ಕಾಂಗ್ರೆಸ್‌ನಲ್ಲಿ ನಾನು ಸೀನಿಯರ್‌ ಲೀಡರ್‌. ಈ ಹಿಂದೆಯೂ ನನಗೆ ಯಾವುದೇ ಬೇಡಿಕೆ ಇಲ್ಲದೆ ಸಚಿವ ಸ್ಥಾನ ನೀಡಿದ್ದರು. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಈ ಬಾರಿ ನನಗೆ ಸಚಿವ ಸ್ಥಾನ ಕೊಡಬಹುದು ಎನ್ನುವ ನಿರೀಕ್ಷೆಯಿದೆ.

ವಿಜಯಪುರ (ಅ.29): ಕಾಂಗ್ರೆಸ್‌ನಲ್ಲಿ ನಾನು ಸೀನಿಯರ್‌ ಲೀಡರ್‌. ಈ ಹಿಂದೆಯೂ ನನಗೆ ಯಾವುದೇ ಬೇಡಿಕೆ ಇಲ್ಲದೆ ಸಚಿವ ಸ್ಥಾನ ನೀಡಿದ್ದರು. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಈ ಬಾರಿ ನನಗೆ ಸಚಿವ ಸ್ಥಾನ ಕೊಡಬಹುದು ಎನ್ನುವ ನಿರೀಕ್ಷೆಯಿದೆ. ಆದರೆ, ನಾನು ಯಾರಿಗೂ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡುವುದಿಲ್ಲ ಎಂದು ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಶಾಸಕ ಸಿ.ಎಸ್.ನಾಡಗೌಡ ಹೇಳಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಈ ಹಿಂದೆ ಸಚಿವ ಸ್ಥಾನ ನೀಡುವ ಬಗ್ಗೆ ಆಶ್ವಾಸನೆ ನೀಡಲಾಗಿತ್ತು.

ಹಲವು ಸಲ ನನ್ನ ಹೆಸರು ಫೈನಲ್ ಆಗಿದ್ದು, ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ನನ್ನ ಕೈತಪ್ಪಿದೆ. ಈ ಬಾರಿ, ನನಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಅಂತಿಮವಾಗಿ, ಈ ಬಗ್ಗೆ ಹೈಕಮಾಂಡ್‌ ನಿರ್ಧಾರ ಕೈಗೊಳ್ಳಲಿದೆ ಎಂದರು. ಹಾಗಂತ, ಬೇರೆಯವರಿಗೆ ಸಚಿವ ಸ್ಥಾನ ನೀಡಬೇಡಿ ಎಂದು ನಾನು ಹೇಳುವುದಿಲ್ಲ. ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ ಎಲ್ಲರೂ ನಮ್ಮವರೇ. ಇನ್ನು, ರಾಜಕೀಯ ಅಂದ ಮೇಲೆ ಎಲ್ಲವೂ ಇರುತ್ತೆ. ಹಾಗೆಯೇ, ಕಾಂಗ್ರೆಸ್ ಪಕ್ಷದಲ್ಲಿಯೂ ಭಿನ್ನಾಭಿಪ್ರಾಯಗಳಿವೆ ನಿಜ. ಇಲ್ಲ ಅಂತೇನಿಲ್ಲ ಎಂದು ಹೇಳಿದರು.

