Asianet Suvarna News Asianet Suvarna News

ಉಪಸಮರಕ್ಕೆ ಕ್ಲೈಮ್ಯಾಕ್ಸ್: ಬಹಿರಂಗ ಪ್ರಚಾರಕ್ಕೆ ತೆರೆ, ಮದ್ಯಪ್ರಿಯರಿಗೆ ಬರೆ..!

ಉಪಚುನಾವಣೆ ಸಮರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಅಬ್ಬರದ ಪ್ರಚಾರಕ್ಕೆ ಮಂಗಳವಾರ ಸಂಜೆ ತೆರೆ ಬಿದ್ದಿದ್ದು, ಮನೆ ಮನೆ ಪ್ರಚಾರಕ್ಕೆ ಚಾಲನೆ ಸಿಕ್ಕಿದೆ. ಅಭ್ಯರ್ಥಿಗಳು ಹಾಗೂ ಮತದಾರರನ್ನು ಹೊರತುಪಡಿಸಿ, ಗೆಸ್ಟ್ ಆಗಿಬಂದ ನಾಯಕರು ಕ್ಷೇತ್ರದಿಂದ ಹೊರಗುಳಿಬೇಕಿದೆ. ಇನ್ನು ಉಪಚುನಾವಣೆಗೂ ಸಹ ಆಯೋಗ ಭರ್ಜರಿ ಸಿದ್ಧತೆಗಳನ್ನು ಸಹ ಮಾಡಿಕೊಂಡಿದೆ. 

karnataka bypoll 2019 Public campaign ends today
Author
Bengaluru, First Published Dec 3, 2019, 7:47 PM IST

ಬೆಂಗಳೂರು, [ಡಿ.03]: 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಅಬ್ಬರಿಸಿ ಬೊಬ್ಬಿರಿಯುವ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 6 ಗಂಟೆಗೆ ತೆರೆ ಬಿದ್ದಿದೆ. ಗುರುವಾರ ಮತದಾನ ನಡೆಯಲಿದ್ದು, ಬುಧವಾರ ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ.

ತೆರೆ ಬೀಳುವ ಮುನ್ನ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಕೊನೆ ಕಸರತ್ತಿನಲ್ಲಿ ಏನಾದರೂ ವರ್ಕೌಟ್ ಆಗಬಹುದೆಂದು ಅಬ್ಬರದ ಪ್ರಚಾರ ಮಾಡಿ ಆಯಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದರು. 

ಮೂರು ಪಕ್ಷದ ನಾಯಕರುಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ರೋಡ್ ಶೋ, ಪ್ರಚಾರ ಸಭೆ, ಜನರೊಂದಿಗೆ ಮಾತುಕತೆ, ಮುಖಂಡರ ಭೇಟಿ, ಸರಣಿ ಸಭೆಗಳು, ರಣವ್ಯೂಹ ರಚನೆ, ತಂತ್ರ-ಪ್ರತಿತಂತ್ರ ಹೀಗೆ ಉಪಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು  ಶತ ಪ್ರಯತ್ನಗಳನ್ನೇ ಮಾಡಿದರು.

ಡಿ. 5ರಂದು ಸರ್ಕಾರಿ ರಜೆ: ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ

15 ದಿನ ಅಬ್ಬರಿಸಿ ಬೊಬ್ಬಿರಿದ ನಾಯಕರು
ಕಳೆದ 15  ದಿನಗಳಿಂದ ಚಳಿ, ಬಿಸಿಲನ್ನೂ ಲೆಕ್ಕಿಸದೇ ಅಭ್ಯರ್ಥಿಗಳು ಹಾಗೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಮತದಾರರ ಮನವೊಲಿಸಲು ಪ್ರಯತ್ನಿಸಿದರು.ಅದರಲ್ಲೂ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅಂತೂ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳೆನ್ನದೆ 15 ಕ್ಷೇತ್ರಗಳಲ್ಲಿ ಅಬ್ಬರಿಸಿ ಬೊಬ್ಬಿರಿದರು. ಯಡಿಯೂರಪ್ಪಗೆ ಕೆಲ ನಾಯಕರು ಸಾಥ್ ನೀಡಿದ್ದರೆ, ಸಿದ್ದರಾಮಯ್ಯ ಏಕಾಂಗಿಯಾಗಿ ಮತಬೇಟಿ ಮಾಡಿದರು.

