ಬೆಳಗಾವಿ/ಬಸವಕಲ್ಯಾಣ (ಮಾ.24): ಏ.17 ರಂದು ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಂಗಳವಾರ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಬ್ಬರು ಅಭ್ಯರ್ಥಿಗಳು ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದ್ದರೆ, ಬಸವಕಲ್ಯಾಣ ವಿಧನಸಭಾ ಕ್ಷೇತ್ರಕ್ಕೆ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ. 

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರಗೋಲ ಗ್ರಾಮದ ವೆಂಕಟೇಶ್ವರ ಸ್ವಾಮೀಜಿ ಅವರು ಬಿಜೆಪಿ ಇಂದ ಎರಡು ಹಾಗೂ ಹಿಂದುಸ್ಥಾನ ಜನತಾ ಪಾರ್ಟಿಯಿಂದ ಒಂದು ಹೀಗೆ ಒಟ್ಟು ಮೂರು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರಗಳಿಗೆ ಪ್ರಭಾಕರ ಕೋರೆ ಮತ್ತು ರಮೇಶ್‌ ಲಕ್ಷ್ಮಣರಾವ್‌ ಜಾರಕಿಹೊಳಿ ಸೂಚಕರೆಂದು ಉಲ್ಲೇಖಿಸಲಾಗಿದೆ.

ಬೆಳಗಾವಿ ಬೈ ಎಲೆಕ್ಷನ್‌ಗೆ ಅಭ್ಯರ್ಥಿ ಘೋಷಣೆಯಾಗಿಲ್ಲ, ಆಗಲೇ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ ಸ್ವಾಮೀಜಿ ..

 ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ಶ್ರೀಕಾಂತ ಪಡಸಲಗಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಸವಕಲ್ಯಾಣ ವಿಧನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಬೆಂಗಳೂರಿನ ನಿವಾಸಿ ಅಂಬ್ರೋಸ್‌ ಡಿ.ಮೆಲ್ಗೋ ಅವರು ನಾಮಪತ್ರ ಸಲ್ಲಿಸಿದ್ದಾರೆ.