Asianet Suvarna News Asianet Suvarna News

ಬೆಳಗ್ಗೆ 11ಕ್ಕೆ ಹಾನಗಲ್‌, ಸಿಂದಗಿ ಚಿತ್ರಣ : ವಿಪಕ್ಷಗಳ ಕೈ ಮೇಲಾಗುತ್ತಾ?

  • ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಸಾಮರ್ಥ್ಯ ಕುರಿತ ಈ ಪ್ರಶ್ನೆಗಳಿಗೆ ಉತ್ತರ ನೀಡುವ ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಉಪ ಚುನಾವಣೆ
  •  ಉಪ ಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿವೆ.
     
Karnataka By Election Result will be out soon snr
Author
Bengaluru, First Published Nov 2, 2021, 6:27 AM IST

 ಬೆಂಗಳೂರು (ನ.02):  ಆಡಳಿತಾರೂಢ ಬಿಜೆಪಿಗೆ (bjp) ಪ್ರತಿಷ್ಠೆ ಹೆಚ್ಚಾಗುವುದೆ? ಪ್ರತಿಪಕ್ಷ ಕಾಂಗ್ರೆಸ್‌ಗೆ (Congress) ಆತ್ಮವಿಶ್ವಾಸ ವೃದ್ಧಿಯಾಗುವುದೆ? ಅಥವಾ ಜೆಡಿಎಸ್‌ (JDS) ಪಾಲಿಗೆ ನವ ಚೈತನ್ಯ ಸಿಗುವುದೆ?

ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ (Political party) ಸಾಮರ್ಥ್ಯ ಕುರಿತ ಈ ಪ್ರಶ್ನೆಗಳಿಗೆ ಉತ್ತರ ನೀಡುವ ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ ಇಂದು ನಡೆಯಲಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿವೆ.

ಈ ಮಹತ್ವದ ಉಪ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ 8ಕ್ಕೆ ಆರಂಭವಾಗಲಿದ್ದು, ಅಂತಿಮ ಫಲಿತಾಂಶದ (Result) ಸ್ಥೂಲ ಚಿತ್ರಣ ಮಂಗಳವಾರ ಬೆಳಗ್ಗೆ 10 ರಿಂದ 11 ಗಂಟೆಯ ಸುಮಾರಿಗೆ ದೊರಕುವ ಸಾಧ್ಯತೆಯಿದೆ. ತನ್ಮೂಲಕ ಉಪ ಚುನಾವಣೆ ಎಂಬುದು ಆಡಳಿತ ಪಕ್ಷದ ಪರವಾಗಿರುತ್ತದೆ ಎಂಬ ಸಾಮಾನ್ಯ ನಂಬಿಕೆಗೆ ಈ ಉಪ ಚುನಾವಣೆ ಹೊರತಾಗುವುದೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ.

ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್: ಅಭ್ಯರ್ಥಿಗಳಿಗೆ ಖಡಕ್ ಸೂಚನೆ ಕೊಟ್ಟ ಚುನಾವಣಾ ಆಯೋಗ

ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯಮಂತ್ರಿಯಾದ ನಂತರ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಸಹಜವಾಗಿ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಫಲಿತಾಂಶ ಸರ್ಕಾರದ ಮೇಲೆ ಪ್ರಭಾವ ಬೀರದಿದ್ದರೂ ಬೊಮ್ಮಾಯಿ ಅವರ ವರ್ಚಸ್ಸು, ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಮುಖ್ಯಮಂತ್ರಿ ಸ್ಥಾನ ಇನ್ನಷ್ಟುಗಟ್ಟಿಯಾಗುವ ಜೊತೆಗೆ ಮುಂಬರುವ ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳನ್ನು ಅವರ ನೇತೃತ್ವದಲ್ಲಿ ನಡೆಸುವ ನಂಬಿಕೆ, ವಿಶ್ವಾಸವನ್ನು ಪಕ್ಷದ ಹೈಕಮಾಂಡ್‌ ಅವರ ಮೇಲೆ ಇಟ್ಟುಕೊಳ್ಳಲಿದೆ. ಆದರೆ ಫಲಿತಾಂಶ ಇದಕ್ಕೆ ವ್ಯತಿರಿಕ್ತವಾಗಿ ಬಂದರೆ ಬೊಮ್ಮಾಯಿ ಅವರು ಸಾಕಷ್ಟುಸವಾಲು ಎದುರಿಸಬೇಕಾಗುತ್ತದೆ.

ಆತ್ಮ ವಿಶ್ವಾಸ ಕುಗ್ಗಿರುವ ಕಾಂಗ್ರೆಸ್‌ ಪಕ್ಷ ಉಭಯ ಕ್ಷೇತ್ರಗಳ ಫಲಿತಾಂಶದ ಬಗ್ಗೆ ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದೆ. ಗೆದ್ದರೆ ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಸ್ಥಾನ ಇನ್ನಷ್ಟುಗಟ್ಟಿಯಾಗಲಿದೆ. ಡಿ.ಕೆ. ಶಿವಕುಮಾರ್‌ (DK Shivakumar) ಅವರು ಅಧ್ಯಕ್ಷರಾದರೂ ಪಕ್ಷ ನಿರೀಕ್ಷಿಸಿದಷ್ಟುಗಟ್ಟಿಯಾಗುತ್ತಿಲ್ಲ ಎಂದು ಆಂತರಿಕವಾಗಿ ಟೀಕೆ ಮಾಡುತ್ತಿರುವವರಿಗೆ ಬಲವಾದ ಉತ್ತರ ನೀಡಿದಂತಾಗುತ್ತದೆ. ಜೊತೆಗೆ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಇನ್ನಷ್ಟುಪ್ರಬಲರಾಗಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತೀವ್ರ ಕ್ರಿಯಾಶೀಲವಾಗಿರುವ ಜೆಡಿಎಸ್‌ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ತನ್ನ ಶಕ್ತಿ ಸಾಮರ್ಥ್ಯ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಮತದಾರರ ನಾಡಿ ಮಿಡಿತ ಗುರುತಿಸುವ ಉದ್ದೇಶದಿಂದಲೇ ಎರಡು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮುಸ್ಲಿಂ ಮತದಾರರ ಒಲವು ಗಳಿಸಲು ಸಫಲವಾದರೆ ಮುಂಬರುವ ದಿನಗಳಲ್ಲಿ ಜೆಡಿಎಸ್‌ ತನ್ನ ಚುನಾವಣೆ ತಂತ್ರವನ್ನೇ ಬದಲಿಸುವ ಸಾಧ್ಯತೆ ನಿಚ್ಚಳವಾಗಿದೆ.

