ಬೆಂಗಳೂರು[ಫೆ.18]: ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣವು ಒಂದು ರೀತಿಯ ‘ಕಟ್‌ ಆ್ಯಂಡ್‌ ಪೇಸ್ಟ್‌’ ಭಾಷಣವಾಗಿದ್ದು, ಮುಂದಿನ ಬಜೆಟ್‌ ಕುರಿತು ಯಾವುದೇ ದಿಕ್ಕು ದಿಸೆ ಇಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಸೋಮವಾರ ರಾಜ್ಯಪಾಲರ ಭಾಷಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಯೋಜನೆಗಳನ್ನೇ ಭಾಷಣದಲ್ಲಿ ಪ್ರಸ್ತಾಪ ಮಾಡಲಾಗಿದೆ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹೊಸ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನೆರೆ ಪರಿಹಾರ ನೀಡಲು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರೈತರು ಬೆಳೆ, ಭೂಮಿ ಕಳೆದುಕೊಂಡಿದ್ದಾರೆ. ರೈತರಿಗೆ ನೀಡಿರುವ ಅನುದಾನದ ಯಾವುದೇ ಅಂಕಿ-ಅಂಶಗಳಿಲ್ಲ. ಕೇಂದ್ರದ ಅನುದಾನದ ಬಗ್ಗೆ ಉಲ್ಲೇಖ ಮಾಡಿಲ್ಲ. ಮೈತ್ರಿ ಸರ್ಕಾರದ ಯೋಜನೆಗಳನ್ನು ರಾಜ್ಯಪಾಲರ ಮೂಲಕ ಹೇಳಿಸಿದ್ದಾರೆ ಎಂದು ಆರೋಪಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಆರ್ಥಿಕ ಶಿಸ್ತು ಕಾಪಾಡಲಾಗಿತ್ತು. ಅಧಿಕಾರ ಬಿಟ್ಟು ಹೋಗುವ ವೇಳೆ ರಾಜ್ಯದ ಖಜಾನೆ ಉತ್ತಮವಾಗಿತ್ತು. ಆದರೆ, ಇದೀಗ ಆರ್ಥಿಕ ಶಿಸ್ತು ಹಳಿ ತಪ್ಪಿದೆ. ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಲಾಗುವುದು. ಅಂಕಿ-ಸಂಖ್ಯೆಗಳನ್ನು ಇಡಬೇಕಾದ ಸರ್ಕಾರ ಮುಚ್ಚಿಡುತ್ತಿದೆ. ಕೇಂದ್ರದಿಂದ ನರೇಗಾದಲ್ಲಿ ಬರಬೇಕಾದ ಹಣ ಎಷ್ಟುಬಾಕಿ ಇದೆ? ಜಿಎಸ್‌ಟಿ ಪರಿಹಾರದ ಹಣ ಬಂದಿಲ್ಲ. ಕೇಂದ್ರದ ನಡವಳಿಕೆಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಹೀನಾಯ ಪರಿಸ್ಥಿತಿಗೆ ಬಂದಿದೆ ಎಂದು ಕಿಡಿಕಾರಿದರು.

ರಾಮನಗರದಲ್ಲಿ ಆರ್‌ಎಸ್‌ಎಸ್‌ ಪಥ ಸಂಚಲನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಿದ್ದಾರಂತೆ. ರಾಮನಗರದ ಮುಸ್ಲಿಂ ಬೀದಿಯಲ್ಲಿ ದೊಣ್ಣೆ ಹಿಡಿದುಕೊಂಡು ಪಥಸಂಚಲನ ಮಾಡಲು ಅವಕಾಶ ನೀಡಿದವರು ಯಾರು? ಕಾನೂನಿನಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡಲು ಅವಕಾಶ ಇದೆಯೇ? ದೊಣ್ಣೆ ಮಾರಕಾಸ್ತ್ರವಲ್ಲವೇ? ರಾಮನಗರ ರಾಮರಾಜ್ಯವಾಗಿರಬೇಕೇ ಹೊರತು ರಾವಣನ ರಾಜ್ಯವಾಗುವುದಕ್ಕೆ ಬಿಡುವುದಿಲ್ಲ. ಬೇರೆಯವರು ಹೀಗೆ ದೊಣ್ಣೆ ಹಿಡಿದುಕೊಂಡು ಪ್ರತಿಭಟನೆ ಮಾಡಲು ಬಿಡುತ್ತಾರಾ? ರಾಮನಗರಕ್ಕೆ ಕಲ್ಲಡ್ಕ ಪ್ರಭಾಕರ್‌ ಕೊಡುಗೆ ಏನು? ಕಪಾಲ ಬೆಟ್ಟಹಿಡಿದುಕೊಂಡು ರಾಮನಗರದಲ್ಲಿ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಪ್ರಕರಣ ಸಂಬಂಧ ಸರ್ಕಾರದ ನಡವಳಿಕೆ ಸರಿ ಇಲ್ಲ. ಇದೊಂದು ಗಂಭೀರ ಪ್ರಕರಣವಾಗಿದ್ದರೂ ವಿಶೇಷ ಜಾಮೀನಿನ ಮೇಲೆ ಬಿಡುತ್ತಾರೆ. ಆದರೆ, ಶಾಹಿನ್‌ ಶಾಲೆಯಲ್ಲಿ ಮಕ್ಕಳು ನಾಟಕ ಮಾಡಿದ್ದಕ್ಕೆ ಪೋಷಕರನ್ನು ಜೈಲಿಗೆ ಹಾಕುತ್ತಾರೆ. ಇದು ಸರ್ಕಾರದ ನಡವಳಿಕೆಯನ್ನು ಸೂಚಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.