Asianet Suvarna News Asianet Suvarna News

ನನ್ನನ್ನು ಬದಲಿಸಲಾಗುತ್ತೆ ಎಂಬುದು ನಿಜವಲ್ಲ: ನಳಿನ್ ಕುಮಾರ್ ಸಂದರ್ಶನ

* ನನ್ನನ್ನು ಬದಲಿಸಲಾಗುತ್ತೆ ಎಂಬುದರಲ್ಲಿ ಹುರುಳಿಲ್ಲ

* ಸಂತೋಷದಿಂದಲೇ ಬಿಎಸ್‌ವೈ ಸ್ಥಾನ ಬಿಟ್ಟುಕೊಟ್ಟಿದ್ದಾರೆ

* ಅವರ ಮಾರ್ಗದರ್ಶನದಲ್ಲೇ ಬಿಜೆಪಿ ಮುನ್ನಡೆಯುತ್ತೆ

* ಅನುಭವಿ ಆಗಿದ್ದರಿಂದ ಬೊಮ್ಮಾಯಿಗೆ ಸಿಎಂ ಪಟ್ಟ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಂದರ್ಶನ

Karnataka BJP President Nalin Kumar Kateel Speaks On Bommai Cabinet pod
Author
Bangalore, First Published Aug 8, 2021, 2:21 PM IST

ವಿಜಯ್‌ ಮಲಗಿಹಾಳ

ಬೆಂಗಳೂರು(ಜು.08): ರಾಜ್ಯ ಬಿಜೆಪಿಯಲ್ಲಿ ಒಂದು ಸುತ್ತಿನ ಚಂಡಮಾರುತ ಬೀಸಿ ತಣ್ಣಗಾಗಿದೆ. ಪಕ್ಷದ ಭದ್ರ ಬನಾದಿಯಂತಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿ ಆ ಜಾಗಕ್ಕೆ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದಾರೆ. ಸಂಪುಟವೂ ರಚನೆಯಾಗಿ, ನೂತನ ಸಚಿವರಿಗೆ ಖಾತೆಗಳ ಹಂಚಿಕೆಯೂ ಆಗಿದೆ. ಇತ್ತೀಚಿನ ಬಿಜೆಪಿಯಲ್ಲಿನ ಆಂತರಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಶನಿವಾರ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಾಯಕತ್ವ ಬದಲಾವಣೆ ಇಲ್ಲವೇ ಇಲ್ಲ ಎನ್ನುತ್ತಿದ್ದ ನೀವೆಲ್ಲ ದಿಢೀರನೆ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬದಲಿಸಿದ್ದು ಯಾಕೆ? ಇದರಿಂದ ಸಂದೇಶ ರವಾನಿಸುವ ಉದ್ದೇಶ ಪಕ್ಷಕ್ಕಿತ್ತೆ?

ನೋಡಿ ಯಡಿಯೂರಪ್ಪ ಅವರನ್ನು ಬದಲಿಸಿಲ್ಲ. ನಮ್ಮ ಪಕ್ಷದಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟವರು ಅಧಿಕಾರ ಬಿಟ್ಟು ಕೊಡಬೇಕು ಎಂಬ ಪಕ್ಷದ ವ್ಯವಸ್ಥೆಯಿದ್ದರೂ ನನಗೆ ಎರಡು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದರು, ಇದೀಗ ಅದಕ್ಕೆ ಬದ್ಧನಾಗಿ ಸಹಜವಾಗಿಯೇ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುತ್ತಿದ್ದೇನೆ ಎಂಬ ಮಾತನ್ನು ಖುದ್ದು ಯಡಿಯೂರಪ್ಪ ಅವರೇ ಹೇಳಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಿಯಮಕ್ಕೆ ಎಲ್ಲರೂ ಬದ್ಧರು ಎಂಬುದನ್ನು ಅವರು ನಿರೂಪಿಸಿದ್ದಾರೆ.

ಎರಡು ವರ್ಷಗಳ ಬಳಿಕ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು ಎಂಬ ಮಾತುಕತೆ ಯಡಿಯೂರಪ್ಪ ಮತ್ತು ವರಿಷ್ಠರ ನಡುವೆ ಹಿಂದೆಯೇ ನಡೆದಿತ್ತೆ?

-ನನಗೆ ಅದರ ಬಗ್ಗೆ ಮಾಹಿತಿ ಇಲ್ಲ.

ಕೊನೆಗಾಲದಲ್ಲಿ ಯಡಿಯೂರಪ್ಪ ಅವರಿಗೆ ಪಕ್ಷದ ನಾಯಕರು ಕಣ್ಣೀರು ಹಾಕಿಸಿದರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ?

