ರಾಜ್ಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದ್ದ 2011ರ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ಅಂದಿನ ಕೆಪಿಎಸ್‌ಸಿ ಅಧ್ಯಕ್ಷರು, ಎಂಟು ಮಂದಿ ಸದಸ್ಯರ ಮೇಲಿನ ಪ್ರಾಸಿಕ್ಯೂಷನ್ ಪ್ರಸ್ತಾಪವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ತಿರಸ್ಕರಿಸಿದೆ. 

ಬೆಂಗಳೂರು (ಮೇ.23): ರಾಜ್ಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದ್ದ 2011ರ 362 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅವ್ಯವಹಾರ ಪ್ರಕರಣ ಸಂಬಂಧ ಅಂದಿನ ಕೆಪಿಎಸ್‌ಸಿ ಅಧ್ಯಕ್ಷರು, ಎಂಟು ಮಂದಿ ಸದಸ್ಯರ ಮೇಲಿನ ಪ್ರಾಸಿಕ್ಯೂಷನ್ ಪ್ರಸ್ತಾಪವನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆ ತಿರಸ್ಕರಿಸಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಅಪರಾಧ ತನಿಖಾ ಇಲಾಖೆ (ಸಿಐಡಿ) ಸಲ್ಲಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. 

ತನ್ಮೂಲಕ 2011ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅವ್ಯವಹಾರ ತನಿಖೆಗೆ ಸರ್ಕಾರ ಕೊನೆಯ ಮೊಳೆ ಹೊಡೆದಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ತೀವ್ರ ಅವ್ಯವಹಾರ ನಡೆದಿರುವುದಾಗಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆಗ ನೇಮಕವಾಗಿದ್ದ 362 ಹುದ್ದೆಗಳ ನೇಮಕಾತಿ ರದ್ದುಪಡಿಸಲಾಗಿತ್ತು. ಬಳಿಕ ನ್ಯಾಯಾಲಯದ ಮಧ್ಯಪ್ರವೇಶದಿಂದ 42 ಮಂದಿ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರಿಗೆ ಹುದ್ದೆ ನೀಡಲು ನಿರ್ಧರಿಸಲಾಗಿತ್ತು. 

2019ರಲ್ಲಿ ಕಾನೂನಿಗೆ ತಿದ್ದುಪಡಿ ತಂದು 42 ಮಂದಿಗೂ ಹುದ್ದೆ ನೀಡಲಾಗಿತ್ತು. ಇದರ ನಡುವೆ ಸಿಐಡಿ ತನಿಖೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆಪಿಎಸ್ಸಿ ಅಧ್ಯಕ್ಷರಾದ ಗೋನಾಳ್ ಭೀಮಪ್ಪ ಹಾಗೂ ಎಂಟು ಮಂದಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ರಾಜ್ಯಪಾಲರ ಮೂಲಕ ಅನುಮತಿ ಕೋರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾ ಗಿತ್ತು. ಆದರೆ ಸಚಿವ ಸಂಪುಟ ಸಭೆಯಲ್ಲಿ ಪ್ರಾಸಿಕ್ಯೂಷನ್‌ಗೆ ನೀಡುವ ಬದಲು ಪ್ರಕರಣ ಮುಕ್ತಾಯಗೊಳಿಸಲು ತೀರ್ಮಾನಿಸಿದೆ. 

ಬೆಂಗ್ಳೂರಲ್ಲಿ16.7 ಕಿ.ಮೀ. ಸುರಂಗ ರಸ್ತೆ ನಿರ್ಮಾಣಕ್ಕೆ ಸಂಪುಟ ಒಪ್ಪಿಗೆ

ಆರೋಪಿತರ ನಿವೃತ್ತಿಯಿಂದ ಈ ನಿರ್ಧಾರ: ಸಂಪುಟ ತೀರ್ಮಾನ ಸಮರ್ಥಿಸಿರುವ ಸಚಿವ ಎಚ್.ಕೆ.ಪಾಟೀಲ್, ಪ್ರಕರಣ ತುಂಬಾ ವರ್ಷಗಳು ಆಗಿದೆ. ಆಗಿನ ಅಧ್ಯಕ್ಷರು ಹಾಗೂ ಸದಸ್ಯರು ಈಗ ಹುದ್ದೆಗಳಲ್ಲಿಲ್ಲ. ಹೀಗಿರುವಾಗ ಅವರ ಮೇಲೆ ಯಾವ ರೀತಿ ಪ್ರಾಸಿಕ್ಯೂಷನ್ ನಡೆಸಲು ಸಾಧ್ಯ? ಇದರಿಂದ ಆಗುವ ಉಪಯೋಗ ಏನು? ಹೀಗಾಗಿ ಕೂಲಂಕುಷವಾಗಿ ಚರ್ಚಿಸಿ ಪ್ರಕರಣ ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಅವಧಿ ಮುಗಿದಿರುವುದು ಅಕ್ರಮದಿಂದ ಖುಲಾಸೆ ಆಗಲು ಮಾನದಂಡವೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಅಡಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು. ನಾಲ್ಕು ವರ್ಷಗಳ ಹಿಂದೆಯೇ ಪ್ರಸ್ತಾವನೆ ಸಂಪುಟಕ್ಕೆ ಬಂದಿತ್ತು. ಪ್ರಕರಣದಲ್ಲಿ ನೇಮಕವಾಗಿದ್ದ 48 ಮಂದಿ ಅಧಿಕಾರಿಗಳನ್ನು ಈಗಾಗಲೇ ಸಕ್ರಮಗೊಳಿಸಲಾಗಿದೆ. ನ್ಯಾಯಾಲಯವು ಹಲವು ಆದೇಶಗಳನ್ನು ಹೊರಡಿಸಿದೆ. ಹೀಗಿರುವಾಗ ಪ್ರಕರಣ ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ಸಮರ್ಥನೆ ನೀಡಿದರು.