ಬೊಮ್ಮಾಯಿ ನೇತೃತ್ವದ ಮೊದಲ ಬಿಜೆಪಿ ಶಾಸಕಾಂಗ ಸಭೆ: ಇಲ್ಲಿದೆ ಇನ್‌ಸೈಡ್ ಡಿಟೇಲ್ಸ್
* ಬಿಜೆಪಿ ಶಾಸಕಾಂಗ ಪಕ್ಷದ ಸಭೆ
* ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆ
* ಸಭೆಯಲ್ಲಿ ವಿಪಕ್ಷಗಳನ್ನ ಎದುರಿಸುವ ಕುರಿತು ಮಾತುಕತೆ
ಬೆಂಗಳೂರು, (ಸೆ.13): ವಿಧಾನಸಭೆ ಅಧಿವೇಶ ಪ್ರಾರಂಭವಾಗಿದ್ದರಿಂದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು (ಸೆ.13) ನಡೆಯಿತು.
ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಿಎಲ್ಪಿ ಸಭೆ ಇದಾಗಿದ್ದು, ಸಭೆಯಲ್ಲಿ ವಿಪಕ್ಷಗಳನ್ನ ಎದುರಿಸುವ ಕುರಿತು ಮಾತುಕತೆ ನಡೆಸಲಾಗಿದೆ.
ವಿಪಕ್ಷಗಳಿಗೆ ತಕ್ಕ ಉತ್ತರ ಕೊಡಲು ಸಭೆಯಲ್ಲಿ ತಂತ್ರಗಾರಿಕೆ ಹೆಣೆಯುವ ಬಗ್ಗೆ ಚರ್ಚಿಸಲಾಗಿದೆ. ಸಚಿವರು ಸರ್ಕಾರವನ್ನು ಸಮರ್ಥಿಸಿಕೊಳ್ಳುವ ಕುರಿತು ಚರ್ಚೆ ಮಾಡಲಾಗಿದೆ. ಸಚಿವರು, ಶಾಸಕರು ಸರ್ಕಾರದ ಬೆನ್ನಿಗೆ ನಿಲ್ಲುವಂತೆ ಸೂಚನೆ ಕೊಡಲಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.
ಶಾಸಕರಿಗೆ ಬಿಎಸ್‌ವೈ ಮನವಿ
ಸದನದಲ್ಲಿ ಸರ್ಕಾರಕ್ಕೆ ಮುಜುಗರ ಆಗುವ ಪ್ರಶ್ನೆ ಕೇಳಬೇಡಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಭೆಯಲ್ಲಿ ಶಾಸಕರಿಗೆ ಮನವಿ ಮಾಡಿದರು. ನಾವೆಲ್ಲಾ ಒಟ್ಟಾಗಿ ಹೋಗೊಣ. ಮುಂದಿನ ಚುನಾವಣೆಗೆ ಎಲ್ಲಾ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಶಾಸಕರಿಗೆ ಕಟೀಲ್ ತಾಕೀತು
ಇನ್ನು ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದು, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ವ್ಯಾಕ್ಸಿನ್ ನೀಡಿದ ಬಳಿಕ ನೀವು ಕೇವಲ ನಿಮ್ಮ ಫೋಟೊ ಹಾಕಿಕೊಳ್ಳುತ್ತೀರಿ. ಆದ್ರೆ, ವ್ಯಾಕ್ಸಿನ್ ನೀಡಿದ್ದು ಪ್ರಧಾನಿ ಮೋದಿ. ಅವರ ಫೋಟೊ ಕೂಡ ಹಾಕಿ ಎಂದು ಶಾಸಕರಿಗೆ ತಾಕೀತು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಬ್ಬರಿಸಿದ ರೇಣುಕಾಚಾರ್ಯ
ಇನ್ನು ಸಚಿವರು ನಮಗೆ ಸರಿಯಾಗಿ ಸಿಗ್ತಾ ಇಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಭೆಯಲ್ಲಿ ಗುಡುಗಿದ್ದಾರೆ. ನಮ್ಮ ಕೆಲಸ ತಗೊಂಡು ಬಂದ್ರೆ ಸಚಿವರು ಕೈಗೆ ಸಿಗಲ್ಲ ಎಂದು ದೂರಿದರು. ಇದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಆಯ್ತು ರೇಣುಕಾ ಸರಿ ಮಾಡೋಣ ಕೂತ್ಕೊ ಎಂದಿದ್ದಾರೆ.
ಸದ್ದು ಮಾಡಿದ ಕೌನ್ಸಿಲಿಂಗ್
ಶಿಕ್ಷಕರ ವರ್ಗಾವಣೆ ಮಾದರಿಯಲ್ಲಿ ನರ್ಸಿಂಗ್ ಗೂ ಕೌನ್ಸಿಲಿಂಗ್ ಮಾಡಬೇಡಿ ಎಂದು ಕುಮಟಾ ಶಾಸಕ ದಿನಕರ್ ಶೆಟ್ಟಿ ಮನವಿ ಮಾಡಿದ್ದಾರೆ. ಬಳಿಕ ಎಲ್ಲಾ ಶಾಸಕರು ಹೌದು ಈ ಕೌನ್ಸಿಲಿಂಗ್ ಮಾದರಿ ರದ್ದು ಮಾಡಿ ಎಂದು ಒಕ್ಕೊರಲ ಮನವಿ ಮಾಡಿದರು. ಕೌನ್ಸಿಲಿಂಗ್ ಮೂಲಕ ಮಾಡಿದ್ರೆ ನಮ್ಮ ನಮ್ಮ ಕ್ಷೇತ್ರದಲ್ಲಿ ಸಹಾಯ ಕೇಳಿ ಬರೋರಿಗೆ ಸಹಾಯ ಮಾಡೋಕೆ ಆಗೋದಿಲ್ಲ. ಆ ಕೌನ್ಸಿಲಿಂಗ್ ಮಾದರಿ ರದ್ದು ಮಾಡಿ ಎಂದ ದಿನಕರ್ ಶೆಟ್ಟಿ ಆಗ್ರಹಿಸಿದರು. ರದ್ದಾಗಲೇಬೇಕು ಎಂದು ಜೋರಾಗಿ ಹೇಳಿದಾಗ, ಆಯ್ತು ನನಗೆ ಕೇಳಿಸ್ತದೆ ಕುಳಿತುಕೊಳ್ಳಿ ಎಂದ ಸಿಎಂ ಬೊಮ್ಮಾಯಿ ಉತ್ತರಿಸಿದರು.