-ಅದು ಸಂತೋಷದ ಕಣ್ಣೀರೆ ಹೊರತು ದುಃಖದ ಕಣ್ಣೀರಲ್ಲ. ಸಂತೋಷದಿಂದ ರಾಜೀನಾಮೆ ನೀಡುತ್ತಿದ್ದೇನೆ ಎಂಬ ಮಾತನ್ನು ಅವರೇ ಹೇಳಿದ್ದಾರೆ.

ಪರ್ಯಾಯ ನಾಯಕರಾಗಿ ಬಸವರಾಜ ಬೊಮ್ಮಾಯಿ ಅವರನ್ನೇ ಆಯ್ಕೆ ಮಾಡಿದ್ದು ಹೇಗೆ?

-ಈಗಿರುವ ನಾಯಕರ ಪೈಕಿ ಅವರು ಅನುಭವಿ. ಆಡಳಿತದಲ್ಲಿ ಪರಿಣತರು. ಹೆಗಡೆ ಅವರಿಂದ ಯಡಿಯೂರಪ್ಪ ಅವರೆಗೆ ಹಲವು ಮುಖ್ಯಮಂತ್ರಿಗಳ ಜೊತೆಗೆ ಕೆಲಸ ಮಾಡಿದವರು. ಅವರ ತಂದೆಯವರೂ ಮುಖ್ಯಮಂತ್ರಿಯಾಗಿದ್ದವರು. ಹೀಗಾಗಿ, ಬೇರೆ ಬೇರೆ ಇಲಾಖೆಗಳ ಆಡಳಿತ ನಿಭಾಯಿಸಿದ ಸಾಮರ್ಥ್ಯ ಇರುವುದರಿಂದ ಈಗ ಮುಖ್ಯಮಂತ್ರಿ ಸ್ಥಾನಕ್ಕೇ ಅವರೇ ಸಮರ್ಥರು ಎಂಬ ನಿಲವಿಗೆ ಪಕ್ಷದ ಹಿರಿಯ ನಾಯಕರೆಲ್ಲರೂ ಬಂದರು.

ಸಂಘ ಪರಿವಾರ ಅಥವಾ ಪಕ್ಷದ ಮೂಲದವರಿಗೇ ಮುಖ್ಯಮಂತ್ರಿಯಂಥ ಪ್ರಮುಖ ಸ್ಥಾನ ನೀಡಲಾಗುವುದು ಎಂಬ ಪಟ್ಟನ್ನು ಬಿಜೆಪಿ ಸಡಿಲಿಸಿತಲ್ಲವೇ?

-ಆಯಾ ರಾಜ್ಯಗಳ ಸನ್ನಿವೇಶಕ್ಕೆ ತಕ್ಕಂತೆ ಕೆಲವೊಂದು ಸಾರಿ ಅವಕಾಶ ನೀಡಿದ್ದೇವೆ. ಬೇರೆ ರಾಜ್ಯಗಳಲ್ಲೂ ಇತರ ಪಕ್ಷಗಳಿಂದ ಬಂದವರಿಗೆ ಪ್ರಮುಖ ಸ್ಥಾನಮಾನವನ್ನು ಬಿಜೆಪಿಯಲ್ಲಿ ನೀಡಲಾಗಿದೆ. ಅವರು ನಮ್ಮ ಪಕ್ಷದವರೇ ಹೊರತು ಬೇರೆ ಪಕ್ಷದವರಲ್ಲ. ಯಾರೇ ಆಗಲಿ, ಒಂದು ಬಾರಿ ನಮ್ಮ ಪಕ್ಷದ ಸದಸ್ಯತ್ವ ಸ್ವೀಕರಿಸಿದ ಮೇಲೆ ಅವರು ಬಿಜೆಪಿಯವರಾಗುತ್ತಾರೆ.

ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅಭ್ಯರ್ಥಿ ಎಂಬಂತೆ ಪ್ರತಿಪಕ್ಷಗಳು ಬಿಂಬಿಸುತ್ತಿವೆಯಲ್ಲ?

-ಅವರು ಪಕ್ಷದ ಸರ್ವಸಮ್ಮತಿಯ ಅಭ್ಯರ್ಥಿ. ಇದರಲ್ಲಿ ಎರಡನೇ ಮಾತಿಲ್ಲ.

ಮುಂದಿನ ಬಾರಿ ರಾಷ್ಟ್ರವಾದಿ ನಾಯಕ ಮುಖ್ಯಮಂತ್ರಿಯಾಗುತ್ತಾರೆ ಎಂದು ಹಿರಿಯ ಸಚಿವ ಈಶ್ವರಪ್ಪ ಹೇಳಿದ್ದಾರೆ. ಹಾಗಾದರೆ ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರು ರಾಷ್ಟ್ರವಾದಿ ಅಲ್ಲವೇ?