ರಾತ್ರೊರಾತ್ರಿ ನನ್ನ ಹೆಸರು ಸಚಿವ ಪಟ್ಟಿಯಿಂದ ಔಟ್‌: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ. ಕಾಂಗ್ರೆಸ್‌ನಲ್ಲಿ ನನ್ನ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇದೆ ಎನ್ನುವುದಾದರೆ ಸಚಿವ ಸಂಪುಟ ಪುನಾರಚನೆ ವೇಳೆ ಹೈಕಮಾಂಡ್‌ ನಾಯಕರು ನನ್ನ ಹೆಸರನ್ನೂ ಪರಿಗಣಿಸುತ್ತಾರೆ ಎಂದು ಕೆಎಸ್‌ಡಿಎಲ್‌ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್‌.ನಾಡಗೌಡ ಹೇಳಿದ್ದಾರೆ. ಸಂಸ್ಥೆಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವಾಗಲೂ ಸಚಿವ ಸ್ಥಾನದ ಆಕಾಂಕ್ಷಿಯೇ. ಅದಕ್ಕಾಗಿ ಹೈಕಮಾಂಡ್‌ ನಾಯಕರ ಬಳಿ ಹೋಗಿ ನನ್ನ ಬಗ್ಗೆ ಹೇಳಿಕೊಳ್ಳುವುದಿಲ್ಲ. ಅಪ್ಪಾಜಿ ನಾಡಗೌಡ ಯಾರು, ಪಕ್ಷ ನಿಷ್ಠೆ ಏನೆಂದು ಹೈಕಮಾಂಡ್‌ ನಾಯಕರಿಗೆ ಗೊತ್ತಿಲ್ಲದಿದ್ದರೆ ಹೋಗಿ ಮಾತನಾಡಬೇಕಿತ್ತು. ಹಾಗೇನಾದರೂ ಹೋದರೆ ಸಚಿವ ಸ್ಥಾನ ನೀಡದ ವ್ಯಥೆ ಹೇಳಿಕೊಳ್ಳಬೇಕಾಗುತ್ತದೆ. 30-40 ವರ್ಷಗಳಿಂದ ರಾಜಕೀಯ ಮಾಡಿ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ಪ್ರಾಮಾಣಿಕತೆಗೆ ಬೆಲೆ ಇದ್ದರೆ, ದುಡಿಮೆಯನ್ನು ಗೌರವಿಸಬೇಕೆಂದಿದ್ದರೆ ಖಂಡಿತವಾಗಿ ನಾನು ಸಚಿವನಾಗುತ್ತೇನೆ ಎಂದರು.

ದೆಹಲಿ ಪಟ್ಟಿಯಲ್ಲಿ ನನ್ನ ಹೆಸರಿತ್ತು

ಸರ್ಕಾರ ರಚನೆಯಾದ ಸಮಯದಲ್ಲಿ ದೆಹಲಿಯಿಂದ ಬಂದ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಇಂಧನ ಇಲಾಖೆಯನ್ನು ನೀಡಲೂ ನಿರ್ಧರಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ನನ್ನನ್ನು ಕೈಬಿಡಲಾಗಿದೆ. ನನಗೆ ಸಚಿವ ಸ್ಥಾನ ತಪ್ಪುವಲ್ಲಿ ಕೈವಾಡವಿತ್ತು. ಅದು ರಾಜಕಾರಣದಲ್ಲಿ ಸಹಜ. ಅಪ್ಪಾಜಿ ನಾಡಗೌಡರನ್ನು ಸಣ್ಣವನನ್ನಾಗಿ ಮಾಡಿದರೆ ಪಕ್ಷಕ್ಕೆ ಒಳ್ಳೆಯದಲ್ಲ. ಪಕ್ಷದ ನಿಷ್ಠಾವತರನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ ಎಂದರೆ ಕಾರ್ಯಕರ್ತರು ಕೂಡ ದೂರವಾಗುತ್ತಾರೆ. ಈ ಬಾರಿ ನಾವು ಅಧಿಕಾರಕ್ಕೆ ಬಂದಿದ್ದೇವೆ. ಮುಂದೆ ಅಧಿಕಾರದಿಂದ ದೂರವಾಗಬಹುದು. ಇದೇ ರೀತಿಯಾದರೆ ಮುಂದೆ ಅಧಿಕಾರಕ್ಕೆ ಬರುತ್ತೇವೋ, ಇಲ್ಲವೋ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ ಎಂದು ಹೇಳಿದರು. ನಾಯಕತ್ವ ವಿಚಾರವಾಗಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಭಾವನಾತ್ಮಕವಾಗಿ ಸತೀಶ್‌ ಜಾರಕಿಹೊಳಿ ಅವರನ್ನು ಹಾಡಿ ಹೊಗಳಿರಬಹುದು. ಆದರೆ, ಅದು ಹೈಕಮಾಂಡ್‌ ನಾಯಕರು, ಸಿದ್ದರಾಮಯ್ಯ ಅವರ ಅಭಿಪ್ರಾಯ ಎಂದು ತಿಳಿಯಬಾರದು ಎಂದರು.