ಸೂಲಿಬೆಲೆ[ನ.23]: ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಎಂ.ಟಿ.ಬಿ.ನಾಗರಾಜ್‌ರನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡ ನಾಗರಹಾವಿಗೆ ಹೋಲಿಕೆ ಮಾಡಿ ವಾಗ್ದಾಳಿ ನಡೆಸಿದ್ದಾರೆ. ಎರೆಹುಳು ಕಷ್ಟಪಟ್ಟು ಹುತ್ತ ಕಟ್ಟುತ್ತೆ. ಆದರೆ ನಾಗರಾಜನ ರೂಪದಲ್ಲಿ ಬಂದು ನಾಗರಹಾವು, ಹುತ್ತ ಸೇರಿಕೊಂಡು ನಮಗೆ ಜಾಗವಿಲ್ಲದಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸಕೋಟೆ ತಾಲೂಕಿನ ಎತ್ತಕ್ಕಿ ಗ್ರಾಮದಲ್ಲಿ ಮಾತನಾಡಿದ ಅವರು, ಸಂಸತ್‌ ಅಧಿವೇಶನ ನಡೆಯುತ್ತಿರುವ ಕಾರಣ ನನ್ನ ತಂದೆ ಬಚ್ಚೇಗೌಡರು ದೆಹಲಿಯಲ್ಲಿದ್ದು, ನನ್ನ ಪರವಾಗಿ ಪ್ರಚಾರಕ್ಕೆ ಬರುವುದಿಲ್ಲ ಎಂದು ತಿಳಿಸಿದರು.

ಎಂ.ಟಿ.ಬಿ.ನಾಗರಾಜ್‌ ಕ್ಷೇತ್ರದ ಮತದಾರರನ್ನು ಕೇಳದೆ ಪಕ್ಷಾಂತರ ಮಾಡಿದ್ದಾರೆ. ಮತ ನೀಡಿದ ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಮತದಾರರಲ್ಲಿ ಸ್ವಾಭಿಮಾನದ ಪ್ರಶ್ನೆ ಎದ್ದಿದೆ. 92 ಸಾವಿರ ಮತ ಹಾಕಿ ನಾವು ಬಿಜೆಪಿಯನ್ನು ಕಟ್ಟಿದ್ದೇವು. ಆದರೆ, ನಮ್ಮ ಅಭಿಪ್ರಾಯ ಪಡೆಯದೆ ಬಿಜೆ​ಪಿಗೆ ನುಗ್ಗಿ, ನಮಗೆ ಒಂದು ಅವಕಾಶ ಮಾಡಿಕೊಟ್ಟಿಲ್ಲ ಎಂಬ ಅಸಮಾಧಾನ ಬಿಜೆಪಿ ಅಭಿಮಾನಿಗಳಲ್ಲಿ ಮೂಡಿದೆ. ಬಿಜೆಪಿಯಲ್ಲಿ ಇರುವವರೆಲ್ಲಾ ಸ್ವಾಭಿಮಾನಿಗಳಾಗಿದ್ದಾರೆ. ಶರತ್‌ ಬಚ್ಚೇಗೌಡ ಒಬ್ಬನೇ ಸ್ವಾಭಿಮಾನಿಯಲ್ಲ, ಕ್ಷೇತ್ರದಲ್ಲಿರುವ 2.5 ಲಕ್ಷ ಮತದಾರರು ಸ್ವಾಭಿಮಾನಿಗಳಾಗಿದ್ದಾರೆ ಎಂದು ಹೇಳಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.