ಬೆಂಗಳೂರು, [ಫೆ.05]:  ಕಾಂಗ್ರೆಸ್ ನಿಂದ ಅಮಾನತುಗೊಂಡಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪರಿಸ್ಥಿತಿ ಉಗುಳಕ್ಕೂ ಆಗದ ನುಂಗಕ್ಕೂ ಆಗದ ಬಿಸಿ ತುಪ್ಪವಾಗಿದೆ.

ಅದೇನೆಂದರೆ ಒಂದು ಕಡೆ ವಿಪ್. ಮತ್ತೊಂದು ಕಡೆ ಬಂಧನ ಭೀತಿ. ಹೌದು... ನಾಳೆಯಿಂದ [ಬುಧವಾರ] ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದೆ. 

ಈ ನಡುವೆ ಕುಮಾರಸ್ವಾಮಿ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್​ ತನ್ನ ಶಾಸಕರಿಗೆ ಕಡ್ಡಾಯವಾಗಿ ಅಧಿವೇಶನ ಮುಗಿಯುವವರೆಗೂ ಹಾಜರಾಗುವಂತೆ ವಿಪ್​ ಜಾರಿ ಮಾಡಿದೆ. 

ಒಂದು ವೇಳೆ ಅಧಿವೇಶನಕ್ಕೆ ಗೈರಾದರೆ ಪಕ್ಷ ಕ್ರಮಕೈಗೊಳ್ಳುತ್ತದೆ ಎನ್ನುವ ಭಯ. ಮತ್ತೊಂದೆಡೆ ಅಧಿವೇಶನಕ್ಕೆ ಬಂದರೆ ಆನಂದ್​ ಸಿಂಗ್​ ಮೇಲಿನ ಹಲ್ಲೆ ಪ್ರಕರಣದಲ್ಲಿ ಬಂಧನವಾಗುವ ಭೀತಿ. 

ಇದ್ರಿಂದ ಸಂಕಷ್ಟದಲ್ಲಿ ಸಿಲುಕಿರುವ ಗಣೇಶ್​ಗೆ ಪರಿಸ್ಥಿತಿ ನುಂಗಲಾರದ ತುತ್ತಾಗಿದ್ದು, ಮುಂದಿನ ನಡೆ ಏನು ಅನ್ನೋದು ಮಾತ್ರ ಕುತೂಹಲ ಮೂಡಿಸಿದೆ. 

ಅಧಿವೇಶನಕ್ಕೆ ಬರಲಿಲ್ಲ ಅಂದ್ರೆ ಪಕ್ಷ ಗಣೇಶ್​ ವಿರುದ್ಧ ಕ್ರಮ ಕೈಗೊಳ್ಳಲಿದೆ. ಹೀಗಾಗಿ ನಾಳೆ ಏನು ಮಾಡಬೇಕು ಎಂದು ಗೊತ್ತಾಗದೇ ಜೆ.ಎನ್. ಗಣೇಶ್ ಇಕ್ಕಟ್ಟಿಗೆ ಸಿಲುಕಿದಂತೂ ಸತ್ಯ.