-ರಾಷ್ಟ್ರವಾದವನ್ನು ಒಪ್ಪಿಕೊಂಡವರು ಬಿಜೆಪಿಯಲ್ಲಿರುತ್ತಾರೆ. ಈಗಿನವರೂ ರಾಷ್ಟ್ರವಾದಿ. ಮುಂದಿನವರೂ ರಾಷ್ಟ್ರವಾದಿಯೇ ಆಗಿರುತ್ತಾರೆ. ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಾದಲ್ಲಿ ಈಶ್ವರಪ್ಪ ಅವರನ್ನೇ ಕೇಳಬೇಕು.

ಉಪಮುಖ್ಯಮಂತ್ರಿ ಹುದ್ದೆ ಈ ಬಾರಿ ಕೈಬಿಡುವ ನಿರ್ಧಾರ ಕೈಗೊಂಡಿದ್ದೇಕೆ?

-ಪಕ್ಷದ ರಾಷ್ಟ್ರೀಯ ನಾಯಕರು ಕಳೆದ ಬಾರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಮೂಲಕ ಒಂದು ಪ್ರಯೋಗ ಮಾಡಿದರು. ಸಚಿವರಾಗಿದ್ದರೂ ಅವರು ಚಟುವಟಿಕೆಯಿಂದ ಕೆಲಸ ಮಾಡಬಹುದು ಎಂಬ ಕಾರಣಕ್ಕಾಗಿ ಉಪಮುಖ್ಯಮಂತ್ರಿ ಸ್ಥಾನ ಈ ಬಾರಿ ಬೇಡ ಎಂಬ ನಿರ್ಧಾರಕ್ಕೆ ರಾಷ್ಟ್ರೀಯ ನಾಯಕರು ಬಂದರು. ಮೇಲಾಗಿ ಉಪಮುಖ್ಯಮಂತ್ರಿ ಹುದ್ದೆ ಎನ್ನುವುದು ಸಾಂವಿಧಾನಿಕ ಹುದ್ದೆಯಲ್ಲ. ಆದರೂ ಅದು ಇತರ ಸಚಿವರಲ್ಲಿ ತಾರತಮ್ಯ ಮೂಡಿಸಬಹುದು ಎಂಬ ಕಾರಣವೂ ಇದ್ದಿರಬಹುದು.

ಬಿಜೆಪಿ ರಾಜ್ಯಾಧ್ಯಕ್ಷರ ಅಂದರೆ, ನಿಮ್ಮ ಬದಲಾವಣೆ ಆಗುತ್ತದೆ ಎಂಬ ವದಂತಿ ಆಗಾಗ ಕೇಳಿಬರುತ್ತಿರುವುದು ಯಾಕೆ?

-ಅದರಲ್ಲಿ ಹುರುಳಿಲ್ಲ. ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆಯಿದೆ. ನಾನು ಮೊದಲು ಒಂದು ವರ್ಷ ಹಂಗಾಮಿ ರಾಜ್ಯಾಧ್ಯಕ್ಷನಾಗಿದ್ದೆ. ಆಮೇಲೆ ಚುನಾಯಿತನಾದೆ. ಹೀಗಾಗಿ, ನನ್ನ ಅವಧಿ ಮೂರು ವರ್ಷ. ಆದರೆ, ನಾನು ಅಪೇಕ್ಷೆಯಿಂದ ಈ ಸ್ಥಾನದಲ್ಲಿ ಇಲ್ಲ. ಹಿರಿಯರು ಕೊಟ್ಟಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಎಷ್ಟುದಿನ ಇರುತ್ತೇನೆ ಎಂಬುದು ಮುಖ್ಯವಲ್ಲ. ಇರುವಷ್ಟುದಿನಗಳಲ್ಲಿ ಪಕ್ಷದ ಸಂಘಟನೆ ಎಷ್ಟುಮಾಡುತ್ತೇನೆ ಎಂಬುದು ಮುಖ್ಯ.

ಸಂಪುಟದಿಂದ ಹಿರಿಯರನ್ನು ಕೈಬಿಡಬೇಕು ಎಂಬ ಪ್ರಸ್ತಾಪ ಪಕ್ಷದಲ್ಲಿ ಕೇಳಿಬಂದಿತ್ತು. ಅದೀಗ ಅನುಷ್ಠಾನಕ್ಕೆ ಬಂದಿದೆಯೇ?

