ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರ ತಲೆದಂಡಕ್ಕೆ ಹೈಕಮಾಂಡ್ ಸೂಚನೆ ನೀಡಿದೆ.
ಆರೋಪ ಏನಿತ್ತು?
- ದಾವಣಗೆರೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ವಿರುದ್ಧ ಹಲವು ಮುಸ್ಲಿಂ ಅಭ್ಯರ್ಥಿಗಳು ಕಣಕ್ಕೆ
- ಇಂಥವರ ಮನವೊಲಿಕೆ ಹೊಣೆಯನ್ನು ನಜೀರ್, ಜಬ್ಬಾರ್‌ಗೆ ಪಕ್ಷದ ನಾಯಕರು ವಹಿಸಿದ್ದರು
- ಆದರೆ ಮನವೊಲಿಕೆ ಬಿಟ್ಟು ಕಾಂಗ್ರೆಸ್ ವಿರುದ್ಧ ಮುಸ್ಲಿಂ ಸಮುದಾಯ ಬಂಡೇಳಲು ಪ್ರಯತ್ನ
- ಪಕ್ಷದ ಕೆಲವರಿಂದ ಎಸ್‌ಡಿಪಿಐ ಅಭ್ಯರ್ಥಿಗೆ ಹಣ ನೀಡಿದ ಬಗ್ಗೆಯೂ ಪಕ್ಷಕ್ಕೆ ರಹಸ್ಯ ಮಾಹಿತಿ
- ಈ ಬೆಳವಣಿಗೆ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಚುನಾವಣಾ ಉಸ್ತುವಾರಿಯಿಂದ ಮಾಹಿತಿ ರವಾನೆ
- ಈ ಹಿನ್ನೆಲೆಯಲ್ಲಿ ಪಕ್ಷದ ಕೆಲವರಿಗೆ ಬಿಸಿ ಮುಟ್ಟಿಸಲು ರಾಜೀನಾಮೆಗೆ ದಿಲ್ಲಿ ನಾಯಕರ ಸೂಚನೆ
- ಈ ಸುಳಿವು ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಬ್ಬಾರ್ ರಾಜೀನಾಮೆ
- ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್‌ಗೂ ರಾಜೀನಾಮೆ ಸಲ್ಲಿಸುವಂತೆ ಸಿಎಂ ಕಚೇರಿ ತಾಕೀತು
ಬೆಂಗಳೂರು (ಏ.12) ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಮುಸ್ಲಿಮರ ಬಂಡಾಯಕ್ಕೆ ಪರೋಕ್ಷ ಚಿತಾವಣೆ ಮಾಡಿದ ಆರೋಪ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ನಜೀರ್ ಅಹ್ಮದ್ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ, ಶಾಸಕ ಅಬ್ದುಲ್ ಜಬ್ಬಾರ್ ತಲೆದಂಡಕ್ಕೆ ಹೈಕಮಾಂಡ್ ಸೂಚನೆ ನೀಡಿದೆ.
ಇದರ ಬೆನ್ನಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಜೀರ್ ಅಹ್ಮದ್ ಅವರಿಗೆ ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ನಜೀರ್ ಅಹ್ಮದ್ ಇನ್ನೂ ರಾಜೀನಾಮೆ ನೀಡಿಲ್ಲ. ಮತ್ತೊಂದೆಡೆ ಹೈಕಮಾಂಡ್ ತಮ್ಮ ವಿರುದ್ಧ ನೋಟಿಸ್ ನೀಡಲಿದೆ ಎಂಬ ಸೂಚನೆ ಪಡೆದ ಅಬ್ದುಲ್ ಜಬ್ಬಾರ್ ಶುಕ್ರವಾರ (ಏ.10)ರಂದು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ಈ ರಾಜೀನಾಮೆ ಪತ್ರವನ್ನು ಶುಕ್ರವಾರ ಕೆಪಿಸಿಸಿ ಅಧ್ಯಕ್ಷರಿಗೆ ರವಾನಿಸಿದ್ದರೂ, ಪತ್ರದಲ್ಲಿ ರಾಜೀನಾಮೆ ದಿನಾಂಕವನ್ನು ಏ.2 ಎಂದು ನಮೂದಿಸಿದ್ದಾರೆ. ಆದರೆ, ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆಗೆ ಮುಂದಾಗುವುದಕ್ಕೆ ಹೈಕಮಾಂಡ್ ಸೂಚನೆಯೇ ಕಾರಣ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಸದ್ಯಕ್ಕೆ ಈ ಇಬ್ಬರು ನಾಯಕರ ತಲೆದಂಡಕ್ಕೆ ಹೈಕಮಾಂಡ್ ಮುಂದಾಗಿದ್ದರೂ, ಪಕ್ಷದ ವಿರುದ್ಧ ಕೆಲಸ ಮಾಡಿದ ಇನ್ನಷ್ಟು ನಾಯಕರಿಗೆ ಬಿಸಿ ಮುಟ್ಟಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಆದರೆ, ತಕ್ಷಣಕ್ಕೆ ಕ್ರಮ ಕೈಗೊಳ್ಳದೆ ಕ್ರಮೇಣ ಪಕ್ಷದಲ್ಲಿ ಅಂತಹ ನಾಯಕರ ಮಹತ್ವ ಕಡಿಮೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬಂಡಾಯ ಶಮನಕ್ಕೆ ಮುಂದಾಗದ ನಾಯಕರು!:
ರಾಜ್ಯ ಕಾಂಗ್ರೆಸ್‌ನ ಮುಸ್ಲಿಂ ನಾಯಕರ ಮೇಲೆ ಹೈಕಮಾಂಡ್ ಈ ಪರಿ ಸಿಟ್ಟಾಗಲು ಪಕ್ಷದ ಅಧಿಕೃತ ಅಭ್ಯರ್ಥಿ ಸೋಲುವಂತೆ ಮಾಡಲು ಬಂಡಾಯಕ್ಕೆ ಚಿತಾವಣೆ ನೀಡಿದ್ದು, ಹಲವು ಪಕ್ಷೇತರ ಅಭ್ಯರ್ಥಿಗಳು ಕಣದಲ್ಲುಳಿಯುವಂತೆ ಮಾಡಿದ್ದು ಹಾಗೂ ಎಸ್‌ಡಿಪಿಐ ಪಕ್ಷದ ಅಭ್ಯರ್ಥಿಗೆ ಆರ್ಥಿಕ ನೆರವು ನೀಡಿರುವ ಬಗ್ಗೆ ಸಾಕ್ಷ್ಯಗಳು ದೊರಕಿರುವುದು ಮುಖ್ಯ ಕಾರಣ ಎನ್ನಲಾಗುತ್ತಿದೆ.
ಮುಖ್ಯವಾಗಿ ಟಿಕೆಟ್ ಹಂಚಿಕೆ ನಂತರ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದ ಸಾಧಿಕ್ ಪೈಲ್ವಾನ್‌ಗೆ ಅಂತಹ ಸೂಚನೆ ಕಾಂಗ್ರೆಸ್‌ನ ಪ್ರಮುಖ ನಾಯಕರಿಂದಲೇ ಹೋಗಿತ್ತು ಎನ್ನಲಾಗುತ್ತಿದೆ. ಜತೆಗೆ, ಸಾಧಿಕ್ ಮನವೊಲಿಸುವಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ ನಂತರ ಈ ನಾಯಕರು ವರ್ತಿಸಿದ ರೀತಿಯೂ ಇದಕ್ಕೆ ಇಂಬು ನೀಡಿದೆ.
ಮೂಲಗಳ ಪ್ರಕಾರ ಸಾಧಿಕ್ ಅವರ ಮನವೊಲಿಸುವಂತೆ ಸಚಿವ ಜಮೀರ್ ಅಹ್ಮದ್, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹಾಗೂ ಶಾಸಕ ರಿಜ್ವಾನ್ ಅರ್ಷದ್‌ಗೆ ರಾಜ್ಯ ನಾಯಕತ್ವ ಸೂಚನೆ ನೀಡಿತ್ತು. ಅಷ್ಟೇ ಅಲ್ಲ, ತುರ್ತು ದಾವಣೆಗೆರೆಗೆ ತೆರಳುವಂತೆ ನಿರ್ದೇಶಿಸಿ ಅದಕ್ಕೆ ಹೆಲಿಕಾಪ್ಟರ್ ವ್ಯವಸ್ಥೆಯನ್ನೂ ಮಾಡಿತ್ತು.
ಆದರೆ, ದಾವಣಗೆರೆಗೆ ತೆರಳುವ ದಿನ ಜಮೀರ್ ಯಾವ ರಾಜ್ಯ ನಾಯಕರ ಕೈಗೂ ಸಿಗದೆ ತಪ್ಪಿಸಿಕೊಂಡರೆ, ನಜೀರ್ ಅಹ್ಮ ದ್ ಅವರು ಹೆಲಿಪ್ಯಾಡ್‌ವರೆಗೂ ತೆರಳಿ ಅಂತಿಮವಾಗಿ ಧರ್ಮಗುರುಗಳ ನಿರ್ದೇಶನವಿರುವುದರಿಂದ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹಿಂತಿರುಗಿದ್ದರು ಎನ್ನಲಾಗಿದೆ.
