Asianet Suvarna News Asianet Suvarna News

ಸಂಪುಟ ಸಂಕಟ ಮುಕ್ತಾಯ: ಸಿಎಂ ಮುಂದೆ ಇನ್ನೂ ಇವೆ 2 ಸವಾಲುಗಳು!

ಸಂಪುಟ ಸರ್ಕಸ್ ಮುಕ್ತಾಯ| 10 ನೂತನ ಶಾಸಕರಿಗೆ ಮಂತ್ರಿಗಿರಿ| ಇನ್ನೂ ಮುಗಿದಿಲ್ಲ ಸಮಸ್ಯೆ| ಸಿಎಂ ಮುಂದಿವೆ 2 ಸವಾಲುಗಳು

Karnataka Cabinet Expansion BS Yediyurappa To Face 2 More Challenges
Author
Bangalore, First Published Feb 7, 2020, 7:43 AM IST

ಬೆಂಗಳೂರು[ಫೆ.07]: ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಮಾಡುವ ಮೂಲಕ ಎರಡು ತಿಂಗಳ ಕುತೂಹಲಕ್ಕೆ ತೆರೆ ಎಳೆದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಎರಡು ಪ್ರಮುಖ ರಾಜಕೀಯ ಸವಾಲುಗಳು ಎದುರಾಗಿವೆ.

"

ಒಂದು, ಯಾರಿಗೂ ಅಸಮಾಧಾನವಾಗದಂತೆ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವುದು. ಎರಡು, ಸಚಿವ ಸ್ಥಾನದ ಮೇಲೆ ಕಣ್ಣಿರಿಸಿರುವ ಸೋತವರು, ಕ್ಷೇತ್ರ ತ್ಯಾಗ ಮಾಡಿದವರು ಹಾಗೂ ಪಕ್ಷದ ಪ್ರಮುಖ ಆಕಾಂಕ್ಷಿಗಳನ್ನು ಸಮಾಧಾನಪಡಿಸುವುದು.

ಇವೆರಡೂ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಿದರಷ್ಟೇ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ತುಸು ನಿಟ್ಟುಸಿರು ಬಿಟ್ಟು ಸುಸೂತ್ರವಾಗಿ ಆಡಳಿತ ನಡೆಸಬಹುದು. ಇಲ್ಲದಿದ್ದರೆ ಇವೇ ದೊಡ್ಡ ಸಮಸ್ಯೆಯಾಗಿ ರೂಪುಗೊಂಡು ಸಂಕಷ್ಟತಂದೊಡ್ಡುವ ಅಪಾಯವೂ ಇದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 5 ತಿಂಗಳು ಕಳೆದಿದ್ದರೂ ಉಪಚುನಾವಣೆ ಹೊರತುಪಡಿಸಿದರೆ ಇದುವರೆಗೆ ಬೇರೆ ಪ್ರಮುಖವಾದ ರಾಜಕೀಯ ಸವಾಲುಗಳು ಎದುರಾಗಿರಲಿಲ್ಲ. ವಾಸ್ತವವಾಗಿ ಇನ್ನು ಮುಂದೆ ಸವಾಲುಗಳ ಸಾಲೇ ಎದುರಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಈಗ ಸಂಪುಟ ಸೇರಿರುವ ಹತ್ತು ಮಂದಿ ಹಿಂದೆ ಅವರಿದ್ದ ಪಕ್ಷದಲ್ಲಿ ಅಬ್ಬರಿಸಿ ಬಂದವರು. ಕಳೆದ ಎರಡು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಕಾಯುತ್ತಲೇ ಇದ್ದರು. ಈಗಾಗಲೇ ಹಲವರು ಬಹಿರಂಗವಾಗಿಯೇ ತಮಗೆ ಇಂಥ ಖಾತೆಗಳ ಮೇಲೆ ಕಣ್ಣಿದೆ ಎಂಬುದನ್ನು ಹೇಳಿದ್ದಾರೆ. ಹೀಗಾಗಿ, ಅವರಿಗೆ ಸಮಾಧಾನವಾಗುವಂತೆ ಅವರವರ ಅನುಭವ ಮತ್ತು ಆಶಯಕ್ಕೆ ಅನುಗುಣವಾಗಿ ಖಾತೆಗಳನ್ನು ಹಂಚುವುದರ ಜೊತೆಗೆ ಪಕ್ಷದ ತತ್ವ ಸಿದ್ಧಾಂತಕ್ಕೆ ಅನುಗುಣವಾಗಿ ಸರ್ಕಾರದ ಆಡಳಿತದಲ್ಲಿ ಅವರು ಬೆರೆಯುವಂತೆ ಮಾಡಬೇಕಿದೆ.

