ಮೈಸೂರು, (ಜ.11): ಕಾಂಗ್ರೆಸ್ ಪಕ್ಷಕ್ಕೆ 3 ಶಾಪವಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. 

ಇಂದು (ಸೋಮವಾರ) ಮೈಸೂರಿನ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದ ಕಟೀಲ್,  ಕಾಂಗ್ರೆಸ್ ಪಕ್ಷವು ಗಾಂಧಿ ವಿಚಾರಧಾರೆ ಹೆಸರಿನಲ್ಲಿ ಮತ ಪಡೆಯಿತು. ಬಳಿಕ ಅದನ್ನು ಮರೆಯಿತು. ಅಂಬೇಡ್ಕರ್ ಭಾವಚಿತ್ರವನ್ನು ಮತಕ್ಕಾಗಿ ಬಳಸಿಕೊಂಡಿತು. ಬಳಿಕ, ಅದೇ ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು. ಕಾಂಗ್ರೆಸ್ ಡಾ. ಬಿ.ಆರ್. ಅಂಬೇಡ್ಕರ್‌ಗೆ ಗೌರವ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಡ್ರೈವರ್‌, ಡಿ.ಕೆ. ಶಿವಕುಮಾರ್ ಕಂಡಕ್ಟರ್ ಎಂದ ಸಚಿವ...!

ನಂತರ ಕಾಂಗ್ರೆಸ್ ಗೋಮಾತೆಯ ಚಿಹ್ನೆಯನ್ನು ಬಳಸಿತ್ತು. ಅದೇ ಚಿಹ್ನೆಯ ಅಡಿ ಅಧಿಕಾರವನ್ನೂ ಪಡೆಯಿತು. ಬಳಿಕ, ಗೋಭಕ್ಷಕರ ಪರ ನಿಂತಿತು. ಕೈ ಪಕ್ಷಕ್ಕೆ ಗೋಮಾತೆಯ ಶಾಪವಿದೆ. ಕಾಂಗ್ರೆಸ್‌ಗೆ ಈ ಮೂರೂ ಶಾಪವಿದೆ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಒಂದು ಕಾಲದಲ್ಲಿ 1,900 ಕಾಂಗ್ರೆಸ್ ಶಾಸಕರಿದ್ದರು. ಬಿಜೆಪಿಯಿಂದ ಕೇವಲ 100 ಶಾಸಕರಿದ್ದರು. ಆದರೆ, ಈಗ 1,900 ಬಿಜೆಪಿ ಶಾಸಕರಿದ್ದರೆ, 700 ಜನ ಕಾಂಗ್ರೆಸ್ ಶಾಸಕರಿದ್ದಾರೆ. ಮೋದಿ‌ ಕಾಲದಲ್ಲಿ ಜನ ಬಿಜೆಪಿಯ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.