ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ ಬಾಂಬ್!
ಪಕ್ಷಾಂತರಿಗಳು ನಮ್ಮ ಸಂಪರ್ಕದಲ್ಲಿ: ಸಿದ್ದು ‘ಬಾಂಬ್’| ಈ ಶಾಸಕರಿಗೆ ಬಿಜೆಪಿ ವಿದ್ಯಮಾನ, ಬಿಎಸ್‌ವೈ ಬಗ್ಗೆ ಅಸಮಾಧಾನ| ಸಮಸ್ಯೆ ಹೇಳಿದರೆ ಮಗನ ಬಳಿ ಹೋಗಿ ಅಂತಾರಂತೆ ಬಿಎಸ್‌ವೈ| ಇದನ್ನು ನನ್ನ ಬಳಿ ಹೇಳಿಕೊಂಡ ಪಕ್ಷಾಂತರಿಗಳು| ನಾವು ಸರ್ಕಾರ ಬೀಳಿಸಲ್ಲ| ‘ಸುವರ್ಣ ನ್ಯೂಸ್’ ಫೋನ್ ಇನ್‌ನಲ್ಲಿ ಸಿದ್ದು ಹೇಳಿಕೆ
ಬೆಂಗಳೂರು(ಜೂ.03): ‘‘ಜನತಾ ಪರಿವಾರದ ಹಿನ್ನೆಲೆಯಿರುವ ಹಾಗೂ ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರ ಮಾಡಿದ್ದ ಕೆಲವು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿ ಇರುವುದು ನಿಜ. ಈ ಶಾಸಕರು ಬಿಜೆಪಿಯಲ್ಲಿ ಬೆಳವಣಿಗೆಗಳ ಬಗ್ಗೆ ತಮ್ಮ ಬಳಿ ಅಸಮಾಧಾನ ವ್ಯಕ್ತಪಡಿಸಿರುವುದೂ ನಿಜ. ಈ ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನವಿರುವುದೂ ನಿಜ’’
ಹೀಗೆಂದು ಹೊಸ ಬಾಂಬ್ ಸಿಡಿಸಿದ್ದಾರೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ.
ಮಂಗಳವಾರ ಕನ್ನಡಪ್ರಭದ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಆಯೋಜಿಸಿದ್ದ ಪೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಬಗ್ಗೆ ಅಸಮಾಧಾನ ಇರುವುದು ನಿಜ. ಕೆಲ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡು ಅವರ ಬಳಿಗೆ ಹೋದರೆ ತಮ್ಮ ಮಗ (ವಿಜಯೇಂದ್ರ)ನ ಬಳಿಗೆ ಹೋಗಿ ಎನ್ನುತ್ತಾರಂತೆ. ಯಡಿಯೂರಪ್ಪ ಅವರು ಈಗ ಮೊದಲಿನಂತೆ ಇಲ್ಲ. ಇದರಿಂದ ಕ್ಷೇತ್ರದಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಕಾಂಗ್ರೆಸ್ ಮತ್ತು ಜನತಾ ಪರಿವಾರದಿಂದ ಬಿಜೆಪಿಗೆ ಹೋಗಿರುವ ಕೆಲವು ಶಾಸಕರು ತಮ್ಮಲ್ಲಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ಕೆಲವು ದಿನಗಳ ಹಿಂದೆ ಬಿಜೆಪಿಯ 27 ಶಾಸಕರು ಸಭೆ ಸೇರಿದ್ದರು. ಈ ಭಿನ್ನಮತ ಎಲ್ಲಿಯವರೆಗೆ ಮುಂದುವರೆಯುತ್ತದೆಯೋ ಗೊತ್ತಿಲ್ಲ. ಆದರೆ ಸರ್ಕಾರ ಬೀಳಿಸುವ ಉದ್ದೇಶವಿಲ್ಲ. ಬದಲಿಗೆ ಮುಖ್ಯಮಂತ್ರಿ ಬದಲಾಗಬೇಕು ಅನ್ನುತ್ತಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್‌ಗೆ ಸರ್ಕಾರ ಬೀಳಿಸಲ್ಲ. ಭಿನ್ನಮತದಿಂದ ಸರ್ಕಾರ ಪತನವಾದರೆ ಅದಕ್ಕೆ ನಾವು ಕಾರಣವಾಗುವುದಿಲ್ಲ ಎಂದು ಹೇಳಿದರು.
