10 ಶಾಸಕರ ಪೈಕಿ 8 ಮಂದಿ ಇದೇ ಮೊದಲ ಸಲ ಮಂತ್ರಿ!
10 ಶಾಸಕರ ಪೈಕಿ 8 ಮಂದಿ ಇದೇ ಮೊದಲ ಸಲ ಮಂತ್ರಿ| ಜಾರಕಿಹೊಳಿ, ಆನಂದ ಸಿಂಗ್ ಹಿಂದೆಯೂ ಸಚಿವರಾಗಿದ್ದರು
ಬೆಂಗಳೂರು[ಫೆ.06]: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ಸಜ್ಜಾಗಿರುವ 10 ಶಾಸಕರ ಪೈಕಿ ಇಬ್ಬರನ್ನು ಹೊರತುಪಡಿಸಿ ಇನ್ನುಳಿದ ಎಂಟು ಶಾಸಕರು ಇದೇ ಮೊದಲ ಬಾರಿಗೆ ಸಚಿವರಾಗಿ ಪದಗ್ರಹಣ ಮಾಡುತ್ತಿದ್ದಾರೆ.
"
ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ಈ ಮೊದಲು ಸಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು, ನಾರಾಯಣಗೌಡ, ಡಾ.ಕೆ. ಸುಧಾಕರ್, ಬಿ.ಸಿ. ಪಾಟೀಲ್, ಶ್ರೀಮಂತ ಪಾಟೀಲ್, ಶಿವರಾಂ ಹೆಬ್ಬಾರ್ ಮತ್ತು ಗೋಪಾಲಯ್ಯ ಅವರು ಮೊದಲ ಬಾರಿಗೆ ಸಚಿವ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಸಣ್ಣ ಕೈಗಾರಿಕೆ ಸಚಿವರಾಗಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೌರಾಡಳಿತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆನಂದಸಿಂಗ್ ಅವರು ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದರು.
ಮೈತ್ರಿ ಸರ್ಕಾರ ಅವಧಿಯಲ್ಲಿ ಎಸ್.ಟಿ.ಸೋಮಶೇಖರ್ ಬಿಡಿಎ ಅಧ್ಯಕ್ಷರಾಗಿ, ಡಾ.ಕೆ.ಸುಧಾಕರ್ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಹಾಗೂ ಬೈರತಿ ಬಸವರಾಜು ಅವರು ಕರ್ನಾಟಕ ಸೋಪು ಮತ್ತು ಮಾರ್ಜಕ ಲಿಮಿಟೆಡ್ ಅಧ್ಯಕ್ಷರಾಗಿ ಅಲ್ಪ ಕಾಲ ಕಾರ್ಯನಿರ್ವಹಿಸಿದ್ದರು. ಇವರ ಜತೆಗೆ ನಾರಾಯಣಗೌಡ, ಬಿ.ಸಿ.ಪಾಟೀಲ್, ಶ್ರೀಮಂತ ಪಾಟೀಲ್, ಶಿವರಾಂ ಹೆಬ್ಬಾರ್ ಮತ್ತು ಗೋಪಾಲಯ್ಯ ಅವರು ಮೊದಲ ಬಾರಿಗೆ ಸಚಿವ ಭಾಗ್ಯ ಪಡೆದುಕೊಂಡಿದ್ದಾರೆ.
ಈ ಹತ್ತು ಶಾಸಕರು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.