ಹೀಗಾಗಿ ಸಲೀಂ ಅಹ್ಮ ದ್ ಹಾಗೂ ರಿಜ್ವಾನ್ ಅರ್ಷದ್ ಇಬ್ಬರೇ ಸಾಧಿಕ್ ಪೈಲ್ವಾನ್ ಮನವೊಲಿಸುವ ಪ್ರಕ್ರಿಯೆ ನಡೆಸಬೇಕಾಯಿತು. ನಂತರ ತಮ್ಮ ಬಂಡಾಯ ಹಿಂಪಡೆದ ಸಾಧಿಕ್ ಪೈಲ್ವಾನ್ ಅವರು ಬೆಂಗಳೂರಿಗೆ ಆಗಮಿಸಿ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪೈಲ್ವಾನ್ ಅವರು, ತಾವು ಬಂಡಾಯ ಸ್ಪರ್ಧೆಗೆ ಇಳಿಯುವಂತೆ ಸೂಚನೆ ನೀಡಿದ್ದ ಮುಸ್ಲಿಂ ನಾಯಕರ ಹೆಸರನ್ನು ನೇರವಾಗಿ ಸಿಎಂ ಹಾಗೂ ಡಿಸಿಎಂಗೆ ತಿಳಿಸಿದ್ದರು ಎನ್ನಲಾಗಿದೆ.
ಇದು ರಾಜ್ಯ ನಾಯಕತ್ವದ ಸಿಟ್ಟಿಗೆ ಕಾರಣವಾಗಿದೆ. ಇದಾದ ನಂತರ ಹಲವು ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿ ಇಳಿಯುವಲ್ಲೂ ಈ ನಾಯಕರ ಪಾತ್ರವಿದೆ. ಅಲ್ಲದೆ, ಎಸ್‌ಡಿಪಿಐ ಅಭ್ಯರ್ಥಿಗೆ ರಾಜ್ಯ ಕಾಂಗ್ರೆಸ್ ಮುಸ್ಲಿಂ ನಾಯಕರಿಂದಲೇ ಅರ್ಥಿಕ ನೆರವು ದೊರಕಿದೆ ಮತ್ತು ಪಕ್ಷೇತರ ಮುಸ್ಲಿಂ ಅಭ್ಯರ್ಥಿ ಪರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪ್ರಚಾರ ನಡೆಸುವಂತೆ ಮಾಡುವಲ್ಲೂ ಸದರಿ ನಾಯಕರ ಪಾತ್ರವಿದೆ ಎಂಬ ಮಾಹಿತಿ ಸಾಕ್ಷ್ಯ ಸಮೇತ ಕಾಂಗ್ರೆಸ್ ಹೈಕಮಾಂಡ್‌ಗೆ ದೊರಕಿದೆ.
ಈ ಬಗ್ಗೆ ದಾವಣಗೆರೆ ಕ್ಷೇತ್ರದ ಉಸ್ತುವಾರಿಯಾಗಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಶೇಕ್ ದತ್ತಾ ಅವರು ಹೈಕಮಾಂಡ್‌ಗೆ ನೇರವಾಗಿ ವರದಿ ಮಾಡಿದ್ದಾರೆ. ಅದರಲ್ಲಿ, ತಮ್ಮ ಆಗ್ರಹದಂತೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡದ ಕಾಂಗ್ರೆಸ್ ಪಕ್ಷಕ್ಕೆ ಸೋಲುಣಿಸುವ ಮೂಲಕ ಬುದ್ಧಿ ಕಲಿಸಬೇಕು ಎಂದು ಮುಸ್ಲಿಂ ಧರ್ಮಗುರುಗಳು ಸೂಚನೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್‌ನ ಈ ಸದರಿ ನಾಯಕರು ಪಕ್ಷದ ವಿರುದ್ಧ ಚಿತಾವಣೆ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ ಎನ್ನಲಾಗಿದೆ.
ಇದೆಲ್ಲದರ ಪರಿಣಾಮವಾಗಿ ಕಾಂಗ್ರೆಸ್ ಹೈಕಮಾಂಡ್ ಈ ತಲೆದಂಡಕ್ಕೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಸಚಿವ ಜಮೀರ್‌ಗೂ ಬಿಸಿ?
ಮೂಲಗಳ ಪ್ರಕಾರ ದಾವಣಗೆರೆ ದಕ್ಷಿಣ ಉಪ ಚುನಾವಣೆ ವಿಚಾರದಲ್ಲಿ ಮುಗುಂ ಆಗಿ ಉಳಿದು, ತೀವ್ರ ಒತ್ತಡ ಬಂದ ನಂತರ ಪ್ರಚಾರದಲ್ಲಿ ಪಾಲ್ಗೊಂಡ ಸಚಿವ ಜಮೀರ್ ಅಹ್ಮದ್ ಅವರ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಜಮೀರ್ ಅವರಿಂದ ವಿವರಣೆ ಪಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

