ಬೆಂಗಳೂರು [ಜ.06]: ಬಹುನಿರೀಕ್ಷಿತ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳು ವಿದೇಶ ಪ್ರವಾಸ ಮುಗಿಸಿ ವಾಪಸಾದ ಬಳಿಕ ನಡೆಯುವ ಸಾಧ್ಯತೆಯಿದೆ.

ಈ ತಿಂಗಳ 21ರಿಂದ ನಾಲ್ಕೈದು ದಿನಗಳ ಕಾಲ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ ಅದಕ್ಕೂ ಮೊದಲು ಸಂಪುಟ ವಿಸ್ತರಣೆ ಕೈಗೊಂಡರೆ ಉದ್ಭವಿಸಬಹುದಾದ ಅಸಮಾಧಾನ ನಿಯಂತ್ರಿಸುವುದು ಕಷ್ಟವಾಗಬಹುದು ಎಂಬ ಚಿಂತನೆ ನಡೆದಿದೆ.

ಆದರೂ ಈ ಬಗ್ಗೆ ಮುಖ್ಯಮಂತ್ರಿಗಳು ಮುಂದಿನ ವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿದ ಬಳಿಕವೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಹೇಗಿದ್ದರೂ ಇದೀಗ ವಿಧಾನಮಂಡಲದ ಅಧಿವೇಶನ ಫೆಬ್ರವರಿ ತಿಂಗಳಿಗೆ ಮುಂದೂಡಲಾಗಿದೆ. ಹೀಗಿರುವಾಗ ಸಂಕ್ರಾಂತಿ ಮುಗಿದ ಬೆನ್ನಲ್ಲೇ ಸಂಪುಟ ವಿಸ್ತರಣೆ ಕೈಗೊಳ್ಳುವ ಬದಲು ಕೆಲದಿನಗಳವರೆಗೆ ಕಾದು ಅಂದರೆ, ಮುಖ್ಯಮಂತ್ರಿಗಳ ವಿದೇಶ ಪ್ರವಾಸ ಮುಗಿದ ಬಳಿಕ ಮಾಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ಆಡಳಿತಾರೂಢ ಬಿಜೆಪಿಯ ಹಲವು ಮುಖಂಡರು ಹಾಗೂ ಸಚಿವರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ವಾಲ್ಮೀಕಿ ಸಮಾಜಕ್ಕೆ ಮಂತ್ರಿಗಿರಿ: ಒಂದು ತೀರ್ಮಾನಕ್ಕೆ ಬಂದ BSY...

ಸಂಕ್ರಾಂತಿ ನಂತರ ಈ ತಿಂಗಳ 16 ಅಥವಾ 17ರಂದು ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಬಿರುಸಿನ ಚರ್ಚೆ ನಡೆದಿತ್ತು. ಹೆಚ್ಚು ವಿಳಂಬ ಮಾಡುವುದು ಬೇಡ ಎಂಬ ಒತ್ತಡವನ್ನು ಅರ್ಹ ಶಾಸಕರೂ ಹಾಕಿದ್ದರು. ಆದರೆ, ಅಧಿವೇಶನ ಇದೇ ತಿಂಗಳಲ್ಲಿ ನಡೆಯುತ್ತಿದ್ದರೆ ಕೇವಲ ಅರ್ಹ ಶಾಸಕರಿಗೆ ಮಾತ್ರ ಸಚಿವ ಸ್ಥಾನ ನೀಡಿ ವಿಸ್ತರಣೆ ಮಾಡುವ ಉದ್ದೇಶವನ್ನು ಯಡಿಯೂರಪ್ಪ ಹೊಂದಿದ್ದರು. ಇದೀಗ ಅಧಿವೇಶನವೇ ಮುಂದೂಡಲ್ಪಟ್ಟಿರುವುದರಿಂದ 11 ಅರ್ಹ ಶಾಸಕರಿಗೆ ಸಚಿವ ಸ್ಥಾನ ಕೊಟ್ಟನಂತರ ಉಳಿಯುವ ಐದು ಸ್ಥಾನಗಳನ್ನು ಯಾವಾಗ ಭರ್ತಿ ಮಾಡುವುದು? ಯಾರಿಗೆಲ್ಲ ಸಚಿವ ಸ್ಥಾನ ನೀಡುವುದು ಎಂಬುದನ್ನು ವರಿಷ್ಠರೊಂದಿಗೆ ಚರ್ಚಿಸಿಯೇ ವಿಸ್ತರಣೆ ಮಾಡೋಣ ಎಂಬ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.

ಪಕ್ಷಕ್ಕಾಗಿ ತ್ಯಾಗ ಮಾಡಲು ಸಿದ್ಧ: ಶ್ರೀರಾಮುಲು...

ಒಂದು ವೇಳೆ ಮುಖ್ಯಮಂತ್ರಿಗಳ ವಿದೇಶ ಪ್ರವಾಸಕ್ಕೂ ಮೊದಲೇ ತರಾತುರಿಯಲ್ಲಿ ವಿಸ್ತರಣೆ ಕೈಗೊಂಡಲ್ಲಿ ಅದರಿಂದ ಪಕ್ಷದಲ್ಲಿ ಭಿನ್ನಮತ ಉದ್ಭವಿಸಿದಲ್ಲಿ ಅದನ್ನು ಶಮನಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಇಲ್ಲದಿದ್ದರೆ ಕಷ್ಟವಾಗಬಹುದು ಎಂಬ ಅಭಿಪ್ರಾಯ ಅವರ ಆಪ್ತರಲ್ಲಿದೆ.

ಸಂಪುಟ ವಿಸ್ತರಣೆ ವಿಳಂಬ ಏಕೆ?

-ಅಧಿವೇಶನ ಮುಂದೂಡಿದ್ದರಿಂದ 11 ಅರ್ಹ ಶಾಸಕರಿಗೆ ಮಾತ್ರ ಈಗ ಮಂತ್ರಿಗಿರಿ ನೀಡಿ ಉಳಿದವರಿಗೆ ನಂತರ ನೀಡುವ ನಿರ್ಧಾರ ಬದಲು.

-ವಿದೇಶಕ್ಕೆ ತೆರಳುವ ಮುನ್ನ ತರಾತುರಿಯಲ್ಲಿ ಮಾಡಿದರೆ ಸಂಭವನೀಯ ಭಿನ್ನಮತ ಶಮನ ಕಷ್ಟವಾಗಬಹುದು.

-ಸಿಎಂ ಬೆಂಗಳೂರಿನಲ್ಲೇ ಇದ್ದರೆ ಭಿನ್ನಮತ ಪರಿಸ್ಥಿತಿ ನಿಭಾಯಿಸಬಹುದು. ಹೀಗಾಗಿ ವಿದೇಶದಿಂದ ಬಂದ ನಂತರ ವಿಸ್ತರಣೆಗೆ ಚಿಂತನೆ