ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಅಭ್ಯರ್ಥಿಯಾಗಿದ್ದು ದೇವರ ನಿರ್ಧಾರ - ಹೆಚ್‌ಡಿಕೆ
ಈ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿ ಆಗಿದ್ದು ದೇವರ ನಿರ್ಧಾರ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ (ನ.1): ಈ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿ ಆಗಿದ್ದು ದೇವರ ನಿರ್ಧಾರ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.
ಇಲ್ಲಿನ ತಿಟ್ಟಮಾರನಹಳ್ಳಿ, ಕುಂತೂರು ದೊಡ್ಡಿ, ಚಿಕ್ಕನದೊಡ್ಡಿ, ಪಟಲು, ಕಳ್ಳಿ ಹೊಸೂರು, ಮೈಲನಾಯಕನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು.
ಈಗ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ವ್ಯಕ್ತಿ ಎನ್‌ಡಿಎ ಅಭ್ಯರ್ಥಿ ಆಗಬೇಕಿತ್ತು. ಅವರು ಮೊದಲು ನನಗೆ ಟಿಕೆಟ್ ಬೇಕು ಎಂದು ಕೇಳಿದರು. ಆಮೇಲೆ, ಕಮಲ ಚಿಹ್ನೆ ಆದರೇನು, ತೆನೆ ಹೊತ್ತ ಮಹಿಳೆಯ ಚಿಹ್ನೆ ಆದರೇನು.. ಚುನಾವಣೆಗೆ ನಿಲ್ಲಲು ಸೈ ಎಂದು ಹೇಳಿಕೊಂಡಿದ್ದರು. ಅವರ ಮಾತುಗಳಿಗೆ ನಾವೂ ಮರುಳಾದೆವು ಎಂದರು.
ಕೆಲ ದಿನಗಳ ತರುವಾಯ ಯೋಗೇಶ್ವರ್ ಜೆಡಿಎಸ್ ಚಿಹ್ನೆ ಅಡಿಯಲ್ಲಿ ನಿಲ್ಲಲ್ಲ, ಕಮಲ ಚಿಹ್ನೆಯೇ ಬೇಕು ಹೊಸ ವರಸೆ ತೆಗೆದರು. ಅದಕ್ಕೂ ನಾವು ಒಪ್ಪಿದೆವು. ಹಿರಿಯರಾದ ಜೆಪಿ ನಡ್ದಾ, ಪ್ರಹ್ಲಾದ್ ಜೋಷಿ ಅವರು ನನಗೆ ಕರೆ ಮಾಡಿ ಆ ವ್ಯಕ್ತಿಗೆ ಟಿಕೆಟ್ ಕೊಡಿ ಎಂದು ಹೇಳಿದರು. ಅವರ ಮಾತು ಮೀರದೆ ಅವರಿಗೆ ಟಿಕೆಟ್ ಕೊಡಲು ತೀರ್ಮಾನ ಮಾಡಿದೆ. ಆದರೆ, ಆ ವ್ಯಕ್ತಿ ಎಲ್ಲರಿಗೂ ಟೋಪಿ ಹಾಕಿ ಹೋದರು ಎಂದು ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.
ನಮ್ಮ ಸರ್ಕಾರ ಸರ್ವೇ ಜನಾಃ ಸುಖಿನೋ ಭವಂತು ಎಂದು ಕೆಲಸ ಮಾಡುತ್ತಿದೆ: ಶಕ್ತಿ, ವಕ್ಫ್ ವಿವಾದ ಬಗ್ಗೆ ಹೆಬ್ಬಾಳ್ಕರ್ ಮಾತು
ಚನ್ನಪಟ್ಟಣದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಕುಮಾರಸ್ವಾಮಿಗೆ ಕ್ಷೇತ್ರದಲ್ಲಿ ಎಷ್ಟು ಕೆರೆಗಳಿವೆ ಎಂಬುದೇ ಗೊತ್ತಿಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಎಷ್ಟು ಕಡೆ ಭೇಟಿ ಕೊಟ್ಟಿದ್ದೇನೆ, ಎಷ್ಟು ಕೆರೆಗಳಿಗೆ ನೀರು ಹರಿಸಿದ್ದೇನೆ ಎಂಬುದಕ್ಕೆಲ್ಲ ದಾಖಲೆಗಳಿವೆ. ಬೇಕಾದರೆ ನೋಡಿಕೊಳ್ಳಬಹುದು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.
