ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಎಂದು ಸಿದ್ದರಾಮಯ್ಯನವರ ಬೆಂಬಲಿಗರು ಅಭಿಮಾನಿಗಳು ನಡೆಸುತ್ತಿರುವ ಬೃಹತ್ ಕಾರ್ಯಕ್ರಮಕ್ಕೆ ಬಿಜೆಪಿ ಟಾಂಟ್ ಕೊಟ್ಟಿದೆ.

ಬೆಂಗಳೂರು, (ಜೂನ್.30): ಆಗಸ್ಟ್‌ 12ಕ್ಕೆ 75 ವರ್ಷಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ ಅವರ ಜನುಮ ದಿನದ ಅಮೃತ ಮಹೋತ್ಸವವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದೆ. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರ ಬೆಂಬಲಿಗರು ಸಿದ್ದರಾಮೋತ್ಸವ ಎಂದು ಹೆಸರಿಟ್ಟಿದ್ದಾರೆ. ಇದಕ್ಕೆ ಇದೀಗ ಬಿಜೆಪಿ ವ್ಯಂಗ್ಯವಾಡಿದೆ. 

ಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಯ್ಯ ವಿರುದ್ಧ ಬಿಜೆಪಿ ವ್ಯಂಗ್ಯದ ಟ್ವೀಟ್ ಮಾಡಿದೆ. 

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ, ಮುಖ್ಯಮಂತ್ರಿ ಪದವಿಯ ಆಸೆಗಾಗಿ ಸಿದ್ದರಾಮಯ್ಯ ತಮ್ಮ ಹಳೆಯ ಅಹಿಂದ ಕಾರ್ಡ್ ಬಳಸುತ್ತಿದ್ದಾರೆ. ಅಹಿಂದ ಕಾರ್ಡ್ ಎಕ್ಸ್‌ಪೈರ್ ಆಗಿದೆ. ಕಳೆದ ಬಾರಿ ಇದೇ ಕಾರ್ಡ್ ತೋರಿಸಿ ಮೋಸ ಮಾಡಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ ಎಂದು ಟೀಕಿಸಿದೆ.

ಆ.3ಕ್ಕೆ ಸಿದ್ದು ಬಣ ‘ಶಕ್ತಿ ಪ್ರದರ್ಶನ’: 5 ಲಕ್ಷ ಜನರನ್ನು ಸೇರಿಸಿ 75ನೇ ಜನ್ಮದಿನ ಆಚರಣೆ!

Scroll to load tweet…

ನಕಲಿ ಗಾಂಧಿ ಕುಟುಂಬಸ್ಥರು ಪ್ರತಿಬಾರಿಯೂ ರಾಜ್ಯ ಕಾಂಗ್ರೆಸ್ ನಾಯಕರಿಗೆ ಒಂದಾಗಿರಬೇಕೆಂದು ಸೂಚನೆ ನೀಡುತ್ತಾರೆ. ದೆಹಲಿಯಲ್ಲಿ ಹೂಂಗುಟ್ಟಿ ಬರುವ ಕಾಂಗ್ರೆಸ್ಸಿಗರು ಬೆಂಗಳೂರಿಗೆ ಬಂದ ಕೂಡಲೇ ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾರೆ. ತಾಳಮೇಳ ಇಲ್ಲದ ಕೈ ನಾಯಕರಿಂದಾಗಿಯೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಬಿಜೆಪಿ ಟ್ವೀಟ್‌ ಮೂಲಕ ಕಾಲೆಳೆದಿದೆ.

ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲೆತ್ತಲು ಸಿದ್ದರಾಮೊತ್ಸವ ಮೂಲಕ ವೇದಿಕೆ ಸಜ್ಜುಗೊಳಿಸುತ್ತಿರುವ ಸಿದ್ದರಾಮಯ್ಯ ಬಣದ ನಾಯಕರು ಒಂದೆಡೆಯಾದರೆ, ಇದೇ ಸಿದ್ದರಾಮಯ್ಯರನ್ನು ಕೆಡವಲು ಖೆಡ್ಡಾ ತೋಡುತ್ತಿರುವ ಡಿ.ಕೆ. ಶಿವಕುಮಾರ್ ಬಣದ ನಾಯಕರು ಮತ್ತೊಂದೆಡೆ. ಈ 2 ಬಣಗಳ ನಡುವೆ ದೆಹಲಿಯ ನಕಲಿ ಗಾಂಧಿಗಳ ಬಣ ಮೂಕ ಪ್ರೇಕ್ಷಕರಷ್ಟೇ ಎಂದು ಟಾಂಗ್ ಕೊಟ್ಟಿದೆ.