ಇದೇ ಶನಿವಾರದೊಳಗೆ ಖಾತೆಗಳನ್ನು ಹಂಚಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇನೋ ಹೇಳಿದ್ದಾರೆ. ಅವರು ಹೇಳಿದಂತೆ ಶನಿವಾರ ಖಾತೆ ಹಂಚಿಕೆಯಾಗುವ ಬಗ್ಗೆ ಅನುಮಾನವಿದೆ. ಖಾತೆಗಳ ಹಂಚಿಕೆ ಸಂಬಂಧ ಮತ್ತೊಮ್ಮೆ ವರಿಷ್ಠರೊಂದಿಗೆ ಸಮಾಲೋಚನೆ ನಡೆಸುವ ಇಂಗಿತವನ್ನೂ ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ. ವರಿಷ್ಠರತ್ತ ಬೆರಳು ತೋರಿಸಿಯೇ ಖಾತೆಗಳ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಇದೆ.

ಅವಕಾಶವಂಚಿತರಿಗೆ ಮುಂದಿನ ಬಾರಿ ಅವಕಾಶ: ಬೊಮ್ಮಾಯಿ

ಜೊತೆಗೆ ಸಂಪುಟದಲ್ಲಿ ಈ ನೂತನ ಶಾಸಕರು ಹಾಗೂ ಇದುವರೆಗೆ ಸಚಿವ ಸ್ಥಾನದಲ್ಲಿರುವವರ ನಡುವೆ ಆಡಳಿತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತಿಕ್ಕಾಟ ಅಥವಾ ಶೀತಲ ಸಮರ ನಡೆಯದಂತೆ ಎಚ್ಚರಿಕೆ ವಹಿಸುವ ಜವಾಬ್ದಾರಿಯೂ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರ ಮೇಲೆಯೇ ಇದೆ.

ಆಕಾಂಕ್ಷಿಗಳ ಸಮಾಧಾನ ಹೇಗೆ?:

ಇನ್ನು ಸಚಿವ ಸ್ಥಾನದ ಮೇಲೆ ಕಣ್ಣಿರಿಸಿರುವವರನ್ನು ಸಮಾಧಾನಪಡಿಸುವುದೂ ಯಡಿಯೂರಪ್ಪ ಅವರಿಗೆ ಎದುರಾಗಿರುವ ಮತ್ತೊಂದು ಸವಾಲು.

ಆಕಾಂಕ್ಷಿಗಳಲ್ಲಿ ಎರಡು ಗುಂಪುಗಳಿವೆ. ಕಳೆದ ಉಪಚುನಾವಣೆಯಲ್ಲಿ ತಮ್ಮ ಕ್ಷೇತ್ರ ಬಿಟ್ಟುಕೊಟ್ಟಆರ್‌.ಶಂಕರ್‌, ಸೋಲು ಅನುಭವಿಸಿದ ಎಂ.ಟಿ.ಬಿ.ನಾಗರಾಜ್‌ ಮತ್ತು ಎಚ್‌.ವಿಶ್ವನಾಥ್‌ ಅವರನ್ನು ಮುಂದಿನ ವಿಧಾನಪರಿಷತ್‌ ಚುನಾವಣೆವರೆಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕದಂತೆ ನೋಡಿಕೊಳ್ಳಬೇಕು. ಮುಂದೆ ಪರಿಷತ್‌ ಚುನಾವಣೆ ನಂತರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೊ ಅಥವಾ ಬೇರೆ ಸ್ಥಾನಮಾನ ನೀಡಬೇಕೊ ಎಂಬುದನ್ನೂ ಸೂಕ್ಷ್ಮವಾಗಿ ನಿಭಾಯಿಸಬೇಕಾಗಿದೆ.

