ಅವಕಾಶವಂಚಿತರಿಗೆ ಮುಂದಿನ ಬಾರಿ ಅವಕಾಶ: ಬೊಮ್ಮಾಯಿ

ಅವಕಾಶವಂಚಿತರಿಗೆ ಮುಂದಿನ ಬಾರಿ ಅವಕಾಶ: ಬೊಮ್ಮಾಯಿ| ಮಂತ್ರಿಗಿರಿ ವಂಚಿತರಿಗೆ ಅಸಮಾಧಾನ ಆಗಿಲ್ಲ| ಸಣ್ಣಪುಟ್ಟಗೊಂದಲ ಶೀಘ್ರ ಬಗೆಹರಿಯಲಿವೆ

Karnataka Cabinet Expansion Rest Of The MLAs Will Get Portfolio Next Time Says Home Minister Basavaraj Bommai

ಬೆಂಗಳೂರು[ಫೆ.07]: ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ವಂಚಿತರಿಗೆ ಖಂಡಿತ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜಭವನದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದಲ್ಲಿ ಇನ್ನೂ ಕೆಲ ಸ್ಥಾನಗಳು ಖಾಲಿ ಉಳಿದಿವೆ. ಕಾರಣಾಂತರಗಳಿಂದ ವರಿಷ್ಠರು ಈ ಬಾರಿ 10 ಮಂದಿ ಶಾಸಕರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಲು ಅವಕಾಶ ನೀಡಿದರು. ಈ ಸಲ ಯಾರಿಗೆ ಅವಕಾಶ ತಪ್ಪಿದೆಯೋ ಮುಂದಿನ ದಿನಗಳಲ್ಲಿ ಅವರಿಗೆ ಖಂಡಿತ ಅವಕಾಶ ಸಿಕ್ಕೇ ಸಿಗಲಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಚಿವ ಸ್ಥಾನದ ವಂಚಿತರು ಅಸಮಾಧಾನಗೊಂಡಿಲ್ಲ. ಏಕೆಂದರೆ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಕೇಂದ್ರದ ವರಿಷ್ಠರು ಎಲ್ಲರೊಂದಿಗೆ ಚರ್ಚಿಸಿಯೇ ತೀರ್ಮಾನ ಕೈಗೊಂಡಿದ್ದಾರೆ. ಇರುವ ಸಣ್ಣಪುಟ್ಟಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕರಾದವರಿಗೆ ಸಹಜವಾಗಿ ಮಂತ್ರಿಯಾಗುವ ಸಹಜ ಆಸೆ ಇರುತ್ತದೆ. ಅದು ತಪ್ಪೂ ಅಲ್ಲ. ವರಿಷ್ಠರು ಪರಿಸ್ಥಿತಿಗೆ ತಕ್ಕಂತೆ ತೀರ್ಮಾನ ಕೈಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಅವಕಾಶ ವಂಚಿತರ ಪರ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಯಾರಿಗೂ ಸಂಶಯ ಬೇಡ. ಇನ್ನು ಸಚಿವ ಸ್ಥಾನ ವಂಚಿತರು ಪ್ರತ್ಯೇಕ ಸಭೆ ನಡೆಸುವಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಎಲ್ಲ ಶಾಸಕರೊಂದಿಗೆ ಮುಖ್ಯಮಂತ್ರಿ ನಿರಂತರ ಸಂಪರ್ಕದಲ್ಲಿದ್ದಾರೆ. ಕೊನೆ ಕ್ಷಣದಲ್ಲಿ ಕೈತಪ್ಪಿದವರು ಕೊಂಚ ಬೇಸರಗೊಂಡಿರಬಹುದು. ರಾಜಕೀಯದಲ್ಲಿ ಇವೆಲ್ಲ ಸಹಜ. ರಾಜಕೀಯದಲ್ಲಿ ಏರಿಳಿತಗಳು ಸಾಮಾನ್ಯ. ಶೀಘ್ರದಲ್ಲೇ ಎಲ್ಲವೂ ಬಗೆಹರಿದು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಲಿದ್ದೇವೆ. ಅಲ್ಲದೆ, ಯಾವುದೇ ಪರಿಸ್ಥಿತಿ ಎದುರಿಸಲು ಮುಖ್ಯಮಂತ್ರಿ ಸಮರ್ಥರಾಗಿದ್ದಾರೆ ಎಂದರು.

Latest Videos
Follow Us:
Download App:
  • android
  • ios