ಕಳೆದ ಚುನಾವಣೆಯಲ್ಲಿ ರಾಮನಗರ ಸೇರಿ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಕಳೆದ ಕಾಂಗ್ರೆಸ್ ಪಕ್ಷ ಗಿಫ್ಟ್ ಕೂಪನ್ ಗಳನ್ನು ಹಂಚಿ ಅಕ್ರಮ ನಡೆಸಿತ್ತು. ಉಪ ಚುನಾವಣೆಯಲ್ಲಿಯೂ ಅದೇ ರೀತಿಯ ಅಕ್ರಮ ನಡೆಸಲು ಹೊರಟಿದೆ ಎಂದು ಆರೋಪಿಸಿದರು.ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ, ಮಾಗಡಿ, ಕನಕಪುರ ಸೇರಿ ರಾಜ್ಯದ ಹಲವಾರು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬೆಂಗಳೂರಿನ ಲುಲು ಮಾಲ್‌ನಲ್ಲಿ ಖರೀದಿ ಮಾಡುವ 3 ರಿಂದ 5 ಸಾವಿರ ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಯಿತು. ಚುನಾವಣೆ ಮುಗಿದ ಮೇಲೆ ಆ ಕೂಪನ್ ಗಳನ್ನು ಮಾಲ್‌ನವರಿಗೆ ಕೊಟ್ಟರೆ ಅವರು ವಾಪಸ್ ಕಳಿಸಿದ್ದಾರೆ. ಇದೇ ಕುತಂತ್ರವನ್ನು ಕಾಂಗ್ರೆಸ್ ಪಕ್ಷ ಚನ್ನಪಟ್ಟಣದಲ್ಲಿಯೂ ಜಾರಿ ಮಾಡುತ್ತಿದೆ ಎಂದು ನೇರ ಆರೋಪ ಮಾಡಿದರು.
ಸರ್ಕಾರ, ಪೊಲೀಸ್ ಇಲಾಖೆ ಪರವಾಗಿ ರಾಜ್ಯದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ: ಗೃಹ ಸಚಿವ
ಅಭಿಮನ್ಯು ಕಥೆ ಹೇಳಿದ ಮಾಜಿ ಸಚಿವ ಬಿ.ಸಿ.ಪಾಟೀಲ್
ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಪರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರೊಂದಿಗೆ ಪ್ರಚಾರ ನಡೆಸಿದ ಮಾಜಿ ಸಚಿವರಾದ ಬಿಜೆಪಿ ಹಿರಿಯ ನಾಯಕ ಬಿ.ಸಿ.ಪಾಟೀಲ್ ಅಭಿಮನ್ಯುನ ಕಥೆ ಹೇಳಿ ಮತದಾರರ ಗಮನ ಸೆಳೆದರು.
ಮಹಾಭಾರತದಲ್ಲಿ ಅಭಿಮನ್ಯು ಯುದ್ಧದಲ್ಲಿ ಒಬ್ಬನೇ ಆಗಿದ್ದ. ಅವನು ಶೂರನಾಗಿದ್ದ, ವೀರನಾಗಿದ್ದ. ಆದರೆ, ಕುತಂತ್ರದಿಂದ ಸೋಲಿಸಲಾಯಿತು, ಅರ್ಜುನನನ್ನು ಹೊರಗೆ ಮೋಸದಿಂದ ಕಳಿಸಿ ಕೊಲ್ಲಲಾಯಿತು. ಆದರೆ, ಆಧುನಿಕ ಅಭಿಮನ್ಯು ನಿಖಿಲ್ ಒಂಟಿಯಲ್ಲ, ಭೀಷ್ಮ, ದ್ರೋಣ, ಅರ್ಜುನ ಎಲ್ಲರೂ ಜತೆಯಲ್ಲಿಯೇ ಇದ್ದಾರೆ. ಭೀಷ್ಮ ಎಂದರೆ ದೇವೇಗೌಡರು, ದ್ರೋಣ ಎಂದರೆ ಯಡಿಯೂರಪ್ಪ, ಅರ್ಜುನ ಎಂದರೆ ಕುಮಾರಸ್ವಾಮಿ ಎಂದು ಪಾಟೀಲರು ಬಣ್ಣಿಸಿದರು.