ಬೆಂಗಳೂರು[ನ.17]: ಯಶವಂತಪುರ ಕ್ಷೇತ್ರವೊಂದನ್ನು ಹೊರತುಪಡಿಸಿ ಬಾಕಿ ಉಳಿದ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ ಶನಿವಾರ ತಡರಾತ್ರಿ ಘೋಷಿಸಿದ್ದು, ತೀವ್ರ ಪೈಪೋಟಿಯಿದ್ದ ಶಿವಾಜಿನಗರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಆಪ್ತ ರಿಜ್ವಾನ್‌ ಅರ್ಷದ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕುತೂಹಲ ಮೂಡಿಸುವಂತೆ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಮಾತ್ರ ಇನ್ನೂ ಘೋಷಿಸಿಲ್ಲ. ಈ ಕ್ಷೇತ್ರಕ್ಕೆ ರಾಜಕುಮಾರ್‌ ನಾಯ್ಡು ಅವರ ಹೆಸರು ಅಂತಿಮಗೊಳಿಸಲಾಗಿದೆ ಎನ್ನಲಾಗಿತ್ತು. ಆದರೆ, ಕ್ಷೇತ್ರಕ್ಕೆ ಯಾವ ಅಭ್ಯರ್ಥಿಯ ಹೆಸರನ್ನೂ ಘೋಷಿಸದೆ ಕಡೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಯ ಹೆಸರು ಘೋಷಣೆಯಾಗಬಹುದೇ ಎಂಬ ನಿರೀಕ್ಷೆ ಹುಟ್ಟಿದೆ.

ಇನ್ನು ತೀವ್ರ ಪೈಪೋಟಿಯಿದ್ದ ಶಿವಾಜಿನಗರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಮಾತಿಗೆ ಹೈಕಮಾಂಡ್‌ ಮನ್ನಣೆ ನೀಡಿದೆ. ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯರಾಗಿರುವ ರಿಜ್ವಾನ್‌ ಅರ್ಷದ್‌ ಅವರಿಗೆ ಪಕ್ಷದ ಹಿರಿಯ ನಾಯಕರ ವಿರೋಧದ ನಡುವೆಯೂ ಟಿಕೆಟ್‌ ನೀಡಿದೆ.

ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್‌ ಸೇರಿದಂತೆ ಎಲ್ಲಾ ಪ್ರಮುಖ ನಾಯಕರು ರಿಜ್ವಾನ್‌ ಅರ್ಷದ್‌ ಹೆಸರು ಪರಿಗಣಿಸಿದ್ದಕ್ಕೆ ತೀವ್ರ ವಿರೋಧ ಮಾಡಿದ್ದರು. ಹೀಗಾಗಿ ಅರ್ಷದ್‌, ಜಾಕೀರ್‌ ಹುಸೇನ್‌ ಹಾಗೂ ಸಲೀಂ ಅಹಮದ್‌ ಅವರ ಹೆಸರನ್ನು ಕಳುಹಿಸಿ, ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಗಿತ್ತು. ಕಡೆಗೂ ಹೈಕಮಾಂಡ್‌ ಸಿದ್ದರಾಮಯ್ಯ ಅವರು ಸೂಚಿಸಿದ ರಿಜ್ವಾನ್‌ ಅರ್ಷದ್‌ ಅವರ ಹೆಸರನ್ನೇ ಅಂತಿಮಗೊಳಿಸಿದೆ.

ಬೈ ಎಲೆಕ್ಷನ್: ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸದೇ 'ಕೈ' ಉಸ್ತುವಾರಿಗಳ ನೇಮಕ

ಇನ್ನು ಯಶವಂತಪುರ ಕ್ಷೇತ್ರಕ್ಕೆ ಕಾಂಗ್ರೆಸ್‌ ನಾಯಕತ್ವ ಜೆಡಿಎಸ್‌ನ ಜವರಾಯಿ ಗೌಡ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್‌ ನೀಡುವ ಉದ್ದೇಶ ಹೊಂದಿತ್ತು. ಆದರೆ, ಜವರಾಯಿ ಗೌಡ ಜೆಡಿಎಸ್‌ ಅಭ್ಯರ್ಥಿಯಾಗಿ ಘೋಷಣೆಯಾದ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಸೂಕ್ತ ಒಕ್ಕಲಿಗ ಅಭ್ಯರ್ಥಿಯ ಕೊರತೆಯನ್ನು ಅನುಭವಿಸಿತ್ತು. ಒಂದು ಹಂತದಲ್ಲಿ ಮಾಜಿ ಶಾಸಕ ಪ್ರಿಯಕೃಷ್ಣ ಅವರ ಹೆಸರು ಸಹ ಈ ಕ್ಷೇತ್ರಕ್ಕೆ ಕೇಳಿ ಬಂದಿತ್ತು. ಆದರೆ, ಅಂತಿಮವಾಗಿ ನಾಯ್ಡು ಸಮುದಾಯದ ರಾಜಕುಮಾರ ನಾಯ್ಡು ಅವರ ಹೆಸರನ್ನೇ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿತ್ತು. ಆದರೆ, ಹೈಕಮಾಂಡ್‌ ಈ ಕ್ಷೇತ್ರದ ಅಭ್ಯರ್ಥಿ ಹೆಸರು ಘೋಷಿಸದೆ ತೀವ್ರ ಕುತೂಹಲ ಹುಟ್ಟುವಂತೆ ಮಾಡಿದೆ.

ಉಳಿದ ಎಲ್ಲ ಕ್ಷೇತ್ರಗಳಿಗೆ ನಿರೀಕ್ಷೆಯಂತೆಯೇ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಅಥಣಿಗೆ ಗಜಾನನ ಮಂಗಸೂಳಿ, ಕಾಗವಾಡಕ್ಕೆ ಭರಮಗೌಡ (ರಾಜು) ಅಲಗೌಡ ಕಾಗೆ, ಗೋಕಾಕ್‌ಗೆ ಲಖನ್‌ ಜಾರಕಿಹೊಳಿ, ವಿಜಯನಗರಕ್ಕೆ ವೆಂಕಟರಾವ್‌ ಘೋರ್ಪಡೆ, ಶಿವಾಜಿನಗರಕ್ಕೆ ರಿಜ್ವಾನ್‌ ಅರ್ಷದ್‌ ಹಾಗೂ ಕೆ.ಆರ್‌. ಪೇಟೆಗೆ ಕೆ.ಬಿ. ಚಂದ್ರಶೇಖರ್‌ ಹೆಸರು ಘೋಷಿಸಲಾಗಿದೆ.

6 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ

- ಅಥಣಿ - ಗಜಾನನ ಬಾಲಚಂದ್ರ ಮನ್ಸೂಳಿ

- ಕಾಗವಾಡ- ಭರಮಗೌಡ (ರಾಜು) ಅಲಗೌಡ ಕಾಗೆ

- ಗೋಕಾಕ್‌ - ಲಖನ್‌ ಜಾರಕಿಹೊಳಿ

- ವಿಜಯನಗರ - ವೆಂಕಟರಾವ್‌ ಘೋರ್ಪಡೆ

- ಶಿವಾಜಿನಗರ - ರಿಜ್ವಾನ್‌ ಅರ್ಷದ್‌

- ಕೃಷ್ಣರಾಜಪೇಟೆ - ಕೆ.ಬಿ. ಚಂದ್ರಶೇಖರ್‌