ಸಂಪುಟ ಪುನಾರಚನೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆಯ ಆಧಾರದ ಮೇಲೆ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿ.ಎಸ್.ನಾಡಗೌಡ ಹೇಳಿದ್ದಾರೆ.
ಮುದ್ದೇಬಿಹಾಳ (ನ.11): ‘ಸಂಪುಟ ಪುನಾರಚನೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆಯ ಆಧಾರದ ಮೇಲೆ ಲಿಂಗಾಯತ ರೆಡ್ಡಿ ಹಾಗೂ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ’ ಎಂದು ಶಾಸಕ, ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಸುದೀರ್ಘ 45 ವರ್ಷಗಳ ರಾಜಕೀಯ ಅನುಭವ ಹಾಗೂ ಹಿರಿತನದ ಆಧಾರದ ಮೇಲೆ ನನಗೆ ಸೂಕ್ತ ಸ್ಥಾನಮಾನ ಮಾಡಿ ಗೌರವಿಸಬೇಕು. ಸಂಪುಟ ಪುನಾರಚನೆ ವೇಳೆ ನನಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ನನ್ನ ಮತಕ್ಷೇತ್ರದ ಜನರ ಒತ್ತಾಯ ಎಂದರು.
ಕಳೆದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನಮ್ಮ ಮತಕ್ಷೇತ್ರದ ಜನರಿಗೆ ಕಾಂಗ್ರೆಸ್‌ನ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ರಾಮಯ್ಯನವರು ಮಾತು ಕೊಟ್ಟಿದ್ದು, ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ, ಆರಂಭದಲ್ಲಿ ಅವಕಾಶ ಕೊಡಲಿಲ್ಲ. ಹೀಗಾಗಿ, ಸಂಪುಟ ಪುನಾರಚಣೆ ವೇಳೆ ನನಗೆ ಅವಕಾಶ ನೀಡಬೇಕೆಂದು ನಮ್ಮ ಮತಕ್ಷೇತ್ರದ ಜನರ ಒತ್ತಾಯದ ಕೂಗು ಕೇಳಿ ಬರುತ್ತಿದೆ. ಇಲ್ಲದಿದ್ದರೆ, ಪಕ್ಷದ ಮೇಲೆ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಆಗ ಪಕ್ಷವೂ ಮುಜುಗರಕ್ಕೆ ಒಳಪಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ನನ್ನ ಮತಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಬಾಕಿ ಉಳಿದಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದೇವೆ. ಸದ್ಯ ಅದು ಸಾಧ್ಯವಾಗುತ್ತಿಲ್ಲ. ಒಂದು ಮತಕ್ಷೇತ್ರ ಅಭಿವೃದ್ಧಿಯಾಗಬೇಕಿದ್ದರೆ ಮಂತ್ರಿಯಾಗಿದ್ದರಷ್ಟೇ ಸಾಧ್ಯ ಎನ್ನುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಹೀಗಾಗಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆಯ ಆಧಾರದ ಮೇಲೆ ಲಿಂಗಾಯತ ರೆಡ್ಡಿ ಹಾಗೂ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಮಂತ್ರಿ ಆಸೆಯನ್ನು ತೆರೆದಿಟ್ಟರು.
ನಾನು ಹಿರಿಯ
ಕೈಯಾಗ ಕಂಕಣ ಕಟ್ಟಿಕೊಂಡ ಮೇಲೆ ಏತಕ್ಕಾಗಿ ಕಟ್ಟಿಕೊಂಡಿದ್ದಾರೆ ಅಂತಾ ಎಲ್ಲರಿಗೆ ಗೊತ್ತಾಗುತ್ತದೆ. ಈಗಾಗಲೇ ನಾವು ಕೈಯಾಗ ಕಂಕಣ ಕಟ್ಟಿಕೊಂಡಿದ್ದೇವೆ. ಅಂದರೆ ಅದು ಸಾಧಿಸಬೇಕು ಅಂತಾ ಯಾವ ರಾಜಕಾರಣಿಗಾದರೂ ಇದ್ದೇ ಇರುತ್ತದೆ. ಉನ್ನತ ಮಟ್ಟದ ಭವಿಷ್ಯ ಹೊಂದಬೇಕೆನ್ನುವುದು ಎಲ್ಲರ ಮನಸ್ಸಿನಲ್ಲಿರುತ್ತದೆ. ನಾನು ಲಿಂಗಾಯತರಲ್ಲಿರುವಂತ ಒಳಪಂಗಡದ ಕೋಟಾದಲ್ಲಿ ಸಚಿವ ಸ್ಥಾನ ಕೇಳುತ್ತೇನೆ. ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಹಿರಿಯ ಶಾಸಕನಾಗಿದ್ದು, ಈ ಬಾರಿ ನನಗೊಂದು ಅವಕಾಶ ಕೊಡಬೇಕೆಂದು ಇವತ್ತೂ ಕೇಳುತ್ತೇನೆ, ನಾಳೆಯೂ ಕೇಳುತ್ತೇನೆ.
