ಬೆಂಗಳೂರು[ಫೆ.07]: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳ ಪ್ರಾತಿನಿಧ್ಯದಲ್ಲೂ ಬದಲಾವಣೆ ಉಂಟಾಗಿದೆ. ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಒಟ್ಟು 34 ಮಂದಿ ಗಾತ್ರದ ಸಚಿವ ಸಂಪುಟದಲ್ಲಿ ಈಗ 28 ಸ್ಥಾನಗಳು ಭರ್ತಿಯಾಗಿವೆ. ಆದರೆ, ರಾಜ್ಯದ 30 ಜಿಲ್ಲೆಗಳ ಪೈಕಿ 13 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯವೇ ಸಿಕ್ಕಿಲ್ಲ.

ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಧಾನಿ ಬೆಂಗಳೂರು ಸಹಜವಾಗಿಯೇ ಸಂಪುಟದಲ್ಲೂ ಸಿಂಹಪಾಲು ಪಡೆದಿದ್ದು, ಒಂದು ಉಪಮುಖ್ಯಮಂತ್ರಿ ಸ್ಥಾನ ಸೇರಿದಂತೆ ಏಳು ಮಂದಿ ಸಚಿವ ಸ್ಥಾನ ಪಡೆದಿದೆ. ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌, ವಿ.ಸೋಮಣ್ಣ, ಎಸ್‌.ಸುರೇಶ್‌ ಕುಮಾರ್‌, ಕೆ.ಗೋಪಾಲಯ್ಯ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ ಅವರು ಬೆಂಗಳೂರು ನಗರ ಜಿಲ್ಲೆಯನ್ನು ಪ್ರತಿನಿಧಿಸುವ ಸಚಿವರಾಗಿದ್ದಾರೆ.

ಎರಡನೆಯ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ನಂತರದ ಸ್ಥಾನದಲ್ಲಿದೆ. ಒಟ್ಟು ನಾಲ್ವರು ಸಂಪುಟದಲ್ಲಿ ಸ್ಥಾನ ಪಡೆದಂತಾಗಿದೆ. ಮೊದಲ ಸಚಿವ ಸಂಪುಟ ರಚನೆಯಾದ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ್‌ ಸವದಿ ಮತ್ತು ಶಶಿಕಲಾ ಜೊಲ್ಲೆ ಮಾತ್ರ ಪ್ರತಿನಿಧಿಸುತ್ತಿದ್ದರು. ಇದೀಗ ರಮೇಶ್‌ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್‌ ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ತವರು ಜಿಲ್ಲೆಗೆ ಎರಡು ಸಚಿವ ಸ್ಥಾನಗಳು ದೊರಕಿವೆ. ಶಿವಮೊಗ್ಗ ಜಿಲ್ಲೆಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಪ್ರತಿನಿಧಿಸಿದ್ದಾರೆ. ಹಾವೇರಿ ಜಿಲ್ಲೆಗೂ ಎರಡು ಸಚಿವ ಸ್ಥಾನ ಲಭಿಸಿವೆ. ಬಸವರಾಜ ಬೊಮ್ಮಾಯಿ ಮತ್ತು ಬಿ.ಸಿ.ಪಾಟೀಲ್‌ಗೆ ಸಚಿವ ಸ್ಥಾನ ಲಭಿಸಿದೆ.

