ಹಾವೇರಿ, [ನ.17]: ಒಂದು ಕಡೆ ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಕಾವೇರುತ್ತಿದ್ರೆ, ಮತ್ತೊಂದೆಡೆ ಪಕ್ಷಾಂತರ ಪರ್ವ ಸಹ ಜೋರಾಗಿದೆ.

ಕಾಂಗ್ರೆಸ್ ಅನರ್ಹ ಶಾಸಕರು ಬಿಜೆಪಿ ಸೇರಿ ಆಯಾ ಕ್ಷೇತ್ರಗಳ ಅಭ್ಯರ್ಥಿಗಳಾಗಿದ್ದು, ಗೆಲುವಿಗಾಗಿ ಕಾಂಗ್ರೆಸ್ ನಲ್ಲಿದ್ದ ತಮ್ಮ ಬೆಂಬಲಿಗರನ್ನು ಬಿಜೆಪಿಯತ್ತ ಸೆಳೆಯುತ್ತಿದ್ದಾರೆ.  ಇಂದು [ಭಾನುವಾರ] ಹಿರೇಕೆರೂರಿನಲ್ಲಿ ನಡೆದಿದ್ದು ಇದೇ.

ಹಿರೇಕೆರೂರಿನಲ್ಲಿ ಬಿ. ಸಿ. ಪಾಟೀಲಗೆ ಅದ್ಧೂರಿ ಸ್ವಾಗತ

ಹೌದು... ಕಾಂಗ್ರೆಸ್ ನ 8 ತಾಲೂಕು ಪಂಚಾಯಿತಿ ಸದಸ್ಯರು  ಹಿರೇಕೆರೂರು ಕ್ಷೇತ್ರದ ಅಭ್ಯರ್ಥಿ ಬಿ.ಸಿ.ಪಾಟೀಲ್ , ಬಿಜೆಪಿ ತಾಲೂಕು ಅಧ್ಯಕ್ಷ ಎಸ್ ಆರ್ ಅಂಗಡಿ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ  ಯು.ಬಿ ಬಣಕಾರ ನೇತೃತ್ವದಲ್ಲಿ ಸೇರ್ಪಡೆಗೊಂಡರು.

22 ತಾಪಂ ಕ್ಷೇತ್ರದಲ್ಲಿ 13 ಬಿಜೆಪಿ, 09 ಕಾಂಗ್ರೆಸ್ ಸದಸ್ಯರಿದ್ದರು. ಆದ್ರೆ, ಇದೀಗ ಕಾಂಗ್ರೆಸ್ 09 ತಾಪಂ ಸದಸ್ಯರುಗಳ ಪೈಕಿ 08 ಜನ ಬಿಜೆಪಿ ಸೇರ್ಪಡೆಯಾಗಿರುವುದು ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಬಹುದೊಡ್ಡ ಆಘಾತವಾದಂತಾಗಿದೆ. 

ಬಿಜೆಪಿಯಿಂದ ಬಿ.ಎಸ್.ಪಾಟೀಲ್ ಕಣದಲ್ಲಿದ್ರೆ, ಕಾಂಗ್ರೆಸ್ ನಿಂದ ಬಿ.ಎಚ್. ಬನ್ನಿಕೋಡ್ ಅಖಾಡದಲ್ಲಿದ್ದಾರೆ. ಇನ್ನು ಜೆಡಿಎಸ್ ನ  ಉಜನಪ್ಪ ಜಟ್ಟೆಪ್ಪ ಕೋಡಿಹಳ್ಳಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ.

ಮೊನ್ನೇ ಅಷ್ಟೇ ಗೋಕಾಕ್ ತಾಲೂಕು ಕಾಂಗ್ರೆಸ್ ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹದು. 

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.