ಬೆಂಗಳೂರು[ಫೆ.18]: ಕಳೆದ ಆರು ತಿಂಗಳ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿಲ್ಲ. ಈ ಅಂಶ ಮರೆಮಾಚಲು ಕಾಂಗ್ರೆಸ್‌ ಹಾಗೂ ಸಮ್ಮಿಶ್ರ ಸರ್ಕಾರದ ಅವಧಿಯ ಸಾಧನೆಗಳನ್ನು ರಾಜ್ಯಪಾಲರಿಂದ ಹೇಳಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಕುರಿತಂತೆ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ತನ್ನ ಕಾರ್ಯವೈಖರಿಗಳನ್ನು ಹೇಳುತ್ತದೆ. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನೇ ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದೆ ಎಂದರು.

ಅಲ್ಲದೆ, ರಾಜ್ಯದಲ್ಲಿ ಪ್ರವಾಹ ಉಂಟಾಗಿ ಸಾಕಷ್ಟುನಷ್ಟವಾಗಿದೆ. ಪ್ರವಾಹಕ್ಕೆ ಸಿಲುಕಿದ್ದ ಭಾಗಗಳಲ್ಲಿ ಜನ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ರೈತರ ಜಮೀನುಗಳು ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿವೆ. ಆದರೆ, ಈ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸಿಲ್ಲ. ನೆರೆ ಪರಿಹಾರಕ್ಕಾಗಿ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ನೊಂದ ಜನರಿಗೆ ಪರಿಹಾರ ಲಭ್ಯವಾಗಿಲ್ಲ. ಶಾಲೆಗಳ ಕಟ್ಟಡಗಳ ಗೋಡೆಗಳು ಬಿದ್ದುಹೋಗಿದ್ದು, ಮುಖ್ಯಮಂತ್ರಿಗಳೇ ಈ ಕಡೆ ನೋಡಿ ಎಂದು ಜನ ಆಗ್ರಹಿಸುವಂತಾಗಿದೆ. ಮುಖ್ಯಮಂತ್ರಿಗಳು ಅವರತ್ತ ನೋಡುತ್ತಿಲ್ಲ. ರಾಜ್ಯಪಾಲರ ಭಾಷಣದಲ್ಲೂ ಅದರ ಉಲ್ಲೇಖವಿಲ್ಲ. ಇದೊಂದು ಗೊತ್ತು ಗುರಿ ಇಲ್ಲದ ಸಪ್ಪೆ ಭಾಷಣ ಎಂದು ಟೀಕಿಸಿದರು.