Scroll to load tweet…

ಕಾಂಗ್ರೆಸ್ಸಿಗರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ. ಮತವೇ ಇಲ್ಲದವರು ಬಹುಮತ ಗಳಿಸಲು ಹೇಗೆ ಸಾಧ್ಯ? 2023 ರಲ್ಲಿ ಕಾಂಗ್ರೆಸ್ ಸೋಲು ಖಚಿತ. ಟವಲ್ ಈಗಲೇ ಹಾಕಬೇಡಿ, ನಾಳೆಯ ದಿನ ಮುಖಭಂಗವಾದಾಗ ಒರೆಸಿಕೊಳ್ಳಲು ತುಂಡು ಬಟ್ಟೆಯೂ ಲಭಿಸದು ವ್ಯಂಗ್ಯವಾಡಿದೆ. 

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ: ಸಮಾವೇಶದ ಹಿಂದೆ ದುರುದ್ದೇಶ ಎಂದು ಡಿಕೆಶಿ ಬಣದ ವಿರೋಧ

2013ರ ಸೋಲನ್ನು ಪರಮೇಶ್ವರ್ ಮರೆತಿಲ್ಲ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ. ಸಿದ್ದರಾಮಯ್ಯ ಅವರೇ ನೀವು ಯಾರನ್ನೂ ಓವರ್ ಟೇಕ್ ಮಾಡಿದರೂ ಕಾಂಗ್ರೆಸ್ ಒಳಜಗಳ ನಿಮ್ಮನ್ನು ಓವರ್ ಟೇಕ್ ಮಾಡದೇ ಬಿಡದು. 2018 ರಲ್ಲಿ ಅನುಭವಿಸಿದ್ದೀರಿ, 2023 ರಲ್ಲಿ ಡಿಕೆಶಿ, ಖರ್ಗೆ, ಪರಮೇಶ್ವರ್ ಸೇರಿಕೊಂಡು ನಿಮ್ಮನ್ನು ಓವರ್ ಟೇಕ್ ಮಾಡಲಿದ್ದಾರೆ ಎಂದು ಬಿಜೆಪಿ ಭವಿಷ್ಯ ನುಡಿದಿದೆ.

ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವುದು ಎಂದರೆ ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿ ತೂಕ ಮಾಡಿದಂತೆ, ಇವರು ಒಟ್ಟಾಗುವುದಿಲ್ಲ, ಹೈಕಮಾಂಡ್ ಒಗ್ಗಟ್ಟಿನ ಜಪ ಬಿಡುವುದಿಲ್ಲ. ಕಾಂಗ್ರೆಸ್ ವರಿಷ್ಠರೀಗ ನೀರಲ್ಲಿ ಮುಳುಗಿ ಬಂದ ಬೆಕ್ಕಿನಂತಾಗಿದ್ದಾರೆ ಎಂದಿದೆ.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸಮಾವೇಶ ಆಯೋಜಿಸಿದ್ದಾರೆ ಎಂದರೆ ಬಂಡಾಯದ ಬಾವುಟ ಹಾರಿಸಿದ್ದಾರೆಂದೇ ಅರ್ಥ. ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ನಡೆಸಿ ವರಿಷ್ಠರಿಗೆ ಭರತನಾಟ್ಯ ಮಾಡಿಸಿದ್ದರು. ಸಿದ್ದರಾಮಯ್ಯನವರೇ, ಇದೆಲ್ಲವೂ ಸ್ವಾರ್ಥಕ್ಕಾಗಿ ಅಲ್ವೇ ಎಂದು ಪ್ರಶ್ನಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ, ನಿಮಗಿದು ಎಚ್ಚರಿಕೆ. ಸಿದ್ದರಾಮೋತ್ಸವದ ಬಳಿಕ ನಿಮ್ಮ ಪರಿಸ್ಥಿತಿ ಇದೇ ರೀತಿ ಆಗಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.