ಬೆಂಗಳೂರು[ಫೆ.17]: 2015ರ ಫೆಬ್ರುವರಿಯಲ್ಲಿ ನಡೆದ ಜಂಟಿ ಅಧಿವೇಶನದಲ್ಲಿ ಮೊದಲ ಬಾರಿಗೆ ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದರು.

ಈ ವೇಳೆ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅದಕ್ಕೂ ಮುನ್ನ ರೂಢಿಯಂತೆ ರಾಜ್ಯಪಾಲರು ಇಂಗ್ಲಿಷ್‌ನಲ್ಲಿ ಭಾಷಣ ಮಾಡುತ್ತಿದ್ದರು. ಆದರೆ, ವಜುಭಾಯಿ ವಾಲಾ ಹಿಂದಿಯಲ್ಲಿ ಭಾಷಣ ಮಾಡಿದರು. ಇದಕ್ಕೆ ಕನ್ನಡಪರ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದೀಗ ಮತ್ತೆ ಸೋಮವಾರ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಈ ವೇಳೆಯೂ ಹಿಂದಿಯಲ್ಲೇ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಅವರು ಹಿಂದಿಯಲ್ಲೇ ಭಾಷಣ ಮಾಡಿದರೆ ಪ್ರತಿಪಕ್ಷಗಳಿಂದ ವಿರೋಧ ಎದುರಾಗಲಿದೆ.

ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಸಾಧ್ಯತೆ:

2019ರ ಫೆ.6ರಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸದಸ್ಯರು ರಾಜ್ಯಪಾಲ ವಿ.ಆರ್‌. ವಾಲಾ ಭಾಷಣಕ್ಕೆ ಅಡ್ಡಿ ಪಡಿಸಿದ್ದರು. ತೀವ್ರ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರನಡೆದಿದ್ದರು. ಬಿಜೆಪಿ ವಿರೋಧದಿಂದಾಗಿ ಎರಡೇ ಪುಟಕ್ಕೆ ರಾಜ್ಯಪಾಲರು ತಮ್ಮ ಭಾಷಣ ಮೊಟಕುಗೊಳಿಸಿ ಕೊನೆಯ ಪ್ಯಾರಾವನ್ನು ಓದಿ ಭಾಷಣವನ್ನು ಮಂಡಿಸಲಾಗಿದೆ ಎಂದು ಪ್ರಕಟಿಸಿ ಸದನದಿಂದ ಹೊರ ನಡೆದಿದ್ದರು.

ಇದೀಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಹ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಲಿವೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸರ್ಕಾರವು ತನ್ನ ಸಾಧನೆ ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಯಾವ ಅಂಶಗಳನ್ನು ರಾಜ್ಯಪಾಲರಿಂದ ಹೇಳಿಸಲಿದೆ ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ. ಜತೆಗೆ, ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದರೆ ಅದಕ್ಕೂ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ.

"

ವಿಪಕ್ಷಗಳು ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದಲೇ ವಿಧಾನಪರಿಷತ್‌ ಕಾರ್ಯದರ್ಶಿಗಳು ವಿಧಾನಪರಿಷತ್‌ ಕಾರ್ಯ ವಿಶ್ವಾಸ ಹಾಗೂ ನಡವಳಿಕೆ ನಿಯಮಾವಳಿ 26ರ ನಿಯಮ ಉಲ್ಲೇಖಿಸಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಅಗೌರವ ಎಂದು ಪರಿಗಣಿಸಿ ಸದಸ್ಯರನ್ನು ಸದನದಿಂದ ಅಮಾನತು ಮಾಡಲು ಅವಕಾಶವಿದೆ ಎಂದು ಆದೇಶಿಸಿದೆ. ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರೂ ಸಹ ಪೂರಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸೋಮವಾರದ ಜಂಟಿ ಅಧಿವೇಶನ ಏನಾಗಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.