ಇನ್ನುಳಿದಂತೆ 13 ಜಿಲ್ಲೆಗಳಿಗೆ ತಲಾ ಒಂದೊಂದು ಸಚಿವ ಸ್ಥಾನ ದೊರಕಿದೆ. ಬಾಗಲಕೋಟೆ ಜಿಲ್ಲೆಯಿಂದ ಗೋವಿಂದ ಕಾರಜೋಳ, ಚಿಕ್ಕಮಗಳೂರು ಜಿಲ್ಲೆಯಿಂದ ಸಿ.ಟಿ.ರವಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಡಾ.ಕೆ.ಸುಧಾಕರ್‌, ಧಾರವಾಡ ಜಿಲ್ಲೆಯಿಂದ ಜಗದೀಶ್‌ ಶೆಟ್ಟರ್‌, ಚಿತ್ರದುರ್ಗ ಜಿಲ್ಲೆಯಿಂದ ಬಿ.ಶ್ರೀರಾಮುಲು, ಬಳ್ಳಾರಿ ಜಿಲ್ಲೆಯಿಂದ ಆನಂದ್‌ ಸಿಂಗ್‌, ಉಡುಪಿ ಜಿಲ್ಲೆಯಿಂದ ಕೋಟ ಶ್ರೀನಿವಾಸ ಪೂಜಾರಿ, ತುಮಕೂರು ಜಿಲ್ಲೆಯಿಂದ ಜೆ.ಸಿ.ಮಾಧುಸ್ವಾಮಿ, ಗದಗ ಜಿಲ್ಲೆಯಿಂದ ಸಿ.ಸಿ.ಪಾಟೀಲ್‌, ಕೋಲಾರ ಜಿಲ್ಲೆಯಿಂದ ಎಚ್‌.ನಾಗೇಶ್‌, ಬೀದರ್‌ ಜಿಲ್ಲೆಯಿಂದ ಪ್ರಭು ಚವ್ಹಾಣ್‌, ಉತ್ತರ ಕನ್ನಡ ಜಿಲ್ಲೆಯಿಂದ ಶಿವರಾಮ್‌ ಹೆಬ್ಬಾರ್‌, ಮಂಡ್ಯ ಜಿಲ್ಲೆಯಿಂದ ನಾರಾಯಣ ಗೌಡ ಸಚಿವರಾಗಿದ್ದಾರೆ.

ಆದರೆ, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಕೊಡಗು, ಮೈಸೂರು, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ದಾವಣಗೆರೆ ಜಿಲ್ಲೆಗಳಿಗೆ ಯಾವುದೇ ಸಚಿವ ಸ್ಥಾನ ದೊರಕಿಲ್ಲ.

ಸಚಿವ ಸ್ಥಾನ ಲಭಿಸಿರುವ ಜಿಲ್ಲೆಗಳು:

ಬೆಂಗಳೂರು ನಗರ ಜಿಲ್ಲೆ - 7

ಬೆಳಗಾವಿ - 4

ಶಿವಮೊಗ್ಗ - 2

ಹಾವೇರಿ - 2

ಬಾಗಲಕೋಟೆ - 1

ಚಿಕ್ಕಮಗಳೂರು - 1

ಹುಬ್ಬಳ್ಳಿ-ಧಾರವಾಡ - 1

ಚಿತ್ರದುರ್ಗ - 1

ಬಳ್ಳಾರಿ - 1

ಉಡುಪಿ - 1

ತುಮಕೂರು - 1

ಗದಗ - 1

ಕೋಲಾರ - 1

ಬೀದರ್‌ - 1

ಉತ್ತರ ಕನ್ನಡ - 1

ಮಂಡ್ಯ - 1

ಚಿಕ್ಕಬಳ್ಳಾಪುರ- 1

ಸಚಿವ ಸ್ಥಾನ ವಂಚಿತ ಜಿಲ್ಲೆಗಳು:

* ಕಲಬುರಗಿ

* ರಾಯಚೂರು

* ಯಾದಗಿರಿ

* ಕೊಪ್ಪಳ

* ರಾಮನಗರ

* ಬೆಂಗಳೂರು ಗ್ರಾಮಾಂತರ

* ಚಾಮರಾಜನಗರ

* ಕೊಡಗು

* ಮೈಸೂರು

* ದಕ್ಷಿಣ ಕನ್ನಡ

* ಹಾಸನ

* ವಿಜಯಪುರ

* ದಾವಣಗೆರೆ