ಹೀಗಾಗಿ ಬೇರೆ ಬೇರೆ ಕಾರಣಕ್ಕೆ ಈ ಉಪಚುನಾವಣೆ ಫಲಿತಾಂಶ ಮೂರು ಪಕ್ಷಗಳಿಗೆ ತುಂಬಾ ಮಹತ್ವದ್ದಾಗಿದೆ.

ಹಾನಗಲ್‌:

ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನದ ಕಾರಣ ನಡೆದಿರುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಶಿವರಾಜ್‌ ಸಜ್ಜನರ, ಕಾಂಗ್ರೆಸ್‌ ಪಕ್ಷದಿಂದ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಜೆಡಿಎಸ್‌ ಪಕ್ಷದಿಂದ ನಿಯಾಜ್‌ ಶೇಖ್‌ ಸ್ಪರ್ಧಿಸಿದ್ದಾರೆ. ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಹಾಗೂ ಬಿಜೆಪಿಯ ಶಿವರಾಜ ಸಜ್ಜನರ ನಡುವೆ ನೇರ ಹಣಾಹಣಿ ಇದೆ. 2018ರ ಚುನಾವಣೆಯಲ್ಲಿ ಹಾನಗಲ್‌ ಕ್ಷೇತ್ರದ 1,94,300 ಮತದಾರರ ಪೈಕಿ 1,63,167 ಮತದಾರರು ಹಕ್ಕು ಚಲಾಯಿಸಿದ್ದು, ಶೇ.83.98ರಷ್ಟುಮತದಾನವಾಗಿತ್ತು. ಈಗ 2.04 ಲಕ್ಷ ಮತದಾರರಿದ್ದು, ಶೇ.83.44 ರಷ್ಟುಮತದಾನವಾಗಿದೆ.

ಸಿಂದಗಿ:

ಜೆಡಿಎಸ್‌ನ ಶಾಸಕ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿಯಿಂದ ರಮೇಶ ಭೂಸನೂರು ಹಾಗೂ ಜೆಡಿಎಸ್‌ನಿಂದ ನಾಜಿಯಾ ಅಂಗಡಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,34,437 ಮತದಾರರಿದ್ದಾರೆ. ಈ ಪೈಕಿ 1,30,939 ಪುರುಷರು, 1,13,466 ಮಹಿಳೆಯರು ಹಾಗೂ ಇತರೆ 32 ಮತದಾರರಿದ್ದು, 85,859 ಪುರುಷರು, 76,990 ಮಹಿಳೆಯರು ಹಾಗೂ ಇತರೆ ಮೂವರು ಮತ ಚಲಾಯಿಸಿದ್ದಾರೆ. ಈ ಬಾರಿ ಶೇ. 69ರಷ್ಟುಮತದಾನವಾಗಿದೆ. 2018ರ ಚುನಾವಣೆಯಲ್ಲಿ 2,24,702 ಮತದಾರರ ಪೈಕಿ 1,60,496 ಮತದಾನವಾಗಿತ್ತು, ಶೇ. 71.43 ರಷ್ಟುಮತದಾನವಾಗಿತ್ತು.

12 ಗಂಟೆಯೊಳಗೆ ಪೂರ್ಣ ಫಲಿತಾಂಶ

ಹಾನಗಲ್‌ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, 12 ಗಂಟೆಯೊಳಗೆ ಪೂರ್ಣ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತಗಳ ಎಣಿಕೆ ನಂತರ ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಎಣಿಕೆ ಆರಂಭವಾಗಲಿದೆ. ಎರಡೂ ಕ್ಷೇತ್ರದಲ್ಲಿ ಮತದಾನವಾದ ಸಂಖ್ಯೆ 2.70 ಲಕ್ಷ ಒಳಗೆ ಇರುವುದರಿಂದ ಬೇಗ ಫಲಿತಾಂಶ ಪ್ರಕಟವಾಗಲಿದೆ. ಉಭಯ ಕ್ಷೇತ್ರಗಳಲ್ಲಿ ಮತ ಎಣಿಕೆಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಾನಗಲ್‌ ಕಣ

ಶಿವರಾಜ್‌ ಸಜ್ಜನ್‌ ಬಿಜೆಪಿ

ಶ್ರೀನಿವಾಸ ಮಾನೆ ಕಾಂಗ್ರೆಸ್‌

ನಿಯಾಜ್‌ ಶೇಖ್‌ ಜೆಡಿಎಸ್‌


ಸಿಂದಗಿ ಕಣ

ರಮೇಶ ಭೂಸನೂರು ಬಿಜೆಪಿ

ಅಶೋಕ ಮನಗೂಳಿ ಕಾಂಗ್ರೆಸ್‌

ನಾಜಿಯಾ ಅಂಗಡಿ ಜೆಡಿಎಸ್‌

Follow Us:
Download App:
  • android
  • ios