ಬೆಂಗಳೂರು, (ಅ.08): ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಎಲ್ಲೆಡೆ ನದಿಗಳು ಉಕ್ಕಿಹರಿಯುತ್ತಿದೆ. ಪ್ರವಾಹದ ಹಿನ್ನೆಲೆಯಲ್ಲಿ ಜನರು ಮನೆ-ಮಠ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನು ಅರಿತ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿರಾಶ್ರಿತರಿಗೆ ನೆರವಾಗಿ ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ನೆರೆ ಅಧ್ಯಯನಕ್ಕೆ ಕಾಂಗ್ರೆಸ್‌ನಿಂದ 4-5 ತಂಡ, ಡಿಕೆಶಿ

ಈ ಬಗ್ಗೆ ಟ್ವೀಟ್ ಮಾಡಿರುವ ಕಟೀಲ್, ರಾಜ್ಯದ ಹಲವು ಪ್ರದೇಶಗಳಲ್ಲಿ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದ್ದು ಅಸಂಖ್ಯಾತ ಜನರು ನೆರೆಯಿಂದ ಮನೆಮಠ ಕಳೆದುಕೊಂಡಿದ್ದಾರೆ,  ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಎಲ್ಲಾ ನಾಯಕರು/ಕಾರ್ಯಕರ್ತರು ಪರಿಹಾರ ಹಾಗೂ ಸೇವಾ ಕಾರ್ಯದಲ್ಲಿ ತಮ್ಮನ್ನು ಜೋಡಿಸಿಕೊಂಡು ಸಂತ್ರಸ್ತರಿಗೆ ಶಕ್ತಿಮೀರಿ ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಅತಿಯಾದ ಮಳೆಯಿಂದಾಗಿ, ಕಾವೇರಿ, ಕೃಷ್ಣಾ ಭಾಗದ ಜಿಲ್ಲೆಗಳು, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹ ಎದುರಿಸುತ್ತಿದ್ದು, ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಹಾಗೂ ಜೀವ ಹಾನಿ ಸಂಭವಿಸಿದೆ. 

ಕೊರೋನಾ ಸಂದರ್ಭದಲ್ಲೂ ಬಿಜೆಪಿ ಸೇರಿದಂತೆ ಇತರೆ ಪಕ್ಷದ ನಾಯಕರುಗಳು ತೊಂದರೆಯಲ್ಲಿದ್ದವರಿಗೆ ಸಹಾಯ ಮಾಡಿದ್ದರು. ಇದೀಗ ಕೊರೋನಾ ಆತಂಕದ ಮಧ್ಯೆ ಕೆಲವೆಡೆ ಪ್ರವಾಹ ಭೀತಿ ಶುರುವಾಗಿದ್ದು, ಜನರಿಗೆ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿವೆ.