Asianet Suvarna News Asianet Suvarna News

ಸ್ಥಳೀಯ ಸಂಸ್ಥೆ ಬಳಿಕ ಬಿಜೆಪಿಗೆ ಮತ್ತೆ ಎಚ್ಚರಿಕೆ ಗಂಟೆ

ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಒಂದನ್ನು ಸುಲಭವಾಗಿ ಗೆದ್ದರೂ ಮತ್ತೊಂದರಲ್ಲಿ ಪ್ರಯಾಸದ ಗೆಲುವನ್ನು ತನ್ನದಾಗಿಸಿಕೊಂಡಿದೆ.  ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಎಚ್ಚರಿಕೆಯ ಸಂದೇಶವಾಗಿದೆ. 

Karnataka By Election Result Is The Warning For BJP snr
Author
Bengaluru, First Published May 3, 2021, 8:37 AM IST

ಬೆಂಗಳೂರು (ಮೇ.03):  ಉಪಚುನಾವಣೆ ನಡೆದ ಮೂರು ಕ್ಷೇತ್ರಗಳ ಪೈಕಿ ಒಂದನ್ನು ಸುಲಭವಾಗಿ ಗೆದ್ದರೂ ಮತ್ತೊಂದರಲ್ಲಿ ಪ್ರಯಾಸದ ಗೆಲುವನ್ನು ತನ್ನದಾಗಿಸಿಕೊಂಡ ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಸ್ಪಷ್ಟವಾಗಿ ಎಚ್ಚರಿಕೆ ಗಂಟೆ ಬಾರಿಸಿದೆ.

ಸಾಕಷ್ಟುನಿರೀಕ್ಷೆ ಇಟ್ಟುಕೊಂಡಿದ್ದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಃ ಉಪಚುನಾವಣೆಯ ಮಾಸ್ಟರ್‌ ಎಂದೇ ಕರೆಯಲ್ಪಡುವ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಬಿ.ವೈ.ವಿಜಯೇಂದ್ರ ಉಸ್ತುವಾರಿಯಾಗಿದ್ದರೂ ಗೆಲುವು ಸಾಧ್ಯವಾಗಲಿಲ್ಲ. ಮೇಲಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದ ಗದ್ದುಗೆಯಲ್ಲಿದೆ.

ಹಾಗೆ ನೋಡಿದರೆ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಮಸ್ಕಿ ಕ್ಷೇತ್ರದಲ್ಲಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ನಡೆದಿತ್ತು. ಕ್ಷೇತ್ರದ ಅಭಿವೃದ್ಧಿಗಾಗಿ ನೂರಾರು ಕೋಟಿ ರು.ಗಳನ್ನು ಮಂಜೂರು ಮಾಡಲಾಗಿತ್ತು. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೂರು ದಿನಗಳ ಕಾಲ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಿ ಪ್ರಚಾರ ಕೈಗೊಂಡಿದ್ದರು. ಅಭ್ಯರ್ಥಿಯಾಗಿದ್ದ ಪ್ರತಾಪ್‌ಗೌಡ ಪಾಟೀಲ್‌ ಅವರು ಬಿಜೆಪಿ ಸರ್ಕಾರದ ಅಸ್ತಿತ್ವಕ್ಕಾಗಿ ಕಾಂಗ್ರೆಸ್‌ ತೊರೆದು ಬಂದಿದ್ದರು. ಇಷ್ಟೆಲ್ಲ ಇದ್ದರೂ ಪಕ್ಷ ಸೋಲುಂಡಿರುವುದರ ಬಗ್ಗೆ ಇದೀಗ ಬಿಜೆಪಿ ಪಾಳೆಯದಲ್ಲಿ ಆತ್ಮಾವಲೋಕನ ಆರಂಭಗೊಂಡಿದೆ.

ಫಲಿತಾಂಶ ಬಿಜೆಪಿಗೆ ಲಾಭದಾಯಕ ಎಂದು ವಿಶ್ಲೇಷಿಸಿದ ಅಶೋಕ ...

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಗೆಲುವು ತಾಂತ್ರಿಕವಾಗಿ ಅಷ್ಟೇ. ವಾಸ್ತವದಲ್ಲಿ ಆ ಜಿಲ್ಲೆ ಅಥವಾ ಕ್ಷೇತ್ರದಲ್ಲಿರುವ ಪಕ್ಷದ ಹಿಡಿತ ಗಮನಿಸಿದರೆ ಈಗ ಅಭ್ಯರ್ಥಿ ಗಳಿಸಿರುವ ಮತಗಳು ಏನೂ ಅಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ದಿ.ಸುರೇಶ್‌ ಅಂಗಡಿ ಅವರು 3.91 ಲಕ್ಷಗಳ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಸತತ ನಾಲ್ಕು ಬಾರಿ ಜಯ ಗಳಿಸಿದ್ದ ಪಕ್ಷದ ಭದ್ರಕೋಟೆ ಅದು. ಆದರೆ, ಈ ಬಾರಿ ಅವರ ಪತ್ನಿ ಮಂಗಲಾ ಅಂಗಡಿ ಅವರ ಗೆಲುವಿನ ಮತಗಳ ಅಂತರ ಕೇವಲ 5,240 ಮಾತ್ರ. ಸೋಲಿನಂಚಿಗೆ ತಲುಪಿ ಗೆಲುವು ಸಾಧಿಸಿದಂತಾಗಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಒಬ್ಬ ಉಪಮುಖ್ಯಮಂತ್ರಿ ಹಾಗೂ ಮೂವರು ಸಚಿವರಿದ್ದಾರೆ. ಪ್ರಭಾವಿ ಮುಖಂಡರಿದ್ದಾರೆ. ಹೆಚ್ಚಿನ ಸಂಖ್ಯೆಯ ಶಾಸಕರಿದ್ದಾರೆ. ಆದರೂ ಗೆಲುವಿಗೆ ಏದುಸಿರು ಬಿಡಬೇಕಾಯಿತು. ಅತೀವ ಆತ್ಮವಿಶ್ವಾಸ, ಮುಖಂಡರ ನಡುವಿನ ಹೊಂದಾಣಿಕೆ ಕೊರತೆ ಹಾಗೂ ಆಕಾಂಕ್ಷಿಗಳನ್ನು ಮನವೊಲಿಸಿ ತೊಡಗಿಸಿಕೊಳ್ಳುವಲ್ಲಿ ರಾಜ್ಯ ನಾಯಕತ್ವ ವಿಫಲವಾಗಿರುವುದೂ ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಬೆಳಗಾವಿ ಫೈಟ್‌ನಲ್ಲಿ ಕೊನೆಗೂ ಗೆದ್ದು ಬೀಗಿದ ಬಿಜೆಪಿಯ ಮಂಗಳ ಅಂಗಡಿ

ಬಿಜೆಪಿ ಶಾಸಕರ ಕ್ಷೇತ್ರಗಳಲ್ಲೇ ಪಕ್ಷಕ್ಕೆ ಕಡಮೆ ಮತಗಳು ಬಂದಿವೆ. ಇದೆಲ್ಲದರ ಜೊತೆಗೆ ಮರಾಠಾ ಮತದಾರರನ್ನು ಸೆಳೆಯುಲ್ಲಿ ಪಕ್ಷದ ನಾಯಕರ ಪ್ರಯತ್ನ ಗಂಭೀರವಾಗಿರಲಿಲ್ಲ. ಹೀಗಾಗಿಯೇ ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಲಕ್ಷ ಮತಗಳನ್ನು ಗಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜ್ವರದ ನಡುವೆಯೂ ಕೊನೆಯ ಹಂತದಲ್ಲಿ ದಿಢೀರನೆ ಪ್ರಚಾರ ಕೈಗೊಂಡಿದ್ದರಿಂದ ಪಕ್ಷದ ಮಾನ ಉಳಿಯಿತು. ಇಲ್ಲದಿದ್ದರೆ ಬಿಜೆಪಿಗೆ ಸೋಲು ನಿಶ್ಚಿತವಾಗಿತ್ತು. ಕಳೆದ ಶುಕ್ರವಾರ ಹೊರಬಿದ್ದಿದ್ದ ರಾಜ್ಯದ ಕೆಲವು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರಿದ್ದ ಬಿಜೆಪಿಗೆ ಈ ಉಪಚುನಾವಣೆಯ ಫಲಿತಾಂಶ ಎಚ್ಚರಿಕೆ ನೀಡಿದೆ. ಇದೇ ರೀತಿ ಮುಂದುವರೆದಲ್ಲಿ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂಬ ಮಾತು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದೆ.

Follow Us:
Download App:
  • android
  • ios