ರಾಯವೂ ಪಕ್ಷದಲ್ಲಿ ವ್ಯಕ್ತವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚುನಾವಣೆಗೆ ಇನ್ನು ಒಂದು ವರ್ಷ ಬಾಕಿ ಇರುವಂತೆ ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಗರಿಗೆದರಿದೆ. ಶೀಘ್ರ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೇಳಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹ ಸಂಪುಟ ವಿಸ್ತರಣೆಯ ಸಾಧ್ಯತೆಗಳ ಸುಳಿವು ನೀಡಿದ್ದಾರೆ.

ಈಶ್ವರಪ್ಪ ಕುರ್ಚಿ ಕಳಚಿದ ಬೆನ್ನಲ್ಲೇ ಕ್ಯಾಬಿನೆಟ್ ಸೀಕ್ರೆಟ್ ಫೈಲ್ಸ್ ಓಪನ್!

ಏ.16,17ರಂದು ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿಯಲ್ಲಿ ಸಂಪುಟ ಪುನಾರಚನೆ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಇದು ಹಲವು ಸಚಿವಾಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಬಿ.ಎಸ್‌.ಯಡಿಯೂರಪ್ಪ, ಸಚಿವ ಸಂಪುಟ ವಿಸ್ತರಣೆ ಆದಷ್ಟುಬೇಗನೆ ಆಗುತ್ತದೆ. ವಿಜಯೇಂದ್ರನಿಗೆ ಸಚಿವ ಸ್ಥಾನ ಕೊಡುವುದು ಕೇಂದ್ರಕ್ಕೆ ಬಿಟ್ಟವಿಚಾರ. ನಾನು ಯಾವುದೇ ಒತ್ತಡವನ್ನೂ ಹಾಕಿಲ್ಲ. ಮಧ್ಯ ಕರ್ನಾಟಕದಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡುವ ಬಗ್ಗೆ ಕೇಂದ್ರದ ನಾಯಕರು ಆಲೋಚಿಸಲಿ ಎಂದು ತಿಳಿಸಿದ್ದಾರೆ. ಸದ್ಯ ಕರ್ನಾಟಕ ಸರ್ಕಾರ ಮೇಲೆ ಕಮಿಷನ್ ಆರೋಪ ಕಾರಣ ಸಂಪುಟು ವಿಸ್ತರಣೆ ಮತ್ತಷ್ಟು ವಿಳಂಭವಾಗುವ ಸಾಧ್ಯತೆ ಇದೆ.