ಆರೋಪ-ಪ್ರತ್ಯಾರೋಪಗಳ ಸುರಿಮಳೆ
ಹೌದು...ಸಮಾವೇಶ, ರೋಡ್ ಶೋಗಳಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ ಪಕ್ಷಗಳು ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪಗಳ ಸುರಿಮಳೆಗೈದಿವೆ. ಇನ್ನು ಕೆಲ ನಾಯಕರು ವೈಯಕ್ತಿ ವಿಚಾರಳನ್ನಿಟ್ಟುಕೊಂಡು ಟೀಕಿಸಿದ್ರೆ, ಇನ್ನೂ ಕೆಲವರು ರಾಜಕೀಯವಾಗಿ ಪರಸ್ಪರ ಮಾತಿನಲ್ಲಿ ಕಿತ್ತಾಡಿಕೊಂಡಿದ್ದಾರೆ. ಇದರ ಮಧ್ಯೆ ಹಾಸ್ಯ ಚಟಾಕೆ ಹಾರಿಸಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು.

ಈರುಳ್ಳಿ ಜೊತೆ ಸಿಲಿಂಡರ್ ಬೆಲೆ ಹೆಚ್ಚಳ, ಸ್ಟಾರ್ ನಟನ ಜೊತೆ ರಶ್ಮಿಕಾ ನಟಿಸಲ್ಲ; ಡಿ.3ರ ಟಾಪ್ 10 ಸುದ್ದಿ!

ಮನೆ ಮೆನೆ ಪ್ರಚಾರಕ್ಕೆ ಅವಕಾಶ
ಇನ್ನೇನಿದ್ದರೂ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದ್ದು, ಅಭ್ಯರ್ಥಿಗಳು ಹಾಗೂ ಮತದಾರರನ್ನು ಹೊರತುಪಡಿಸಿ, ಉಳಿದವರು ಗೆಸ್ಟ್ ಗಳು ಆಯಾ ಕ್ಷೇತ್ರದಿಂದ ಹೊರಗುಳಿಯಬೇಕಿದೆ.  ಮತಯಾಚನೆಗೆ ನಾಳೆ [ಬುಧವಾರ] ಕಾಲಾವಕಾಶವಿದ್ದು, ಅಭ್ಯರ್ಥಿಗಳು ಮಾತ್ರ ಸ್ಥಳೀಯ ಮುಖಂಡರೊಂದಿಗೆ ಮತದಾರನ ಮನಗೆಲ್ಲಲು ಕೊನೆ ಹಂತದ ಕಸರತ್ತು ನಡೆಸಲಿದ್ದಾರೆ.

ಬೈ ಎಲೆಕ್ಷನ್ ಲೆಕ್ಕಾಚಾರ ಜೋರು
ಸಿಎಂ ಬಿ.ಎಸ್‌. ಯಡಿಯೂರಪ್ಪಗೆ ಈ ಉಪ ಸಮರ ಅಗ್ನಿಪರೀಕ್ಷೆಯಾಗಿದ್ದರೆ, ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿಗೆ ದೊಡ್ಡ ಸವಾಲಾಗಿದೆ. ಸರ್ಕಾರವನ್ನು ಉಳಿಸಿಕೊಳ್ಳಲು ಅಗತ್ಯವಿರುವ ಸಂಖ್ಯಾಬಲ ದಾಟಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಿದ್ದರೆ ಮತ್ತೆ ರಾಜ್ಯದಲ್ಲಿ ಮೈತ್ರಿ ಸರಕಾರ ರಚಿಸುವ ಕನಸಿನೊಂದಿಗೆ ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳು ಅತಂತ್ರ ಫಲಿತಾಂಶ ನಿರೀಕ್ಷಿಸುತ್ತಿವೆ.