ಪಕ್ಷದ ಆಕಾಂಕ್ಷಿಗಳ ಗುಂಪು ಮತ್ತೊಂದು. ಹಿರಿಯ ಸಚಿವರಾದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್‌ ಅವರ ಹೆಸರನ್ನು ಸಂಪುಟ ವಿಸ್ತರಣೆಯ ಕೊನೆಯ ಹಂತದಲ್ಲಿ ಕೈಬಿಡಲಾಗಿದೆ. ಅವರ ಅಸಮಾಧಾನ ತೀವ್ರಗೊಳ್ಳದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಇನ್ನುಳಿದ ಪಕ್ಷದ ಆಕಾಂಕ್ಷಿಗಳನ್ನು ನಿಗಮ- ಮಂಡಳಿಗಳ ಅಧ್ಯಕ್ಷಗಿರಿ ಮತ್ತಿತರ ಸ್ಥಾನಮಾನದ ಮೂಲಕ ಮನವೊಲಿಸಬೇಕಾಗಿದೆ.

ಬಿಎಸ್‌ವೈ ಸಂಪುಟ: ಬೆಂಗಳೂರು, ಬೆಳಗಾವಿಗೆ ಸಿಂಹಪಾಲು, 13 ಜಿಲ್ಲೆಗಳಿಗೆ ಪ್ರಾತಿನಿಧ್ಯವಿಲ್ಲ!

2 ಸವಾಲುಗಳು

1. ಯಾರಿಗೂ ಅತೃಪ್ತಿ ಆಗದಂತೆ ಖಾತೆ ಹಂಚಿಕೆ

2. ಸಂಪುಟ ವಂಚಿತರಿಗೆ ಸೂಕ್ತ ಸ್ಥಾನಮಾನ ನೀಡಿಕೆ

- ಆಕಾಂಕ್ಷಿಗಳ ಪೈಕಿ ಕ್ಷೇತ್ರ ಬಿಟ್ಟುಕೊಟ್ಟಶಂಕರ್‌, ಸೋತ ಎಂಟಿಬಿ ನಾಗರಾಜ್‌ ಹಾಗೂ ಎಚ್‌.ವಿಶ್ವನಾಥ್‌ ಒಂದು ಕಡೆ

- ಇವರನ್ನು ಪರಿಷತ್‌ ಚುನಾವಣೆವರೆಗೆ ಸಂಭಾಳಿಸಬೇಕು. ಬಳಿಕ ಸಚಿವ ಸ್ಥಾನವೋ, ಬೇರೆ ಹುದ್ದೆಯೋ ನಿರ್ಧರಿಸಬೇಕು

- ಇನ್ನೊಂದು ಕಡೆ, ಕೊನೆಯ ಕ್ಷಣದಲ್ಲಿ ಕೈಬಿಟ್ಟಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಸಿ.ಪಿ.ಯೋಗೇಶ್ವರ್‌

- ಅವರ ಅತೃಪ್ತಿ ಹೆಚ್ಚದಂತೆ ನೋಡಿಕೊಳ್ಳುವುದು. ಇತರೆ ಆಕಾಂಕ್ಷಿಗಳಿಗೆ ನಿಗಮ-ಮಂಡಳಿ ಸ್ಥಾನಮಾನ ನೀಡುವ ಕಸರತ್ತು

Follow Us:
Download App:
  • android
  • ios