-ಒಂದಷ್ಟುಜನರನ್ನು ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಹಿರಿಯರನ್ನು ಕೈಬಿಟ್ಟಿರುವುದು ಬೇರೆ ಕಾರಣಕ್ಕಲ್ಲ. ಮುಂಬರುವ ಜಿ.ಪಂ. ಮತ್ತು ತಾ.ಪಂ. ಚುನಾವಣೆ, ವಿಧಾನಪರಿಷತ್‌ ಚುನಾವಣೆ ಸೇರಿದಂತೆ ವಿವಿಧ ಚುನಾವಣೆಗಳ ದೃಷ್ಟಿಯಿಂದ ಅವರನ್ನು ಸಂಘಟನಾತ್ಮಕವಾಗಿ ಬಳಸಿಕೊಳ್ಳುವುದಕ್ಕೆ ಸಚಿವ ಸ್ಥಾನದಿಂದ ಕೈಬಿಡಲಾಗಿದೆ. ಅನ್ಯ ರಾಜ್ಯಗಳ ಚುನಾವಣೆಗಳಿಗೂ ಕೆಲವರನ್ನು ಬಳಸಿಕೊಳ್ಳಲಾಗುವುದು.

ನಿಮ್ಮ ಪ್ರಕಾರ ಈಗ ಸಂಪುಟದಿಂದ ಕೈಬಿಟ್ಟವರು ಯಾವ ಆಧಾರದಲ್ಲಿ ಹಿರಿಯರು?

- ಹಾಗಲ್ಲ. ಕೆಲವರು ಸಾಮಾಜಿಕವಾಗಿ, ಕೆಲವರು ಪ್ರಾದೇಶಿಕವಾಗಿ ಮತ್ತು ಕ್ರಿಯಾಶೀಲವಾಗಿ ಪಕ್ಷಕ್ಕೆ ಕೆಲಸ ಮಾಡಬಲ್ಲವರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ಈಗಿನ ಬೊಮ್ಮಾಯಿ ಅವರ ಸಂಪುಟ ಪಕ್ಷಕ್ಕೆ ಎಲ್ಲ ರೀತಿಯಿಂದ ಸಮಾಧಾನ ತಂದಿದೆಯೇ?

- ಹೌದು ಸಮಾಧಾನ ತಂದಿದೆ. ಈ ಸಂಪುಟ ಸಂಘಟನಾತ್ಮಕ, ಹಿರಿತನ, ಅನುಭವ ಹಾಗೂ ಕ್ರಿಯಾಶೀಲ ಇದೆಲ್ಲದರ ಮಿಶ್ರಣದಂತಿದೆ.

ಇನ್ನು ಮುಂದೆ ಪಕ್ಷದಲ್ಲಿ ಯಡಿಯೂರಪ್ಪ ಅವರ ಸ್ಥಾನಮಾನ ಹೇಗಿರುತ್ತದೆ?

- ಅವರು ನಮ್ಮ ಪಕ್ಷದ ಸರ್ವಸಮ್ಮತ ನಾಯಕರು. ಅವರ ಮಾರ್ಗದರ್ಶನದಲ್ಲೇ ಪಕ್ಷ ಮುನ್ನಡೆಯಲಿದೆ. ಮುಂಬರುವ ಚುನಾವಣೆಗಳಲ್ಲಿ ಜತೆಯಾಗಿಯೇ ಪ್ರವಾಸ ಮಾಡುತ್ತೇವೆ. ಅವರ ಶಕ್ತಿಯನ್ನು ಪಕ್ಷ ಬಳಸಿಕೊಳ್ಳುತ್ತದೆ.

ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಬೇರೊಂದು ಸ್ಥಾನಮಾನ ನೀಡುವ ಸಾಧ್ಯತೆ ಇದೆಯೇ?

- ವಿಜಯೇಂದ್ರ ಅವರೀಗ ಪಕ್ಷದ ರಾಜ್ಯ ಉಪಾಧ್ಯಕ್ಷರು. ಅದು ಗೌರವಾನ್ವಿತ ಹುದ್ದೆ. ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ.

ಈಗಿರುವ ನಿಗಮ ಮಂಡಳಿಗಳ ನೇಮಕದಲ್ಲಿ ಬದಲಾವಣೆ ಆಗುತ್ತದೆ ಎಂಬ ಮಾತಿದೆ?

- ಯಾವ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಎರಡು ವರ್ಷದ ಅವಧಿ ಮುಗಿದಿದೆಯೋ ಅವರನ್ನು ಬದಲಾಯಿಸಲಾಗುವುದು. ಪಕ್ಷದ ಕಾರ್ಯಕರ್ತರಿಗೆ, ಶಾಸಕರಿಗೆ ಹಾಗೂ ಮುಖಂಡರಿಗೆ ನೀಡಲಾಗುವುದು.

Follow Us:
Download App:
  • android
  • ios