15 ಕ್ಷೇತ್ರಗಳಿಗೆ ಉಪ ಚುನಾವಣೆ: ಪೆಂಡಿಂಗ್ ಇದ್ದ ಮತ ಎಣಿಕೆ ದಿನಾಂಕ ಪ್ರಕಟ

ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1.ಗೋಕಾಕ್, 2.ಅಥಣಿ, 3.ಕಾಗವಾಡ [ಬೆಳಗಾವಿ], 4. ರಾಣೇಬೆನ್ನೂರು, 5. ಹಿರೇಕೆರೂರು [ಹಾವೇರಿ], 6. ಕೆ.ಆರ್.ಪುರಂ, 7.ಯಶವಂತಪುರ, 8. ಶಿವಾಜಿನಗರ, 9. ಮಾಹಾಲಕ್ಷ್ಮೀ ಲೇಔಟ್ [ಬೆಂಗಳೂರು], 10.ಯಲ್ಲಾಪುರ [ಉತ್ತರ ಕನ್ನಡ] 11. ಕೆ.ಆರ್.ಪೇಟೆ [ಮಂಡ್ಯ], 12. ಹುಣಸೂರು [ಮೈಸೂರು], 13. ಚಿಕ್ಕಬಳ್ಳಾಪುರ, 14. ಹೊಸಕೋಟೆ [ಬೆಂಗಳೂರು ಗ್ರಾಮಾಂತರ] ಹಾಗೂ 15. ವಿಜಯನಗರ [ಬಳ್ಳಾರಿ]

ಮತದಾನಕ್ಕೆ ಚುನಾವಣೆ ಆಯೋಗ ಸಿದ್ಧ
ಉಪಚುನಾವಣೆ ಮತದಾನಕ್ಕಾಗಿ ಚುನಾವಣಾ ಆಯೋಗ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಗುರುವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮಂಗಳವಾರ ಸಂಜೆಯಿಂದ  6ರಿಂದ 48 ಗಂಟೆ ಕಾಲ  ಆಯಾ ಕ್ಷೇತ್ರಗಳ ವ್ಯಾಪ್ತಿಯ ಮದ್ಯದಂಗಡಿಗಳು ಬಂದ್ ಗೆ ಈಗಾಗಲೇ ಚುನಾವಣೆ ಆಯೋಗ  ಆದೇಶ ಹೊರಡಿಸಿದೆ.  4185 ಮತಗಟ್ಟೆಗಳಲ್ಲಿ, ಶಾಂತಿಯುತ ಮತದಾನಕ್ಕಾಗಿ 42 ಸಾವಿರ 509 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಕಣದಲ್ಲಿ 219 ಅಭ್ಯರ್ಥಿಗಳಿದ್ದು, 15 ಕ್ಷೇತ್ರದಲ್ಲಿ ಒಟ್ಟು 37 ಲಕ್ಷದ 82 ಸಾವಿರದ 681 ಮತದಾರರಿದ್ದಾರೆ.

15 ಕ್ಷೇತ್ರಗಳಲ್ಲಿ ಸರ್ಕಾರಿ ರಜೆ ಘೋಷಣೆ
ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಲ್ಲಿ ಡಿಸೆಂಬರ್ 5ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಂದು  ಆಯಾ 15 ಕ್ಷೇತ್ರಗಳ ವ್ಯಾಪ್ತಿಗೆ ಬರುವ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದೆ. 

ಡಿ. 9ಕ್ಕೆ ಮಿನಿಸಮರದ ರಿಸಲ್ಟ್
ಜೆಡಿಎಸ್‌ನ 3 ಹಾಗೂ ಕಾಂಗ್ರೆಸ್‌ನ 14 ಶಾಸಕರು ರಾಜೀನಾಮೆ ನೀಡಿದ್ದರಿಂದ ತೆರವಾದ 17 ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳನ್ನ ಹೊರತುಪಡಿಸಿ ಇನ್ನುಳಿದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 5ಕ್ಕೆ ಮತದಾನ ನಡೆಯಲಿದೆ. ನಾಯಕರು ಏನೆಲ್ಲ ಕಸರತ್ತು ಮಾಡಿದ್ರು..? ಯಾವೆಲ್ಲ ತಂತ್ರಗಳು ಹೆಣೆದ್ರು..? ಮತದಾರರು ಯಾರಿಗೆ ಜೈ ಅಂತಾರೆ..? ಎನ್ನುವುದು ಡಿ.9ಕ್ಕೆ ಫಲಿತಾಂಶ ಬಂದ ಬಳಿಕ ತಿಳಿಯಲಿದೆ. ಅಲ್ಲಿವರೆಗೂ 15 ಕ್ಷೇತ್ರ ಅಭ್ಯರ್ಥಿಗಳಲ್ಲಿ ಢವ-ಢವ ಶುರುವಾಗಿದೆ.

Follow Us:
Download App:
  • android
  • ios