ನಾನೀಗ ಮುಖ್ಯಮಂತ್ರಿಯಾಗಿದ್ದರೆ..:
ಯಡಿಯೂರಪ್ಪ ಅವರು ಘೋಷಿಸಿರುವ 1,610 ಕೋಟಿಯ ವಿಶೇಷ ಪ್ಯಾಕೇಜ್‌ನಲ್ಲಿ ರಾಜ್ಯದ ಎಲ್ಲ ಬಡ ಜನರಿಗೆ ನೆರವು ನೀಡಿಲ್ಲ. 60 ಸಾವಿರ ಮಡಿವಾಳರು, 2.30 ಲಕ್ಷ ಕ್ಷೌರಿಕರು, 7.5 ಲಕ್ಷ ಆಟೋ ಚಾಲಕರು ಹೀಗೆ ಕೆಲವರಿಗೆ ಮಾತ್ರ ಪರಿಹಾರ ಘೋಷಿಸಿದ್ದಾರೆ. ರಾಜ್ಯದ ಆರ್ಥಿಕತೆಗೆ ಉಪಯೋಗವಾಗುವಂತೆ ವಿಶೇಷ ಪ್ಯಾಕೇಜ್ ಘೋಷಿಸಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ 1.32 ಕೋಟಿ ಅಸಂಘಟಿತ ಕಾರ್ಮಿಕರು, 22 ಲಕ್ಷ ಕಟ್ಟಡ ಕಾರ್ಮಿಕರು ಇದ್ದಾರೆ. ಸರ್ಕಾರ ಘೋಷಿಸಿರುವ 1610 ಕೋಟಿ ರು.ಪ್ಯಾಕೇಜಿನಲ್ಲಿ ಈವರೆಗೆ ಯಾವೊಬ್ಬರಿಗೂ ಒಂದು ರು.ತಲುಪಿಲ್ಲ. ಕೆಲವು ವರ್ಗದ ಜನರಿಗೆ ಘೋಷಿಸಿರುವ ಸಹಾಯಧನವೂ ಕೂಡ ಕೈಸೇರಿಲ್ಲ. ನಾನು ಈಗ ಮುಖ್ಯಮಂತ್ರಿಯಾಗಿದ್ದರೆ ರಾಜ್ಯದ ಆರ್ಥಿಕತೆಗೆ ಪೂರಕವಾಗಿ ಒಂದು ಕೋಟಿ ಕುಟುಂಬಗಳ ಖಾತೆಗೆ ತಲಾ 10 ಸಾವಿರ ರು.ಗಳನ್ನು ಕೊಡುತ್ತಿದ್ದೆ. ಇದರಿಂದ ಜನರಿಗೆ ಕೊಳ್ಳುವ ಶಕ್ತಿ ಬಂದು ಆರ್ಥಿಕತೆ ಉತ್ತಮಗೊಳ್ಳುತ್ತಿತ್ತು ಎಂದರು.
ಈ ಪ್ರಮಾಣದಲ್ಲಿ ಕುಟುಂಬಗಳಿಗೆ ಹಣ ನೀಡಲು 10 ಸಾವಿರ ಕೋಟಿ ರು. ಬೇಕಾಗುತ್ತಿತ್ತು. ರಾಜ್ಯ ಸರ್ಕಾರ 53 ಸಾವಿರ ಕೋಟಿ ರು.ಸಾಲ ತೆಗೆದುಕೊಳ್ಳಲು ಅವಕಾಶವಿದೆ. ಸಂಕಷ್ಟದ ಸಮಯದಲ್ಲಿ ಅದನ್ನು ಬಳಕೆ ಮಾಡಬಹುದಿತ್ತು ಎಂದು ಹೇಳಿದರು.
ಕೊರೋನಾ ನಿಯಂತ್ರಿಸುವಲ್ಲಿ ವಿಫಲ:
ಲಾಕ್‌ಡೌನ್ ಘೋಷಣೆ ಸರಿಯಾಗಿದೆ. ಆದರೆ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಲಾಕ್‌ಡೌನ್ ಘೋಷಿಸಿದ ಬಗ್ಗೆ ನನ್ನ ತಕರಾರು ಇದೆ. ಜ.29ಕ್ಕೆ ಕೇರಳದಲ್ಲಿ ಕೊರೋನಾ ಕಂಡು ಬಂದಿತ್ತು. ಆ ನಂತರ ಫೆಬ್ರವರಿ -ಮಾಚ್‌ರ್ 24ರ ವರೆಗೆ ಸುಧಾರಣೆಗೆ ಸಮಯವಿತ್ತು. ಈ ಅವಧಿಯಲ್ಲೇ ಟ್ರಂಪ್ ಗುಜರಾತ್ ಬಂದಿದ್ದು ಸರಿಯಿಲ್ಲ. ಎಲ್ಲ ರೀತಿಯ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಲ್ಲಿಸಲು ಕ್ರಮಕೈಗೊಳ್ಳಬೇಕಿತ್ತು. ಇದು ಆಗಿದ್ದರೆ ಕೊರೋನಾ ಸೋಂಕು ಇಷ್ಟು ಹರಡುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಡಿಕೆಶಿ-ನಾನು ದೋಸ್ತಿಗಳು
ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವಿನ ಸಂಬಂಧ ಚೆನ್ನಾಗಿದೆ. ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ಕೊಡಬೇಕು ಎಂದು ನಾನು ಹೇಳಿದ್ದು ನಿಜ. ಅದರಿಂದ ರಾಜಕೀಯವಾಗಿ ಉಪಯೋಗವಾಗುತ್ತದೆ ಎಂಬುದು ನನ್ನ ಲೆಕ್ಕಾಚಾರವಾಗಿತ್ತು. ಹಾಗೆಂದು ಶಿವಕುಮಾರ್‌ಗೆ ಕೊಡಬಾರದು ಎಂದು ನಾನೆಲ್ಲೂ ಹೇಳಿಲ್ಲ.
- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