ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮಿ ಹಣ ಬಿಡುಗಡೆ ಕುರಿತ ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಅವರು, ಚುನಾವಣಾ ಆಯೋಗವು ಕರ್ನಾಟಕದ ವಿಷಯದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಚಿಕ್ಕೋಡಿ (ಏ.9): ದಾವಣಗೆರೆ ಬಾಗಲಕೋಟೆ ಕ್ಷೇತ್ರಗಳಲ್ಲಿ ಇಂದು ಭರ್ಜರಿ ಮತದಾನ ನಡೆಯುತ್ತಿದೆ ಈ ನಡುವೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎರಡೂ ಕ್ಷೇತ್ರದಲ್ಲಿ ದೊಡ್ಡ ಅಂತರದಿಂದ ನಮ್ಮ ಪಕ್ಷ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವೆ ಹೆಬ್ಬಾಳ್ಕರ್ ಅವರು, ಈ ಚುನಾವಣೆ ರಾಜ್ಯ ರಾಜಕಾರಣದ ದಿಕ್ಸೂಚಿಯಾಗಿದ್ದು, ಎರಡರಲ್ಲೂ ನಾವು ವಿಜಯ ಸಾಧಿಸಲಿದ್ದೇವೆ ಎಂದರು.

ಚುನಾವಣೆ ವೇಳೆ ಗೃಹಲಕ್ಷ್ಮಿ ಹಣ ಬಿಡುಗಡೆ ಬಿಜೆಪಿ ಟೀಕೆ

ಚುನಾವಣೆ ವೇಳೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಿರುವ ಕುರಿತು ಬಿಜೆಪಿ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದ ಸಚಿವೆ, 'ಬರೀ ಎರಡು ಕ್ಷೇತ್ರಗಳಲ್ಲಿ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ ಎಂಬುದು ಶುದ್ಧ ಸುಳ್ಳು. ಬಿಜೆಪಿಯವರ ಮನೆದೇವರೇ ಸುಳ್ಳಾಗಿದ್ದಾನೆ. ರಾಜ್ಯಾದ್ಯಂತ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವ ಪ್ರಕ್ರಿಯೆಯಂತೆಯೇ ಈಗಲೂ ಹಣ ಬಿಡುಗಡೆಯಾಗಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ. ಎರಡು ಕ್ಷೇತ್ರಗಳ ಫಲಿತಾಂಶ ಹೆಚ್ಚುಕಮ್ಮಿಯಾದ್ರೂ ಸರ್ಕಾರಕ್ಕೆ ಏನೂ ಆಗೋಲ್ಲ ಎಂದು ಸ್ಪಷ್ಟಪಡಿಸಿದರು.

ಚುನಾವಣಾ ಆಯೋಗದ ವಿರುದ್ಧ ಕಿಡಿ

ಇದೇ ವೇಳೆ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿದ ಸಚಿವೆ, 'ಚುನಾವಣಾ ಆಯೋಗವು ಪ್ರಜಾಪ್ರಭುತ್ವದಲ್ಲಿ ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆಗಳಿದ್ದು, ಅಲ್ಲಿ ಮೂರು ತಿಂಗಳ ಹಣವನ್ನು ಮುಂಗಡವಾಗಿ ಹಾಕಲು ಆಯೋಗ ಅನುಮತಿ ನೀಡಿದೆ. ಆದರೆ ಕರ್ನಾಟಕದ ವಿಷಯದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ. ಆಯೋಗ ನಮಗೆ ಅನ್ಯಾಯ ಮಾಡುತ್ತಿದೆ' ಎಂದು ಕಿಡಿ ಕಾರಿದರು.

ಸ್ವಾಮೀಜಿ ಮೇಲಿನ ಆರೋಪ; ಪಾರದರ್ಶಕ ತನಿಖೆ

ಕೂಡಲಸಂಗಮದ ಜಯ ಮೃತ್ಯುಂಜಯ ಸ್ವಾಮೀಜಿಗಳ ಮೇಲಿನ ಲೈಂಗಿಕ ಆರೋಪದ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್, 'ಇದು ನಮ್ಮ ಸಮಾಜದ ಅತ್ಯಂತ ಸೂಕ್ಷ್ಮ ವಿಚಾರ. ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಈ ಪ್ರಕರಣದ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು. ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ಹೊರಬರಲು ಸಾಧ್ಯ' ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆಯಲ್ಲಿ 'ಅಕ್ಕ ಪಡೆ' ಸಂಘಟನೆ

ಮಹಿಳಾ ಸಬಲೀಕರಣ ವಿಚಾರವಾಗಿ ಮಾತನಾಡಿದ ಸಚಿವರು, ರಾಜ್ಯದಲ್ಲಿ 'ಅಕ್ಕ ಪಡೆ' ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು. ಮುಂದಿನ ಎರಡು ತಿಂಗಳ ಒಳಗಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ಹಾಗೂ ಚಿಕ್ಕೋಡಿ ಭಾಗಗಳಲ್ಲೂ 'ಅಕ್ಕ ಪಡೆ'ಯನ್ನು ಅಧಿಕೃತವಾಗಿ ಸ್ಥಾಪಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.